ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು: ರೈತರಲ್ಲಿ ಕಾಣದ ಎಳ್ಳ ಅಮಾವಾಸ್ಯೆ ಉತ್ಸಾಹ

ಅನ್ನದಾತರಿಗೆ ಹೊರೆಯಾದ ಬರಗಾಲ, ಹೊಲಗಳಲ್ಲಿ ಒಣಗಿದ ಛಾಯೆ
Published 11 ಜನವರಿ 2024, 7:03 IST
Last Updated 11 ಜನವರಿ 2024, 7:03 IST
ಅಕ್ಷರ ಗಾತ್ರ

ಕುಕನೂರು(ಕೊಪ್ಪಳ): ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸಡಗರಕ್ಕೆ ಎಳ್ಳ ಅಮಾವಾಸ್ಯೆಯೇ ಮುನ್ನುಡಿ. ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ ಜಿಲ್ಲೆಯಾದ್ಯಂತ ಬರಗಾಲದ ಛಾಯೆ. ಹೀಗಾಗಿ ರೈತರಲ್ಲಿ ಹಬ್ಬದ ಸಂಭ್ರಮವಾಗಲಿ ಸಾಂಪ್ರದಾಯಿಕ ಆಚರಣೆಯಾದ ಚರಗ ಚಲ್ಲುವ ಉತ್ಸಾಹವಾಗಲಿ ಕಂಡು ಬರುತ್ತಿಲ್ಲ.

ಪ್ರತಿ ವರ್ಷ ಎಳ್ಳ ಅಮವಾಸ್ಯೆ ರೈತರ ಪಾಲಿಗೆ ಸಂಭ್ರಮ ತರುತ್ತಿತ್ತು. ವರ್ಷಪೂರ್ತಿ ಬರುವ ಫಸಲು ಸಮೃದ್ಧವಾಗಿರಲಿ ಎನ್ನುವ ಹಾರೈಕೆಯೊಂದಿಗೆ ರೈತ ಮಹಿಳೆಯರು ಮನೆಯಲ್ಲಿ ಬಗೆಬಗೆಯ ಖಾದ್ಯ ತಯಾರಿಸಿಕೊಂಡು ಭೂತಾಯಿಗೆ ಪೂಜಿಸಿ ಕುಟುಂಬದವರು ಹಾಗೂ ಬಂಧುಗಳ ಜೊತೆ ಹೊಲದಲ್ಲಿ ಕುಳಿತು ಊಟ ಸವಿಯುತ್ತಿದ್ದರು.

ಹಿಂಗಾರು ಬೆಳೆಯಲ್ಲಿ ಐದು ಕಲ್ಲಿನ ಪಾಂಡವರನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ‘ಹುಲ್ಲು ಹುಲ್ಲಿಗೊ ಚೆಲ್ಲ ಚೆಲ್ಲಂಬರಿಗೊ’ ಎಂದು ಹೇಳುತ್ತಾ ಖಾದ್ಯಗಳನ್ನು ಹೊಲದ ತುಂಬೆಲ್ಲಾ ಚೆಲ್ಲುವುದೇ ಚರಗ. 

ರೈತರು ಹಾಗೂ ಕುಟುಂಬದವರು ಚಕ್ಕಡಿ, ಟ್ರ್ಯಾಕ್ಟರ್​ನಲ್ಲಿ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗುತ್ತಾರೆ. ಎಳ್ಳು ಹಚ್ಚಿದ ರೊಟ್ಟಿ, ಎಳ್ಳು ಕಡುಬು, ಕಡಲೆಗಡುಬು, ಬದನೆಕಾಯಿ ಪಲ್ಲೆ, ಚಟ್ನಿಯಂತಹ ಖಾದ್ಯಗಳ ಬುತ್ತಿ ಕಟ್ಟಿಕೊಂಡು ಹೋಗುತ್ತಾರೆ. ಆದರೆ, ಈ ಬಾರಿ ಮಳೆಯ ಕೊರತೆ ಕಾರಣ ಜಿಲ್ಲೆಯ ಬಹುತೇಕ ಕಡೆ ಹೊಲ ನಳನಳಿಸುತ್ತಿಲ್ಲ. ತೋಟಗಾರಿಕೆ ಬೆಳೆಗಳನ್ನು ಬೆಳೆದ ಭಾಗದಲ್ಲಿ ಮಾತ್ರ ರೈತರಿಗೆ ಹಬ್ಬದ ಆಚರಣೆಗೆ ಅವಕಾಶವಿದೆ.     

ಎಳ್ಳ ಅಮವಾಸ್ಯೆ ಹೊತ್ತಿಗೆ ಹಿಂಗಾರು ಪೈರು ಬೆಳೆದು ನಿಂತಿರುತ್ತದೆ. ಅದರಲ್ಲಿಯೂ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಹುಳ ಬಿದ್ದು ಹಾನಿ ಮಾಡುತ್ತದೆ. ಆದ್ದರಿಂದ ಚರಗ ಚೆಲ್ಲಿ ಕಾಯಿಕೊರಕದ ಹುಳುಗಳ ನಿಯಂತ್ರಣ ಮಾಡಲಾಗುತ್ತದೆ. ಆದರೆ ಈ ಬಾರಿ ಇಂಥ ಸಂಭ್ರಮ ಬಹಳಷ್ಟು ಕಡೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT