ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: 22 ಅಂಗವಿಕಲ ಜೋಡಿಗೆ ಇಂದು ‘ಕಲ್ಯಾಣ’

ಗವಿಸಿದ್ಧೇಶ್ವರ ಮಠದ ಜಾತ್ರೆಯ ಕಾರ್ಯಕ್ರಮಗಳು ಇಂದಿನಿಂದ, ಸಿದ್ಧಗೊಂಡ ಗವಿಮಠ
Published 21 ಜನವರಿ 2024, 6:39 IST
Last Updated 21 ಜನವರಿ 2024, 6:39 IST
ಅಕ್ಷರ ಗಾತ್ರ

ಕೊಪ್ಪಳ: ಪ್ರತಿವರ್ಷದ ಜಿಲ್ಲೆಯ ಮೊದಲ ಮಹಾಸಂಭ್ರಮ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಭಾನುವಾರ ಆರಂಭವಾಗಲಿದ್ದು, ಇದಕ್ಕಾಗಿ ಮಠವನ್ನು ಅದ್ದೂರಿಯಾಗಿ ಅಲಂಕಾರ ಮಾಡಲಾಗಿದೆ. ಹಸಿರು ಹಾಸು ನೆಲಕ್ಕೆ ಹಾಸಿ ಮಠವನ್ನು ಸುಂದರಗೊಳಿಸಲಾಗಿದೆ.

ಪ್ರತಿ ವರ್ಷ ವಿಭಿನ್ನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುವ ಗವಿಮಠ ಈ ಬಾರಿ 22 ಜನ ಅಂಗವಿಕಲ ಜೋಡಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದು ಈ ಬಾರಿಯ ಜಾತ್ರೆಯ ಮೊದಲ ಸಮಾರಂಭವಾಗಿದೆ. ‘ಜೀವನ ಸಂಗಾತಿ ಜೊತೆಗೆ ಜೀವನೋಪಾಯ’ ಎನ್ನುವ ಘೋಷವಾಕ್ಯದಡಿ ಬೆಳಿಗ್ಗೆ 11.30ಕ್ಕೆ ಗವಿಮಠ ಯಾತ್ರಿ ನಿವಾಸ ಆವರಣದ ಶಾಂತವನದಲ್ಲಿ ವಿವಾಹ ನೆರವೇರಲಿದೆ. 

ಅಂಗವಿಕಲರಿಗೆ ಮದುವೆ ಮಾಡಿಸುವ ಜೊತೆಗೆ ಬೆಂಗಳೂರಿನ ಸೆಲ್ಕೊ ಫೌಂಡೇಷನ್‌ ಸಹಯೋಗದಲ್ಲಿ ಮಠವು ನವಜೋಡಿಯ ಜೀವನೋಪಾಯಕ್ಕಾಗಿ ಒಂದು ಝರಾಕ್ಸ್ ಯಂತ್ರ, ಪೆಟ್ಟಿ ಶಾಪ್ (ಸಣ್ಣ ಅಂಗಡಿ) ಕಲ್ಪಿಸಲಾಗುತ್ತಿದೆ.

ಬಿಜಕಲ್‌ನ ವಿರಕ್ತಪಠದ ಶಿವಲಿಂಗ ಸ್ವಾಮೀಜಿ, ಘನಶ್ಯಾಮ ಬಾಂಡಗೆ, ಸೆಲ್ಕೊ ಕಂಪನಿ ವಲಯ ವ್ಯವಸ್ಥಾಪಕ ಮಂಜುನಾಥ ಭಾಗವತ, ಜಿಲ್ಲಾ ವಿಶೇಷಚೇತನ ಹಾಗೂ ಕಲ್ಯಾಣ ಯೋಜನಾ ಅಧಿಕಾರಿ ಶ್ರೀದೇವಿ ನಿಡಗುಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶೃಂಗೇರಿ ಸೇರಿದಂತೆ ಹಲವರು ಪಾಲ್ಗೊಳ್ಳುವರು.

ಆರಂಭದಲ್ಲಿ ಸಾಮೂಹಿಕ ವಿವಾಹ ಮಹೋತ್ಸವದ ಸಾಂಪ್ರದಾಯಿಕ ವಿಧಿವಿಧಾನಗಳು ಜರುಗಲಿವೆ. 11.30ಕ್ಕೆ ಮಾಂಗಲ್ಯಧಾರಣ ಜರುಗಲಿದೆ. ಶಕುಂತಲಾ ಬಿನ್ನಾಳ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಮಹಾದಾಸೋಹದಲ್ಲಿ ಪ್ರಸಾದ ವ್ಯವಸ್ಥೆ ಇರಲಿದೆ.

ಈ ಬಾರಿಯ ಜಾತ್ರೆಯಲ್ಲಿ ಕೌಶಲಾಭಿವೃದ್ಧಿ ಇಲಾಖೆಯಿಂದ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಮಳಿಗೆ, ಕೃಷಿಮೇಳ, ತಾರಸಿ ತೋಟ (ಟೆರೇಸ್ ಗಾರ್ಡನ್), ಫಲ ಪುಷ್ಪ ಪ್ರದರ್ಶನ, ರಕ್ತದಾನ, ರಂಗೋಲಿ ಪ್ರರ್ದಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಸಿದ್ಧಗೊಂಡಿರುವ ದಾಸೋಹದ ಕೌಂಟರ್‌ಗಳು
ಸಿದ್ಧಗೊಂಡಿರುವ ದಾಸೋಹದ ಕೌಂಟರ್‌ಗಳು

ಹರಿದು ಬಂದ ರೊಟ್ಟಿ:

ಜಾತ್ರೆಯ ಅಂಗವಾಗಿ ಮಹಾದಾಸೋಹಕ್ಕಾಗಿ ಭಕ್ತರಿಂದ ದವಸ-ಧಾನ್ಯ, ರೊಟ್ಟಿಗಳು ಮಠಕ್ಕೆ ಬಂದಿವೆ. ಕುಷ್ಟಗಿ ತಾಲ್ಲೂಕಿನ ಹುಲಸಗೇರಿ ಗ್ರಾಮದ ಭಕ್ತರು ಹತ್ತು ಸಾವಿರ ರೊಟ್ಟಿ, ಆರು ಪಾಕೆಟ್‌ ಜೋಳ, ನಾಲ್ಕು ಪಾಕೆಟ್‌ ಅಕ್ಕಿ, ಎರಡು ಪಾಕೆಂಟ್ ಕಡ್ಲೆಬೇಳೆ ಸೇರಿದಂತೆ ಹಲವು ಸಾಮಗ್ರಿ ನೀಡಿದ್ದಾರೆ.

ಅಧಿಕಾರಿಗಳ ನಿಯೋಜನೆ: ಜಾತ್ರೆಯ ಅಂಗವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಉಸ್ತುವಾರಿಯಾಗಿ ನೇಮಿಸಿ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಆದೇಶ ಹೊರಡಿಸಿದ್ದಾರೆ. ಮೂಲ ಸೌಲಭ್ಯಗಳನ್ನು ಒದಗಿಸಲು ಉಪವಿಭಾಗಾಧಿಕಾರಿ ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. 

ಗವಿಸಿದ್ಧೇಶ್ವರ ಮೈದಾನದಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸುತ್ತಿರುವ ಕಾರ್ಮಿಕರು
ಗವಿಸಿದ್ಧೇಶ್ವರ ಮೈದಾನದಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸುತ್ತಿರುವ ಕಾರ್ಮಿಕರು

ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಯೋಜನಾ ನಿರ್ದೇಶಕರು, ನಗರಸಭೆ ಪೌರಾಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಸಾರಿಗೆ, ವಾರ್ತಾ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖರು ತಮ್ಮ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.

ಗವಿಮಠ
ಗವಿಮಠ
ಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಎರಡು ದಾರಿಗಳು ಗೋಚರಿಸುತ್ತವೆ. ಒಂದು ಆತ್ಮಹತ್ಯೆಯ ದಾರಿ ಇನ್ನೊಂದು ಆತ್ಮ ಪರಿವರ್ತನೆಯ ದಾರಿ. ಆಯ್ಕೆ ನಮ್ಮದಾಗಿರಬೇಕು ಎನ್ನುವುದೇ ನಮ್ಮ ಆಶಯ.
-ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ

ಪ್ರಮುಖ ಕಾರ್ಯಕ್ರಮಗಳ ಮಾಹಿತಿ

  • ಜ.23ರಂದು ಸಂಜೆ 5 ಗಂಟೆಗೆ ಬಸವಪಟ ಹಾಗೂ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮ.

  • 24ರಂದು ಕಾಯಕ ದೇವೋಭವ-ಜಾಗೃತಿ ಅಭಿಯಾನ ಹಾಗೂ ತೆಪ್ಪೋತ್ಸವ.

  • 25ರಂದು ಸಂಜೆ 4 ಗಂಟೆಗೆ ಜಂಗಮೋತ್ಸವ (ಪಲ್ಲಕ್ಕಿ ಉತ್ಸವ) ಗವಿಸಿದ್ದೇಶ್ವರ ಮೂರ್ತಿಯ ಕಳಸದ ಮೆರವಣಿಗೆ.

  • 26ರಂದು ಸಂಜೆ 5 ಗಂಟೆಗೆ ಉಚ್ಛಾಯ (ಲಘು ರಥೋತ್ಸವ) 6 ಗಂಟೆಗೆ ಕೈಲಾಸ ಮಂಟಪದಲ್ಲಿ ಗವಿಮಠದ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ.

  • 27ರಂದು ಬೆಳಿಗ್ಗೆ 11 ಗಂಟೆಗೆ ಪೊಲೀಸ್ ಶ್ವಾನಗಳ ಸಾಹಸ ಪ್ರದರ್ಶನ.  ಭೂಮಿ ಕರಾಟೆ ಫೌಂಡೇಷನ್‌ ತಂಡದಿಂದ ಕರಾಟೆ ಪ್ರದರ್ಶನ ಮತ್ತು ದಾಲ್‌ಪಟ ಪ್ರದರ್ಶನ. ಸಂಜೆ 5.30ಕ್ಕೆ ಮಹಾರಥೋತ್ಸವ. ಸಂಜೆ 6 ಗಂಟೆಗೆ ಕೈಲಾಸ ಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ.

  • 27ರಿಂದ 29ರ ತನಕ ಬೆಳಿಗ್ಗೆ 11ರಿಂದ 1.30ರ ತನಕ ಮಠದ ಯಾತ್ರಿ ನಿವಾಸ ರಸ್ತೆಯ ಶಾಂತವನದಲ್ಲಿ  ಅನ್ವೇಷಣೆ ಆತ್ಮಚಿಂತನ ಕಾರ್ಯಕ್ರಮ ಜರುಗಲಿದೆ.

  • 27 28ರಂದು ರಾತ್ರಿ 10.30ಕ್ಕೆ ಶಾಂತವೀರ ಪಬ್ಲಿಕ್ ಸ್ಕೂಲ್ ಮುಂಭಾಗಕೊಪ್ಪಳ ತಾಲ್ಲೂಕಿನ ಹಿರೇಬಗನಾಳದ ಗವಿಸಿದ್ದೇಶ್ವರ ಸೇವಾ ನಾಟ್ಯ ಸಂಘದ ವತಿಯಿಂದ ‘ಗವಿಸಿದ್ದೇಶ್ವರ ಮಹಾತ್ಮೆ’ ನಾಟಕ ಪ್ರದರ್ಶನ.

  • 28ರಂದು ಮಠದ ಆವರಣದಲ್ಲಿ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ. ಸಂಜೆ 4 ಗಂಟೆಗೆ  ಶಿವಶಾಂತ ಶರಣರ ದೀರ್ಘದಂಡ ನಮಸ್ಕಾರ ಹಾಗೂ ಸಿದ್ದೇಶ್ವರ ಮೂರ್ತಿಯ ಮೆರವಣಿಗೆ ನಡೆಯಲಿದೆ. ರಾತ್ರಿ 10 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ.

  • 28ರಂದು ಸಂಜೆ 5.30ಕ್ಕೆ ಗವಿಮಠದ ಕೈಲಾಸ ಮಂಟಪದಲ್ಲಿ ಭಕ್ತಿಚಿಂತನೆ.

  • 29ರಂದು ಬೆಳಿಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ಮಹಿಳೆಯರ ಹಾಗೂ ಪುರುಷರ ಕಬಡ್ಡಿ ಪಂದ್ಯಗಳು. ಸಂಜೆ 5.30ಕ್ಕೆ ಕೈಲಾಸ ಮಂಟಪದಲ್ಲಿ ಸಮಾರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT