ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಕೊಪ್ಪಳದಲ್ಲಿ ಬಿಜೆಪಿಗೆ ಆಂತರಿಕ ಬೇಗುದಿಯೇ ಸವಾಲು

ಅಭ್ಯರ್ಥಿ ಘೋಷಣೆಯಾದರೂ ಆರಂಭವಾಗದ ಪ್ರಚಾರ, ಮುಗಿಯದ ಮುನಿಸು
Published 15 ಮಾರ್ಚ್ 2024, 5:45 IST
Last Updated 15 ಮಾರ್ಚ್ 2024, 5:45 IST
ಅಕ್ಷರ ಗಾತ್ರ

ಕೊಪ್ಪಳ: ಕೆಲ ದಿನಗಳಲ್ಲಿ ಘೋಷಣೆಯಾಗಲಿರುವ ಲೋಕಸಭಾ ಚುನಾವಣೆಯ ಟಿಕೆಟ್‌ ಯಾರಿಗೆ ಸಿಗುತ್ತದೆ ಎನ್ನುವ ಕುತೂಹಲಕ್ಕೆ ಬಿಜೆಪಿಯಲ್ಲಿ ತೆರೆಬಿದ್ದರೂ ಆಂತರಿಕ ಬೇಗುದಿ ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಅಭ್ಯರ್ಥಿಯಿದ್ದರೂ ಪ್ರಚಾರ ಆರಂಭವಾಗಿಲ್ಲ.

ಸತತ ಎರಡು ಬಾರಿ ಸಂಸದರಾಗಿರುವ ಸಂಗಣ್ಣ ಕರಡಿ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಬಸವರಾಜ ಕ್ಯಾವಟರ್‌ ಅವರು ಈ ಬಾರಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಹೈಕಮಾಂಡ್‌ ಬಸವರಾಜ ಅವರಿಗೆ ಟಿಕೆಟ್‌ ಘೋಷಣೆ ಮಾಡಿದೆ.

ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಕೊಪ್ಪಳ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಗೆ ಒಂದು ದಿನವಷ್ಟೇ ಬಾಕಿಯಿದ್ದಾಗ ಟಿಕೆಟ್‌ ಘೋಷಣೆಯಾಗಿತ್ತು. ಆಗ ಪ್ರಚಾರಕ್ಕೆ ತೊಡಕಾಗಿತ್ತು. ಆದ್ದರಿಂದ ಲೋಕಸಭಾ ಚುನಾವಣೆಗೆ ವರಿಷ್ಠರು ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿಯನ್ನು ಅಂತಿಮಗೊಳಿಸಿದರೂ ಪಕ್ಷದ ಆಂತರಿಕ ಭಿನ್ನಮತ ಶಮನವಾಗುತ್ತಿಲ್ಲ.

ಬಿಜೆಪಿ ಅನೇಕ ಕಾರ್ಯಕರ್ತರು ಹಾಗೂ ಸಂಗಣ್ಣ ಅವರ ಬೆಂಬಲಿಗರು ಸಾಮಾಜಿಕ ತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಕೊಪ್ಪಳ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಬದಲಾವಣೆಗೆ ಕಾರಣವಾಗಿದ್ದು ಸ್ವಾಗತಾರ್ಹ ಎಂದು ಹೇಳುತ್ತಿದ್ದಾರೆ. ಮತ್ತಷ್ಟು ಕಾರ್ಯಕರ್ತರು ಪಕ್ಷ ಅಳೆದು ತೂಗಿ, ಹಲವು ಮಾನದಂಡಗಳು ಮತ್ತು  ಆಂತರಿಕ ವರದಿಗಳನ್ನು ಪರಿಶೀಲಿಸಿಯೇ ಟಿಕೆಟ್‌ ನೀಡಿದೆ. ಆದ್ದರಿಂದ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮುಗಿಯದ ಮುನಿಸು: ಬಸವರಾಜ ರಾಜಕೀಯ ಜೀವನದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆಯಿದ್ದು ಅವರು ಜಿಲ್ಲೆಯ ಜನರಿಗೆ ಹೆಚ್ಚಾಗಿ ಗೊತ್ತಿಲ್ಲ. ಆದ್ದರಿಂದ ಅವರ ಟಿಕೆಟ್ ಕೊಟ್ಟಿದ್ದು ಸರಿಯಲ್ಲ ಎಂದು ಸಂಗಣ್ಣ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಗುರುವಾರ ಬೆಳಿಗ್ಗೆಯಿಂದಲೇ ಸಂಸದರ ಮನೆ ಮುಂದೆ ಜಮಾಯಿಸಿ ಪಕ್ಷದ ವರಿಷ್ಠರು ಮತ್ತು ಸ್ಥಳೀಯ ನಾಯಕರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅರೆಬೆತ್ತಲೆಯಲ್ಲಿ ಪಕ್ಷದ ಕಚೇರಿಗೆ ಬಂದ ಅವರ ಬೆಂಬಲಿಗ ಪಂಪಣ್ಣ ‘ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಸಂಗಣ್ಣ ಅವರಿಗಾಗಿಯೇ ಇಷ್ಟು ವರ್ಷಗಳ ಕಾಲ ದುಡಿದಿದ್ದೇವೆ. ಈಗ ಅವರಿಲ್ಲದ ಚುನಾವಣೆ ಮಾಡುವುದು ಹೇಗೆ? ಈ ಬಾರಿ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ’ ಎಂದು ಆಕ್ರೋಶ ಹೊರಹಾಕಿದರು.

ಸಂಸದರ ಮನೆಯಲ್ಲಿ ಅವರೊಂದಿಗೆ ಚರ್ಚೆಗೆ ಅವಕಾಶ ಸಿಗದ ಕಾರಣಕ್ಕೆ ಸಂಗಣ್ಣ ಅವರೇ ಪಕ್ಷದ ಕಚೇರಿಗೆ ಬರುವೆ. ಅಲ್ಲಿಯೇ ಮಾತನಾಡೋಣ ಎಂದು ಅಭ್ಯರ್ಥಿ ಬಸವರಾಜ ಮತ್ತು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆದ ಕುಷ್ಟಗಿ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಹೇಳಿದ್ದರು. ಸಂಸದರು ಪಕ್ಷದ ಕಚೇರಿಗೆ ಬರುವ ಮೊದಲೇ ಅವರ ಬೆಂಬಲಿಗರು ಕಚೇರಿಯಲ್ಲಿ ದಾಂಧಲೆ ನಡೆಸಿದರು.

ಕೊಪ್ಪಳ ಬಿಜೆಪಿ ಕಚೇರಿಯಲ್ಲಿ ದೊಡ್ಡನಗೌಡ ಪಾಟೀಲ ಡಾ. ಬಸವರಾಜ ಕ್ಯಾವಟರ ನವೀನ ಗುಳಗಣ್ಣನವರ ಮಾತನಾಡಿದರು 
ಕೊಪ್ಪಳ ಬಿಜೆಪಿ ಕಚೇರಿಯಲ್ಲಿ ದೊಡ್ಡನಗೌಡ ಪಾಟೀಲ ಡಾ. ಬಸವರಾಜ ಕ್ಯಾವಟರ ನವೀನ ಗುಳಗಣ್ಣನವರ ಮಾತನಾಡಿದರು 

‘ಬಿಜೆಪಿ ಗೆಲುವು ನಿಶ್ಚಿತ’

ಪಕ್ಷದ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ದೊಡ್ಡನಗೌಡ ಪಾಟೀಲ ’ನಮ್ಮ ಮಾರ್ಗದರ್ಶಕರು ಮತ್ತು ಹಿರಿಯರೂ ಆದ ಸಂಗಣ್ಣ ಕರಡಿ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಈ ಬಾರಿಯೂ ಬಿಜೆಪಿ ಗೆಲ್ಲುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಸಂಗಣ್ಣ ಅವರಿಗೆ ಟಿಕೆಟ್‌ ಸಿಕ್ಕಿಲ್ಲವೆಂಬ ಕಾರಣಕ್ಕೆ ಕೆಲವರು ಅಸಮಾಧಾನಗೊಂಡಿದ್ದಾರೆ. ಅವರೂ ನಮ್ಮ ಕಾರ್ಯಕರ್ತರೇ. ಟಿಕೆಟ್‌ ವಿಚಾರವಾಗಿ ನನ್ನನ್ನು ಸೇರಿದಂತೆ ಇತರ ಮುಖಂಡರ ಅಭಿಪ್ರಾಯವನ್ನು ವರಿಷ್ಠರು ಸಂಗ್ರಹಿಸಿದ್ದಾರೆ. ಪಕ್ಷ ನಿರ್ಧಾರಕ್ಕೆ ಬದ್ಧ’ ಎಂದರು.

ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ಯಾರ ವಿರೋಧವೂ ಇಲ್ಲ. ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಹೋಗುತ್ತೇವೆ. ಈ ಬಾರಿಯೂ ಬಿಜೆಪಿ ಗೆಲ್ಲಲಿದೆ.
–ಡಾ. ಬಸವರಾಜ ಕ್ಯಾವಟರ್‌, ಬಿಜೆಪಿ ಅಭ್ಯರ್ಥಿ ಕೊಪ್ಪಳ ಲೋಕಸಭಾ ಕ್ಷೇತ್ರ
ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇವೆ. ಪಕ್ಷವನ್ನು ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತೇವೆ.
–ನವೀನ್‌ ಗುಳಗಣ್ಣನವರ್‌, ಬಿಜೆಪಿ ಜಿಲ್ಲಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT