ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಸಣ್ಣ ಪಕ್ಷಗಳಿಂದ ಕಾಣದ ದೊಡ್ಡ ಹೋರಾಟ

ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ, ಪ್ರಮುಖ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ
Published 8 ಏಪ್ರಿಲ್ 2024, 6:19 IST
Last Updated 8 ಏಪ್ರಿಲ್ 2024, 6:19 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಕೊಪ್ಪಳ ಕ್ಷೇತ್ರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸಣ್ಣ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳಿಂದ ಪೈಪೋಟಿ ಕಂಡುಬರುತ್ತಿಲ್ಲ. ಇವುಗಳ ಹೋರಾಟ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಯಾವುದೇ ಹಂತದಲ್ಲಿಯೂ ಸಾಟಿಯಾಗುತ್ತಿಲ್ಲ.

ಕೊಪ್ಪಳ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುಜನ ಸಮಾಜ ಪಕ್ಷ, ಸರ್ವ ಜನತಾ ಪಕ್ಷ, ಮಾರ್ಕ್ಸಿಸ್ಟ್‌ ಲೆನಿನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಕೆಂಪು ಧ್ವಜ), ಉತ್ತಮ ಪ್ರಜಾಕೀಯ ಪಕ್ಷ, ಸಮಾಜವಾದಿ, ಎಎಪಿ, ಭಾರತೀಯ ಡಾ.ಬಿ.ಆರ್‌. ಅಂಬೇಡ್ಕರ್‌ ಪಕ್ಷ, ರಾಷ್ಟ್ರೀಯ ಕ್ರಾಂತಿಕಾರಿ, ಸಮಾಜವಾದಿ, ಸಿಪಿಐ (ಎಂಎಲ್‌) ರೆಡ್‌ ಸ್ಟಾರ್‌, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಹೀಗೆ ಅನೇಕ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.

ಹಿಂದಿನ ಐದು ಚುನಾವಣೆಗಳನ್ನು ಅವಲೋಕಿಸಿ ನೋಡುವುದಾದರೆ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಡಿ.ಎಚ್‌. ಪೂಜಾರ 1999ರ ಹೋರಾಟದಲ್ಲಿ 15,603 ಮತಗಳನ್ನು ಪಡೆದುಕೊಂಡಿದ್ದರು. ನಂತರದ 2004ರ ಚುನಾವಣೆಯಲ್ಲಿ ಕನ್ನಡ ನಾಡು ಪಕ್ಷದಿಂದ ಕಣಕ್ಕಿಳಿದಿದ್ದ ಅಬೀದ್‌ ಹುಸೇನ್‌ 24,669, ಜನತಾ ಪಕ್ಷದ ಗಿರಿಜಾಶಂಕರ ಪಾಟೀಲ 18,517, ಸಿಪಿಐ ಎಂಎಲ್‌ ಪಕ್ಷದ ಡಿ.ಎಚ್‌. ಪೂಜಾರ 23,651 ಮತಗಳನ್ನು ಗಳಿಸಿದ್ದರು.

ಈ ಮೂವರೂ ಅಭ್ಯರ್ಥಿಗಳು ಸೇರಿ ಗಳಿಸಿದ ಮತಗಳ ಪ್ರಮಾಣ ಮೂರನೇ ಸ್ಥಾನ ಗಳಿಸಿದ್ದ ಅಭ್ಯರ್ಥಿಗಿಂತಲೂ ಕಡಿಮೆಯಿದೆ. ಈ ಚುನಾವಣೆಯಲ್ಲಿ ಕೆ. ವಿರೂಪಾಕ್ಷಪ್ಪ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸಂಸದರಾಗಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ನಾಗಪ್ಪ ಸಾಲೋಣಿ ಎರಡನೇ ಸ್ಥಾನ ಮತ್ತು ಜೆಡಿಎಸ್‌ನಿಂದ ಅಗಡಿ ಸಂಗಣ್ಣ 1,58,552 ಮತಗಳನ್ನು ಪಡೆದು ಮೂರನೇ ಸ್ಥಾನ ಗಳಿಸಿದ್ದರು.

2009ರ ಚುನಾವಣೆಯಲ್ಲಿ ಬಿಜೆಪಿಯಿಂದ ಶಿವರಾಮಗೌಡ ಸಂಸದರಾದರೂ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಶರಬಯ್ಯ (11,892), ಬಿಎಸ್‌ಪಿಯ ಶಿವಪುತ್ರಪ್ಪ ಗುಮಗೇರಾ (10,377) ಮತಗಳನ್ನು ಪಡೆದುಕೊಂಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹೊರತುಪಡಿಸಿ ಒಟ್ಟು 15 ಸ್ಪರ್ಧಿಗಳು ಕಣದಲ್ಲಿದ್ದರು.

2014ರ ಚುನಾವಣೆಯಲ್ಲಿ ಬಿಜೆಪಿಯಿಂದ ಸಂಗಣ್ಣ ಕರಡಿ, ಕಾಂಗ್ರೆಸ್‌ನಿಂದ ಬಸವರಾಜ ಹಿಟ್ನಾಳ ಸೇರಿ ಒಟ್ಟು 16 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಬಹುಜನ ಸಮಾಜ ಪಕ್ಷದಲ್ಲಿದ್ದ ಸೈಯದ್‌ ಆರಿಫ್‌ 9,529, ಪಕ್ಷೇತರರಾಗಿದ್ದ ಸುರೇಶ್‌ 8,292 ಮತ್ತು ವಿ. ಗೋವಿಂದ 6300 ಮತಗಳನ್ನು ಪಡೆದುಕೊಂಡಿದ್ದರರು.

ಉಳಿದಂತೆ ಭಾರತೀಯ ಡಾ. ಬಿ.ಆರ್‌. ಅಂಬೇಡ್ಕರ್‌ ಪಕ್ಷದ ತಿಮ್ಮಪ್ಪ ಉಪ್ಪಾರ, ರಾಷ್ಟ್ರೀಯ ಕ್ರಾಂತಿಕಾರಿ ಸಮಾಜವಾದಿ ಪಕ್ಷದ ನಜೀರ್ ಹುಸೇನ್‌, ಸಿಪಿಐ (ಎಂಎಲ್‌) ರೆಡ್‌ ಸ್ಟಾರ್‌ ಪಕ್ಷದ ಡಿ.ಎಚ್‌. ಪೂಜಾರ, ಸಿಪಿಐ (ಎಂಎಲ್‌) ಲಿಬರೇಷನ್‌ ಭಾರದ್ವಾಜ್‌, ಸಮಾಜವಾದಿ ಪಕ್ಷದ ಕೆ.ಎಂ. ರಂಗನಾಥರೆಡ್ಡಿ, ಎಎಪಿಯ ಶಿವಕುಮಾರ ತೋಂಟಾಪುರ, ಪಕ್ಷೇತರರಾಗಿ ಅಣ್ಣೋಜಿರಾವ್, ಗೋವಿಂದರೆಡ್ಡಿ ಪಚ್ಚರಳ್ಳಿ, ನಾಗಪ್ಪ ಕಾರಟಗಿ ಮತ್ತು ಸುರೇಶ್ ಇವರೆಲ್ಲರೂ ನೋಟಾ (ಮೇಲಿನವರು ಯಾರೂ ಅಲ್ಲ)ಕ್ಕಿಂತಲೂ ಕಡಿಮೆ ಮತಗಳನ್ನು ಪಡೆದುಕೊಂಡಿದ್ದರು. ಆ ಚುನಾವಣೆಯಲ್ಲಿ ನೋಟಾಕ್ಕೆ 12,947 ಮತಗಳು ಲಭಿಸಿದ್ದವು!

ವಿಧಾನಸಭೆ, ಲೋಕಸಭೆ ಹೀಗೆ ಪ್ರತಿ ಚುನಾವಣೆಗಳಲ್ಲಿಯೂ ಸಣ್ಣ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧೆಯ ಹುಮ್ಮಸ್ಸು ತೋರಿಸುತ್ತಿದ್ದಾರೆ. ಲೋಕಸಭಾ ವ್ಯಾಪ್ತಿ ಎಂಟು ವಿಧಾನಸಭಾ ಕ್ಷೇತ್ರಗಳಷ್ಟು ದೊಡ್ಡದಾದ ಕಾರಣ ಗೆಲ್ಲುವ ಅಭ್ಯರ್ಥಿಗಳಿಗೆ ಸರಿಸಾಟಿಯಾಗುವಷ್ಟು ಮತಗಳನ್ನು ಪಡೆಯುವಷ್ಟು ಪೈಪೋಟಿ ಇತ್ತೀಚೆಗಿನ ಚುನಾವಣೆಗಳಲ್ಲಿ ಕಂಡುಬಂದಿಲ್ಲ.

ರಾಮಾಂಜನಪ್ಪ ಆಲ್ದಳ್ಳಿ
ರಾಮಾಂಜನಪ್ಪ ಆಲ್ದಳ್ಳಿ
ಈಗಿನ ಚುನಾವಣೆಗಳಲ್ಲಿ ಹಣ ತೋಳ್ಬಲದ ಶಕ್ತಿ ಜಾಸ್ತಿಯಾಗಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷಗಳು ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸುತ್ತಿವೆ. ಈ ಬಾರಿ ಸ್ಪರ್ಧೆ ಮಾಡದೇ ಕೋಮುವಾದಿ ಬಿಜೆಪಿ ಸೋಲಿಸಲು ನಿರ್ಧರಿಸಲಾಗಿದೆ.
ಡಿ.ಎಚ್‌. ಪೂಜಾರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ
ದೊಡ್ಡ ಪಕ್ಷಗಳ ಎದುರು ರಾಜಕೀಯವಾಗಿ ಸಣ್ಣ ಪಕ್ಷಗಳಿಗೆ ಹೋರಾಟ ಈಗಿನ ದಿನಮಾನಗಳಲ್ಲಿ ಕಷ್ಟವಾದರೂ ಹೋರಾಟವನ್ನಂತೂ ನಿಲ್ಲಿಸಿಲ್ಲ. ಜನಪರ ಚಳವಳಿಗಳ ಮೂಲಕ ಅಧಿಕಾರದ ಗದ್ದುಗೆಯೇರಿದ ಪಕ್ಷಗಳಿಗೆ ಬಿಸಿ ಮುಟ್ಟಿಸುವ ಕೆಲಸ ನಿರಂತರ.
ರಾಮಾಂಜನಪ್ಪ ಆಲ್ದಳ್ಳಿ ಎಸ್‌ಯುಸಿಐ (ಕಮ್ಯುನಿಸ್ಟ್‌) ರಾಜ್ಯ ಕಾರ್ಯದರ್ಶಿ
ಪಕ್ಷೇತರರಾಗಿ ಗೆಲುವು ಪಡೆದಿದ್ದ ಮೊದಲ ಸಂಸದ
ಚುನಾವಣಾ ಆರಂಭದಿಂದಲೂ ಕೊಪ್ಪಳ ಲೋಕಸಭಾ ಕ್ಷೇತ್ರ ವಿಭಿನ್ನ ಇತಿಹಾಸ ಹೊಂದಿದೆ. 1952ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪ್ರಭಾವ ವ್ಯಾಪಕವಾಗಿದ್ದ ಕಾಲದಲ್ಲಿಯೂ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಗೆಲುವು ಪಡೆದಿದ್ದರು. ಇವರೇ ಈ ಕ್ಷೇತ್ರದ ಮೊದಲ ಸಂಸದ ಎನ್ನುವ ಹೆಮ್ಮೆ ಹೊಂದಿದ್ದಾರೆ. ಅವರು ತಮ್ಮ ಮೊದಲ ಚುನಾವಣೆಯಲ್ಲಿ ಭಾ.ರಾ.ಕಾಂ. ಪಕ್ಷದ ಮಾಧವರಾವ್‌ ಅನ್ವರಿ ಅವರನ್ನು ಮಣಿಸಿದ್ದರು. 1957ರ ಎರಡನೇ ಚುನಾವಣೆಯಲ್ಲಿ ಸಂಗಣ್ಣ ಅಗಡಿ ಅವರು ಗೆಲುವು ಪಡೆದಿದ್ದರೂ ಪಕ್ಷೇತರರಾಗಿ ಎರಡನೇ ಬಾರಿಗೆ ಸ್ಪರ್ಧಿಸಿದ್ದ ಶಿವಮೂರ್ತಿಸ್ವಾಮಿ ಅವರು 10467 ಮತಗಳಿಂದ ಮಾತ್ರ ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT