ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕೃಷಿಕರನ್ನು ಅತಂತ್ರ ಮಾಡುವ ಹುನ್ನಾರ’

ಹೊರಗಡೆ ತಂಪೆನೆಯ ವಾತಾವರಣ, ಮಂಗಳ ಭವನದ ಒಳಗೆ ಬಿಸಿ ಮಾತುಗಳ ಪ್ರಹಾರ
Published 26 ಮೇ 2024, 3:14 IST
Last Updated 26 ಮೇ 2024, 3:14 IST
ಅಕ್ಷರ ಗಾತ್ರ

ಕೊಪ್ಪಳ: ‘ಸ್ವಾತಂತ್ರ್ಯೋತ್ಸವದ ಶತಮಾನ ಮಹೋತ್ಸವದ ಹೊತ್ತಿಗೆ ರೈತರ ಜಮೀನಿನ ಶೇ 70ರಷ್ಟನ್ನು ಉದ್ಯಮಿಗಳಿಗೆ ಕೊಟ್ಟು, ಕೃಷಿಕರನ್ನು ಅತಂತ್ರ ಮಾಡುವ ಹುನ್ನಾರ ನಡೆಯುತ್ತಿದ್ದು, ಇದರ ವಿರುದ್ಧ ದೇಶದಾದ್ಯಂತ ಪ್ರತಿರೋಧದ ದನಿ ಕೇಳಬೇಕಿದೆ. ಪ್ರಸ್ತುತ ಚುನಾವಣೆಯ ಬಳಿಕ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರೈತರ ಹೋರಾಟ ಸದಾ ಜಾರಿಯಲ್ಲಿರಲಿದೆ’ ಎಂದು ರೈತ ಹೋರಾಟಗಾರ ಹಾಗೂ ಕಿಸಾನ್ ಸಂಯುಕ್ತ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು. 

ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ ಶನಿವಾರ ಆರಂಭವಾದ 10ನೇ ಮೇ ಸಾಹಿತ್ಯ ಮೇಳದಲ್ಲಿ ಹೊರಗಡೆ ತಂಪನೆಯ ವಾತಾವರಣವಿದ್ದರೆ ಭವನದ ಒಳಗಡೆ ಆಡಳಿತ ವ್ಯವಸ್ಥೆಯ ವಿರುದ್ಧ ಮಾತುಗಳ ಪ್ರಹಾರ ನಡೆದಿತ್ತು. ರೈತರು, ಮಹಿಳೆಯರ, ನೊಂದವರ ಧ್ವನಿಯಾಗಿ ಗಣ್ಯರು ತಮ್ಮ ಆಶಯಗಳನ್ನು ವ್ಯಕ್ತಪಡಿಸಿದರು. 

1858ರ ಸ್ವಾತಂತ್ರ್ಯ ಹೋರಾಟ ಕೊಪ್ಪಳ ಹುತಾತ್ಮರ ವೇದಿಕೆಯಲ್ಲಿ ಗದಗಿನ ಲಡಾಯಿ ಪ್ರಕಾಶನ, ಹೊನ್ನಾವರ ತಾಲ್ಲೂಕು ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ ಕೊಪ್ಪಳದ ಮೇ ಸಾಹಿತ್ಯ ಬಳಗದ ಮೇಳ ಆಯೋಜನೆಗೊಂಡಿದೆ. ಈ ಬಾರಿ ‘ಸಂವಿಧಾನ ಭಾರತ ಧರ್ಮಕಾರಣ’ ಎಂಬ ಆಶಯವಾಕ್ಯದೊಂದಿಗೆ ಮೇಳ ನಡೆಯುತ್ತಿದೆ.

ದಿಕ್ಸೂಚಿ ಭಾಷಣ ಮಾಡಿದ ಟಿಕಾಯತ್‌ ‘ರೈತರನ್ನು ಪರಾವಲಂಬಿಯಾಗಿ ಮಾಡುವ ಸಂಚುಗಳನ್ನು ದೇಶದ ಜನತೆ ಒಟ್ಟಾಗಿ ವಿಫಲಗೊಳಿಸಬೇಕಿದೆ. ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಒದಗಿರುವ ಆತಂಕ ವ್ಯಕ್ತವಾಗುತ್ತಿದೆ. ಕಳೆದ ಹಲವು ವರ್ಷಗಳಲ್ಲಿ ದೇಶದ ವಿವಿಧೆಡೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಅದು ಸ್ಪಷ್ಟವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರಗಳು ಕೃಷಿಕರಿಗೆ ಗೊತ್ತಿಲ್ಲದಂತೆ ನಡೆಯುತ್ತಿವೆ. ಉದ್ಯಮಿಗಳಿಗೆ ರೈತರ ಜಮೀನನ್ನು ಒಪ್ಪಿಸುವ ಯೋಜನೆಗಳು ಜಾರಿಯಾಗುತ್ತಿವೆ. ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಪಕ್ಷಗಳ ಸರ್ಕಾರವನ್ನು ಅಧಿಕಾರಕ್ಕೆ ಬರುವಂತೆ ಉದ್ಯಮಗಳು ತಂತ್ರ ರೂಪಿಸುತ್ತವೆ. ಹೆದ್ದಾರಿ ನಿರ್ಮಾಣದಂಥ ಬೃಹತ್ ಯೋಜನೆಗಳ ಹೆಸರಿನಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಗಳು ನೀತಿ ರೂಪಿಸಿವೆ’ ಎಂದು ಆರೋಪಿಸಿದರು.

ಕೊಂಕಣಿ ಕವಿ ಪಣಜಿಯ ದಾಮೋದರ ಮೌಜೊ ಮಾತನಾಡಿ ‘ಸಂವಿಧಾನ ಪ್ರತಿಯೊಬ್ಬರಿಗೂ ಸೇರಿದ್ದು, ಜಲಾಲುದ್ದೀನ್ ರೂಮಿ ಹೇಳಿದ ಹಾಗೆ ಹೃದಯದಿಂದ ಬಂದ ಮಾತು, ಸಾಹಿತ್ಯ ಸರಳವಾಗಿ ಮತ್ತೊಬ್ಬರ ಎದೆಗೆ ದಾಟುತ್ತವೆ‌‌. ಆದರೆ ಇತರರ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳದವರು ಮನದ ಮಾತು ಆಡುತ್ತಿದ್ದಾರೆ’ ಎಂದು ಕುಟುಕಿದರು.

ಹೋರಾಟಗಾರ್ತಿ ತೆಲಂಗಾಣದ ಜೂಪಕ ಸುಭದ್ರ ಮಾತನಾಡಿ ‘ಆರೆಸ್ಸೆಸ್ ಪ್ರಣೀತ ಸಿದ್ಧಾಂತವನ್ನು ರಹಸ್ಯವಾಗಿ ಸಮಾಜದ ಮೇಲೆ ಹೇರಿ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹವಣಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ರಾಮಮಂದಿರ ಸ್ಥಾಪನೆ ಬಳಿಕ ಅಜೆಂಡಾ ಏನು? ನಿರುದ್ಯೋಗ, ಬೆಲೆಯೇರಿಕೆ, ರೈತ ಸಮಸ್ಯೆಗಳನ್ನು ಎಲ್ಲೂ ಪ್ರಸ್ತಾಪಿಸದೇ ಧರ್ಮಾಧಾರಿತ ರಾಜಕಾರಣವನ್ನು ಯಾವ ಬಗೆಯಲ್ಲಿ ಬಳಸಬೇಕು ಎಂದು ಬಿಜೆಪಿ ಯೋಚಿಸುತ್ತಿದೆ. ನಮ್ಮ ಸಮುದಾಯಗಳು ನೀರು, ಭೂಮಿ, ಮರಗಳನ್ನು ಪೂಜಿಸುತ್ತವೆ. ಇಲ್ಲಿ ವಿವಿಧ ಭಾಷೆ ಮಾತನಾಡಲಾಗುತ್ತಿದೆ’ ಎಂದರು.

ಮೇ ಸಾಹಿತ್ಯ ಮೇಳದಲ್ಲಿ ಶನಿವಾರ ಪಾಲ್ಗೊಂಡಿದ್ದ ಜನ
ಮೇ ಸಾಹಿತ್ಯ ಮೇಳದಲ್ಲಿ ಶನಿವಾರ ಪಾಲ್ಗೊಂಡಿದ್ದ ಜನ
ಕೊಂಕಣಿ ಕವಿ ಪಣಜಿಯ ದಾಮೋದರ ಮೌಜೊ ಮಾತನಾಡಿದರು
ಕೊಂಕಣಿ ಕವಿ ಪಣಜಿಯ ದಾಮೋದರ ಮೌಜೊ ಮಾತನಾಡಿದರು

- ಜನಸಾಮಾನ್ಯರಿಂದ ಮೇಳ ಉದ್ಘಾಟನೆ

ವಿವಿಧ ಸಮುದಾಯಗಳ ಪ್ರತಿನಿಧಿಗಳಾದ ಬಸಮ್ಮ ಜಂಬವ್ವ ದುರ್ಗವ್ವ ಶೋಭಾ ಮಠ ನಿಂಗಜ್ಜ ಮತ್ತು ಬಣ್ಣಬಣ್ಣದ ಧಿರಿಸು ತೊಟ್ಟಿದ್ದ ಮಕ್ಕಳು ಜನರ ಕಿವಿಗಡಚಿಕ್ಕುವ ಚಪ್ಪಾಳೆಯ ಮಧ್ಯೆ ಸಾಹಿತ್ಯ ಮೇಳಕ್ಕೆ ಚಾಲನೆ ನೀಡಿದರು. ಸಂವಿಧಾನ ಪ್ರಸ್ತಾವನೆಯ ಪ್ರತಿಯನ್ನು ಅತಿಥಿಗಳಿಗೆ ಕೊಡುವ ಮೂಲಕ ಮೇಳ ಅಧಿಕೃತವಾಗಿ ಉದ್ಘಾಟನೆಯಾಯಿತು. ಪ್ರಾಸ್ತಾವಿಕ ಮಾತನಾಡಿದ ಕವಿ ಬಸವರಾಜ ಹೂಗಾರ ‘ಪ್ರತಿರೋಧದ ಅಭಿವ್ಯಕ್ತಿಯಾಗಿ ಪ್ರತಿ ವರ್ಷ ಆಯೋಜನೆಯಾಗುವ ಸಾಹಿತ್ಯ ಮೇಳವು ತನ್ನದೇ ಆದ ಕಾರ್ಯವೈಖರಿಯಿಂದ ಹೆಸರು ಗಳಿಸಿದೆ’ ಎಂದರು. ಟಿ.ರತ್ನಾಕರ ಜೆ.ಭಾರದ್ವಾಜ್ ಕೆ.ವೆಂಕಟರಾಜು ಮತ್ತು ಮೆಹಮೂದ್ ಬೇಗಂ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಭಾರತ ಸಂವಿಧಾನದ ಪ್ರಸ್ತಾವನೆಯನ್ನು ರಮೇಶ ಗಬ್ಬೂರು ಓದಿದರು. ಕಾಶಪ್ಪ ಚಲವಾದಿ ಹಾಗೂ ಅನಿಲ ಹೊಸಮನಿ ಮೇಳದ ನಿರ್ಣಯಗಳನ್ನು ಮಂಡಿಸಿದರು. ಡಿ.ಎಂ.ಬಡಿಗೇರ ಸ್ವಾಗತಿಸಿದರು. ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಹಾಗೂ ಅಖಿಲಾ ವಿದ್ಯಾಸಂದ್ರ ನಿರೂಪಿಸಿದರು. ನೂರಾರು ಸಾಹಿತ್ಯಾಸಕ್ತರು ಲೇಖಕರು ಪ್ರಗತಿಪರ ಚಿಂತಕರು ಹೋರಾಟಗಾರರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT