ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಸಂಭ್ರಮ!

ಹಿಂದೂಗಳಿಂದಲೇ ಮಸೀದಿ ನಿರ್ಮಾಣ
Last Updated 7 ಆಗಸ್ಟ್ 2022, 7:54 IST
ಅಕ್ಷರ ಗಾತ್ರ

ಅಳವಂಡಿ/ಕುಕನೂರು/ಹನುಮಸಾಗರ: ಹಿಂದೂ ಮುಸ್ಲಿಮರ ಭಾವೈಕ್ಯ ಸಂಗಮದ ಹಬ್ಬವಾದ ಮೊಹರಂ ಎಲ್ಲಾ ಕಡೆಯೂ ಆಚರಿಸಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ ಮುಸ್ಲಿಮರಿಲ್ಲದ ಊರುಗಳಲ್ಲಿಯೂ ಈ ಹಬ್ಬದ ಸಂಭ್ರಮ ಜೋರಾಗಿದ್ದು ವಿಶೇಷ.

ಅಳವಂಡಿ ಸಮೀಪದ ಮುರ್ಲಾಪುರ,ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಮತ್ತು ಹನುಮಸಾಗರ ಸಮೀಪದ ಗಡಚಿಂತಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳಿಲ್ಲ. ಆದರೂ, ಈ ಊರುಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.

ಮುರ್ಲಾಪುರ ಗ್ರಾಮದಲ್ಲಿ 200 ಕುಟುಂಬಗಳಿದ್ದು, 800 ಜನಸಂಖ್ಯೆ ಹೊಂದಿದೆ. ಗ್ರಾಮದ ಹಿಂದೂಗಳೆಲ್ಲ ಸೇರಿ ಹಬ್ಬ ಆಚರಿಸುತ್ತಾರೆ. ಜಿಲ್ಲೆಯ ಗಡಿ ಗ್ರಾಮವಾದ ಮರ್ಲಾಪುರದಲ್ಲಿ ಕೋಮು ಸೌಹಾರ್ದ ವಾತಾವರಣವಿದೆ. ಮೊಹರಂ ದಿನಗಳಲ್ಲಿ ಗ್ರಾಮಸ್ಥರು ಉಪವಾಸ ಮಾಡುವುದು, ಮಕ್ಕಳಿಗೆ ಲಾಡಿ ಹಾಕಿಸುವುದು, ನೈವೇದ್ಯ ಸಲ್ಲಿಸುವುದು ಮತ್ತು ಮನರಂಜನೆಯ ವೇಷ ಹಾಕಿಸುವುದು ಸಾಮಾನ್ಯ.

1992ರಲ್ಲಿ ಗ್ರಾಮದಲ್ಲಿ ನೂತನವಾಗಿ ಮಸೀದಿ ಕಟ್ಟಿ ಅಲ್ಲಿ ಮೊಹರಂ ಆಚರಿಸಿಕೊಂಡು ಬರಲಾಗುತ್ತದೆ. ಹಿಂದೂಗಳೇ ಮಸೀದಿ ಕಟ್ಟಿದ್ದಾರೆ. ಕವಲೂರ ಗ್ರಾಮದ ಖಾಜಾ ಮೈನುದ್ದೀನ್ ಮಕಾಂದಾರ (ಮುಜಾವರ) ಎಂಬುವರು ಹಬ್ಬದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡುತ್ತಾರೆ. ವರ್ಷಪೂರ್ತಿ ಮುರ್ಲಾಪುರದ ಮಲ್ಲಪ್ಪ ಮೇಗಳಮನಿ ಉಳಿದ ಚಟುವಟಿಕೆ ನೋಡಿಕೊಳ್ಳುತ್ತಾರೆ.

ಉಪವಾಸ: ಮಸಬಹಂಚಿನಾಳ ಗ್ರಾಮದ ಜನ ಮೊಹರಂ ದಿನಗಳಲ್ಲಿ ಉಪವಾಸ ಮಾಡುತ್ತಾರೆ. ಈ ಗ್ರಾಮದಲ್ಲಿಯೂ ಹಿಂದುಗಳೇ ಮಸೀದಿ ಕಟ್ಟಿದ್ದಾರೆ ಎನ್ನುವುದು ವಿಶೇಷ. ಹಬ್ಬದ ಸಮಯದಲ್ಲಿ ಹತ್ತಿರದ ನಿಟ್ಟಾಲಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡುತ್ತದೆ.

ಈ ಬಾರಿ ಸಂಭ್ರಮ ಹೆಚ್ಚು: ಕೋವಿಡ್‌ ಕಾರಣದಿಂದಾಗಿ ಎರಡು ವರ್ಷಗಳ ಬಳಿಕ ಅದ್ದೂರಿಯಾಗಿ ನಡೆಯುತ್ತಿರುವ ಕಾರಣ ಗಡಚಿಂತಿ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ.

ಗಡಚಿಂತಿ ಗ್ರಾಮದಲ್ಲಿದ್ದ ದೇವಸ್ಥಾನವನ್ನು ಕೆಡವಿ ಗ್ರಾಮಸ್ಥರೇ ವಂತಿಕೆ ಸಂಗ್ರಹಿಸಿ ಸುಮಾರು ₹8 ಲಕ್ಷ ವೆಚ್ಚದಲ್ಲಿ ಅದೇ ಸ್ಥಳದಲ್ಲಿ ಹೊಸ ದೇವಸ್ಥಾನ ನಿರ್ಮಿಸಿ ಪಾಂಜಾಗಳನ್ನು ಪ್ರತಿಷ್ಠಾಪಿಸಲಾಗಿದೆ.

ಭಕ್ತರು ದೀರ್ಘದಂಡ ನಮಸ್ಕಾರ, ಸಕ್ಕರೆ ನೈವೇದ್ಯ ಹಾಗೂ ಛತ್ರಿದಾನದ ಮೂಲಕ ಹರಕೆ ಸಲ್ಲಿಸುತ್ತಾರೆ. ಗಂಧದ ಮೆರವಣಿಗೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ನಡೆಸುತ್ತಾರೆ.

ಮೊಹರಂ ಮುಗಿದ ಆರು ತಿಂಗಳ ನಂತರ ಪೀರಾದೇವರ ಪುನರ್ ಪಂಜೆ ದರ್ಶನ ಈ ಗ್ರಾಮದಲ್ಲಿ ನಡೆಯುವುದು ವಿಶೇಷ. ಬೇರೆ ಗ್ರಾಮಗಳಿಂದ ಖಾಜಿಗಳನ್ನು ಕರೆಯಿಸಿ ಅವರ ಮೂಲಕ ಪೂಜೆಯ ವಿಧಿವಿಧಾನಗಳನ್ನು ನಡೆಸಿ ಹಿಂದೂಗಳು ಆಚರಿಸುತ್ತಾರೆ.

‘ನಮ್ಮ ಗ್ರಾಮದಲ್ಲಿ ಮುಸ್ಲಿಮರಿಲ್ಲ. ಭಾವೈಕ್ಯದ ಸಂಕೇತವಾಗಿ ಅನಾದಿ ಕಾಲದಿಂದಲೂ ಮೊಹರಂ ಹಬ್ಬಂದತೆ ಪೀರಾ ದೇವರ ಪುನರ್ ಪಂಜೆ ದರ್ಶನ ಕಾರ್ಯಕ್ರಮ ಆಚರಿಸಿಕೊಂಡು ಬಂದಿದ್ದೇವೆ. ಜಾತ್ರೆಯ ರೀತಿಯಲ್ಲಿ ಗಂಧ, ಉರುಸು, ಭಕ್ತರ ಹರಕೆ ತೀರಿಸುವ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ’ ಎಂದು ಶರಣಪ್ಪ ದಂಡಿನ ಹೇಳಿದರು.

ಸುತ್ತಲಿನ ಗ್ರಾಮಗಳಾದ ಹಾಬಲಕಟ್ಟಿ, ಮಾಸ್ತಕಟ್ಟಿ, ಮಾಲಗಿತ್ತಿ, ವಾರಿಕಲ್ಲ, ಚಿಕ್ಕಗೊಣ್ಣಾಗರ, ಹಿರೇಗೊಣ್ಣಾಗರ ಗ್ರಾಮದ ಭಕ್ತರು ಪಾಲ್ಗೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT