ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು: ರಾಜ್ಯದಲ್ಲಿಯೇ ಅತಿ ಹೆಚ್ಚು ಮೊರಾರ್ಜಿ ಶಾಲೆ ಹೊಂದಿರುವ ತಾಲ್ಲೂಕು

ಮಂಜುನಾಥ ಎಸ್.ಅಂಗಡಿ
Published 20 ಮೇ 2024, 5:01 IST
Last Updated 20 ಮೇ 2024, 5:01 IST
ಅಕ್ಷರ ಗಾತ್ರ

ಕುಕನೂರು: ತಾಲ್ಲೂಕಿನ ತಳಕಲ್ ಗ್ರಾಮದ ಹೊರ ವಲಯದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ನಿರಂತವಾಗಿ ಶೇ 100ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದೆ.

2023-24ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಈ ಶಾಲೆಯ ವಿದ್ಯಾರ್ಥಿನಿ ವಾಹಿದಾ ಜಾಕಿರ್ ಹುಸೇನ್ ಕೊಪ್ಪಳ 609 ಅಂಕ ಪಡೆಯುವ ಮೂಲಕ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಶಾಲೆಯಲ್ಲಿ ಪ್ರಸಕ್ತ ವರ್ಷ ಒಟ್ಟು 49 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 30 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದ ಆರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದು, ಶೇ 100ರಷ್ಟು ಫಲಿತಾಂಶ ಬಂದಿದೆ ಎಂದು ಶಾಲೆಯ ಪ್ರಾಚಾರ್ಯರಾದ ಕವಿತಾ ಬಿ. ತಿಳಿಸಿದ್ದಾರೆ.

4 ವರ್ಷದಿಂದ ಶೇ 100 ಫಲಿತಾಂಶ: ‘ಶಾಲೆಯಲ್ಲಿ ಕಳೆದ 4 ವರ್ಷಗಳಿಂದ ನಿರಂತರವಾಗಿ ಶೇ 100ರಷ್ಟು ಫಲಿತಾಂಶ ಬಂದಿದೆ. ಜಿಲ್ಲಾ ಮಟ್ಟದಲ್ಲಿ ಶಾಲೆಗೆ ಉತ್ತಮ ಹೆಸರಿದ್ದು, ಉತ್ತಮ ಬೋಧನೆ ಮಾಡುವಂತಹ ಶಿಕ್ಷಕರ ತಂಡ ಇದೆ. ಶಾಲೆಯಲ್ಲಿ ಬಯೊಮೆಟ್ರಿಕ್‌ ಯಂತ್ರ ಅಳವಡಿಸಿರುವುದರಿಂದ ಯಾವುದೇ ಕಾರಣಕ್ಕೂ ಶಿಕ್ಷಕರು ಗೈರಾಗುವಂತಿಲ್ಲ. ನಿತ್ಯ ಮಕ್ಕಳು ಸಹ ಬಯೊಮೆಟ್ರಿಕ್‌ ಹಾಜರಾತಿ ಹಾಕಬೇಕು.

ಅಲ್ಲದೇ ಶಾಲೆಯ ವಿದ್ಯಾರ್ಥಿಗಳು ಅನೇಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ವಿಭಾಗ ಮಟ್ಟದಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಬರೀ ಪಾಠ, ಪ್ರವಚನದಲ್ಲಿಯೇ ತೊಡಗಿಸದೇ ಅವರು ದೈಹಿಕವಾಗಿಯೂ ಸದೃಢವಾಗಿ ಬೆಳೆಯಬೇಕು ಎಂದು ನಿತ್ಯ ದೈಹಿಕ ಶಿಕ್ಷಣ ಚಟುವಟಿಕೆಗಳಿಗೂ ಮಹತ್ವ ನೀಡಲಾಗುತ್ತಿದೆ.

ಶೈಕ್ಷಣಿಕ ಪ್ರಗತಿಗೆ ಪೂರಕ ಅಂಶಗಳು: ನಿತ್ಯ ಪರೀಕ್ಷೆ, ನಾಲ್ಕು ಪೂರಕ ವಾರ್ಷಿಕ ಪರೀಕ್ಷೆಗಳು, ಬೆಳಿಗ್ಗೆ ಹಾಗೂ ರಾತ್ರಿ ಪಾಠ, ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ಹೆಚ್ಚಿನ ಪಾಠ ಬೋಧನೆಯು ಸತತವಾಗಿ ನೂರಕ್ಕೆ ನೂರು ಫಲಿತಾಂಶ ಬರಲು ಕಾರಣವಾಗಿದೆ.

ಶಾಸಕ ಬಸವರಾಜ ರಾಯರಡ್ಡಿ ಅವರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು 2007ರಲ್ಲಿ ತಾಲ್ಲೂಕಿನಲ್ಲಿ ಪ್ರಾರಂಭಿಸಿದರು. 2010–11ರಲ್ಲಿ ಈ ಶಾಲೆಯಿಂದ ಪ್ರಥಮ ತಂಡ ಹೊರಹೋಗಿದೆ. ಅಲ್ಲಿಂದ ಇಲ್ಲಿವರೆಗೆ ಸುಮಾರು 14 ಬ್ಯಾಚ್‌ಗಳು ತೇರ್ಗಡೆಯಾಗಿವೆ. ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿರುವ ಯುವಕರಲ್ಲಿ ಅನೇಕರು ಸರ್ಕಾರಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ 13 ವರ್ಷಗಳ ಹಿಂದೆಯೇ ಸ್ಥಳೀಯ ನಿವಾಸಿ ಶಂಕರಡ್ಡೆಪ್ಪ ಚನ್ನಪ್ಪ ಗಡಿಗಿ ಎನ್ನುವ ರೈತ ಶಾಲಾ ಕಟ್ಟಡಕ್ಕೆ ಸುಮಾರು 7 ಎಕರೆ ಜಮೀನು ನೀಡಿದ್ದಾರೆ. ಈ ಜಾಗ ದೊರಕಿಸಿ ಕೊಡುವಲ್ಲಿ ತಿಮ್ಮಣ್ಣ ಚೌಡಿ ವೀರನಗೌಡ ಅವರ ಸಹಕಾರವಿದೆ. ಅದರಲ್ಲಿ 4 ಎಕರೆಯಲ್ಲಿ ವಸತಿ ಶಾಲೆ ನಿರ್ಮಿಸಲಾಗಿದೆ. ಉಳಿದ ಜಮೀನಿನಲ್ಲಿ‌ ವಿವಿಧ ತರಹದ ಗಿಡಗಳು ಬೆಳೆದು ಸುಂದರ ಪರಿಸರ ಕಾಣುತ್ತಿದೆ.

ವಾಹಿದಾ ಜಾಕಿರ್ ಹುಸೇನ್ ಕೊಪ್ಪಳ (ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ)
ವಾಹಿದಾ ಜಾಕಿರ್ ಹುಸೇನ್ ಕೊಪ್ಪಳ (ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ)
ಸತತ ಅಧ್ಯಯನ, ನಿತ್ಯ ಪರೀಕ್ಷೆ ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದು ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ
ಶಿಕ್ಷಕರು ಸ್ಪರ್ಧಾತ್ಮಕ ಮನೋಭಾವದಿಂದ ಬೋಧನೆ ಮಾಡಿ ನಮಗೆ ಓದಿನ ಕಡೆ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡುತ್ತಿದ್ದರು. ಅದರಲ್ಲೂ ಆಗಿನ ಪ್ರಾಚಾರ್ಯರಾಗಿದ್ದ ಮಂಜುನಾಥ್ ಅಂಗಡಿ ಅವರ ಮಾರ್ಗದರ್ಶನದಿಂದ ನಾನು ವೈದ್ಯನಾಗುವಂತೆ ಮಾಡಿದೆ. ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ.
ಡಾ.ಸದ್ದಾಮ್ ಹುಸೇನ್ ಹಳೆಯ ವಿದ್ಯಾರ್ಥಿ
ಶಿಕ್ಷಕರಲ್ಲಿ ಕಲಿಸುವ ಹುಮ್ಮಸ್ಸು ವಿದ್ಯಾರ್ಥಿಗಳಲ್ಲಿ ಕಲಿಯುವ ಆಸೆ ಇತ್ತು. ಆದ್ದರಿಂದ ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗಿದೆ. ಕವಿತಾ ಬಿ. ಪ್ರಾಚಾರ್ಯರು ಅಲ್ಪಸಂಖ್ಯಾತರ
ಮೊರಾರ್ಜಿ ದೇಸಾಯಿ ವಸತಿ ಶಾಲೆ ತಳಕಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT