ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಅಧ್ಯಯನ ಪೀಠ ಇಲ್ಲ; ಮುಮ್ತಾಜ್ ಬೇಗಂ ಆಕ್ರೋಶ

Published 2 ಮಾರ್ಚ್ 2024, 16:27 IST
Last Updated 2 ಮಾರ್ಚ್ 2024, 16:27 IST
ಅಕ್ಷರ ಗಾತ್ರ

ಕನಕಗಿರಿ: ‘ರಾಜ್ಯದ ವಿವಿಧ ವಿಶ್ವವಿದ್ಯಾಲಯದಲ್ಲಿ ಅನೇಕ ವಿದ್ವಾಂಸರು, ಸಮಾಜ ಸುಧಾರಕರು, ದಾಸರು, ಶರಣರ ಅಧ್ಯಯನ ಪೀಠಗಳನ್ನು ಆರಂಭಿಸಲಾಗಿದ್ದು, ಒಂದೇ ಒಂದು ಮಹಿಳಾ ಅಧ್ಯಯನ ಪೀಠ ಇಲ್ಲದಿರುವುದು ವಿಷಾದನೀಯ’ ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮುಮ್ತಾಜ್ ಬೇಗಂ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಪುಟ್ಟರಾಜ ಗವಾಯಿಗಳ ವೇದಿಕೆಯಲ್ಲಿ ಶನಿವಾರ ನಡೆದ ಮಹಿಳಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನುಪಮಾ ನಿರಂಜನ, ತ್ರಿವೇಣಿ, ಕೊಡಗಿನ ಗೌರಮ್ಮ, ಗಲಗಲಿ ಅವ್ವ ಹೀಗೆ ಅನೇಕ ವಿದ್ವಾಂಸ ಮಹಿಳೆಯರಿದ್ದಾರೆ. ಅವರು ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಮಹಿಳೆಯ ಬಗೆಗಿನ ನಿರ್ವಚನಗಳು ಬದಲಾಗಬೇಕಾದ ಅಗತ್ಯದ ಸಂದರ್ಭದಲ್ಲಿದ್ದೇವೆ. ಅಸಮಾನತೆ, ಲಿಂಗ ತಾರತಮ್ಯ ಇವು ನಿವಾರಣೆಯಾಗಲು ಸಮ ಸಮಾಜದ ಪರಿಕಲ್ಪನೆಯ ಮನೋವಿನ್ಯಾಸಗಳು ರೂಪುಗೊಳ್ಳಬೇಕಾಗಿದೆ’ ಎಂದು ಪ್ರತಿಪಾದಿಸಿದರು.

ಗೀತಾ ಪೊಲೀಸ್ ಪಾಟೀಲ, ಪರ್ವಿನ್ ಗಂಗಾವತಿ, ಸೋಮಕ್ಕ, ಪ್ರಗತಿಪರ ಚಿಂತಕಿ ಶೈಲಜಾ ಹಿರೇಮಠ, ಸಾಹಿತಿ ಸಾವಿತ್ರಿ ಮುಜಮದಾರ ಮಾತನಾಡಿದರು. ಸಂಶೋಧಕರಾದ ಟಿ. ಅಕ್ಕಮ್ಮ, ಪಾರ್ವತಿ, ರೇಣುಕಾ ಕುರುಗೋಡ, ಯಶೋಧ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಮಾಜಿ ಸದಸ್ಯೆ ಗಿರಿಜಾ ಸಂಗಟಿ, ಮಹಿಳಾ ಮುಂದುಳಾಗಳಾದ ಅಂಬಿಕಾ ಸಿದ್ದು ವಳಕಲ್ ದಿನ್ನಿ, ಜ್ಯೋತಿ ಗೊಂಡಬಾಳ, ರೇಷ್ಮಾ ಖಾಜವಲಿ, ಗೋವರ್ದನಮ್ಮ, ಪ್ರಮೀಳಮ್ಮ ಪಾಲ್ಗೊಂಡಿದ್ದರು. ಕನಕರೆಡ್ಡಿ ಸ್ವಾಗತಿಸಿದರು. ಗೀತಾ ಅಂಗಡಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT