ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ

ಕೊನೆ ಗಳಿಗೆಯಲ್ಲಿ ಹರಾಜು ರದ್ದು; ವ್ಯಾಪಾರಿಗಳ ಬೇಸರ
Published 14 ಡಿಸೆಂಬರ್ 2023, 14:05 IST
Last Updated 14 ಡಿಸೆಂಬರ್ 2023, 14:05 IST
ಅಕ್ಷರ ಗಾತ್ರ

ಕುಷ್ಟಗಿ: ಇಲ್ಲಿನ ಪುರಸಭೆಯ ವಾಣಿಜ್ಯ ಮಳಿಗೆ ಸಂಕೀರ್ಣದ ಮಳಿಗೆಗಳ ಹರಾಜಿಗೆ ಬುಧವಾರ ಧಾರವಾಡ ಹೈಕೋರ್ಟ್ ಪೀಠವು ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಇದರಿಂದ ಗುರುವಾರ ನಡೆಯಬೇಕಿದ್ದ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಕೊನೆಗಳಿಗೆಯಲ್ಲಿ ರದ್ದುಪಡಿಸಲಾಯಿತು.

ಮಳಿಗೆಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ವ್ಯಾಪಾರಸ್ಥರಿಗೆ ವಹಿಸಿಕೊಡುವ ನಿಟ್ಟಿನಲ್ಲಿ ಪುರಸಭೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಪಟ್ಟಣದ ಆರು ಮಂದಿ ಧಾರವಾಡ ಹೈಕೋರ್ಟ್ ಪೀಠದ ಮೊರೆ ಹೋಗಿದ್ದರು.

ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ 162 ಜನರು ನಿಗದಿತ ಠೇವಣಿ ಮೊತ್ತಕ್ಕೆ ಬ್ಯಾಂಕ್‌ ಡಿಡಿ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆಗಳಿಗೆಯಲ್ಲಿ ಹರಾಜು ಪ್ರಕ್ರಿಯೆ ರದ್ದಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಪ್ರತೀ ಬಾರಿಯೂ ಇದೇ ರೀತಿ ನ್ಯಾಯಾಲಯದಿಂದ ಕೆಲವರು ಪದೇಪದೇ ತಡೆಯಾಜ್ಞೆ ತರುತ್ತಾರೆ. ಆದರೆ ಅವರು ನಿಜವಾಗಿಯೂ ವ್ಯಾಪಾರ ವಹಿವಾಟು ನಡೆಸುವ ವ್ಯಕ್ತಿಗಳೇ ಅಲ್ಲ. ವ್ಯಾಪಾರ ವೃತ್ತಿಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುವ ಸಾಮಾನ್ಯ ಜನರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳದಲ್ಲಿದ್ದ ಕೆಲವರು ಅಸಹಾಯಕತೆ ವ್ಯಕ್ತಪಡಿಸಿದರು. 

ಹರಾಜಿನಲ್ಲಿ ಪಾಲ್ಗೊಳ್ಳಲು ಠೇವಣಿ ಮೊತ್ತದ ಡಿಡಿ ತರಲು ಬ್ಯಾಂಕಿಗೆ ಶುಲ್ಕ ಕಟ್ಟಬೇಕು. ಇದರಿಂದ ಪ್ರತಿಯೊಬ್ಬರಿಗೂ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಪುನಃ ಟೆಂಡರ್‌ ಕರೆದರೆ ಅದರಲ್ಲಿ ಭಾಗವಹಿಸಬೇಕೆಂದರೆ ಮತ್ತೆ ಡಿಡಿ ತರಬೇಕು ಈ ಸಮಸ್ಯೆಯನ್ನು ಯಾರ ಮುಂದೆ ಹೇಳಬೇಕು ಎಂದು ಅತೃಪ್ತಿ ಹೊರಹಾಕಿದರು.

ಎರಡು ಬಾರಿ ತಡೆಯಾಜ್ಞೆ:

2006-07ರಲ್ಲಿಯೇ ಮಳಿಗೆ ಬಾಡಿಗೆ ಪಡೆದಿದ್ದ ಕೆಲವರು 2021ಕ್ಕೆ ಅವಧಿ ಪೂರ್ಣಗೊಂಡರೂ ತಮ್ಮನ್ನೇ ಮುಂದುವರೆಸುವಂತೆಯೂ ನ್ಯಾಯಾಲಯಕ್ಕೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಆದರೆ ಹರಾಜು ನಡೆಸುವ ಪುರಸಭೆ ನಿರ್ಧಾರ ಸರಿಯಾಗಿದ್ದು ಹರಾಜು ನಡೆಸುವಂತೆ ಹೈಕೋಟ್‌ ಆದೇಶ ನೀಡಿತ್ತು.

ಕಳೆದ ಆರು ತಿಂಗಳ ಹಿಂದೆ ಜಿಲ್ಲಾಧಿಕಾರಿ ಸೂಚನೆಯಂತೆ ಪುರಸಭೆ ಮಳಿಗೆಗಳನ್ನು ಬಾಡಿಗೆಗೆ ನೀಡಲು ಹರಾಜು ಪ್ರಕ್ರಿಯೆಗೆ ಮುಂದಾಗಿತ್ತು. ಆಗಲೂ ಕೆಲವರು ಮತ್ತೆ ತಡೆಯಾಜ್ಞೆ ತಂದಿದ್ದರು. ಈಗ ಮತ್ತೆ ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಹೈಕೋಟ್‌ ದಿಂದ ತಡೆಯಾಜ್ಞೆ ತಂದಿರುವುದರಿಂದ ಹರಾಜು ಪ್ರಕ್ರಿಯೆಗೆ ಮತ್ತೆ ವಿಘ್ನ ಎದುರಾಗಿದೆ.

ಅಧಿಕಾರಿಗಳ ಜಾಣಮರೆವು; ಆರೋಪ:  ಹರಾಜು ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಆದೇಶ ನೀಡಿದ ಒಂದು ತಿಂಗಳ ನಂತರೆ ತಡೆಯಾಜ್ಞೆ ತರಲಾಗಿದೆ. ಪರೋಕ್ಷವಾಗಿ ಕೆಲ ಪ್ರಭಾವಿಗಳಿಗೆ ನೆರವಾಗುವ ದುರುದ್ದೇಶದಿಂದಲೇ ಕೇವಿಯಟ್‌ ಅರ್ಜಿ ಸಲ್ಲಿದೆ ಅಧಿಕಾರಿಗಳು ಜಾಣಮರೆವು ಪ್ರದರ್ಶಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ಕೆಲ ವ್ಯಾಪಾರಿಗಳು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನ್ಯಾಯಾಲಯ ತಾತ್ಕಾಲಿಕವಾಗಿ ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವಿಗೆ ಈಗಾಗಲೇ ಪ್ರಯತ್ನ ನಡೆದಿದೆ. ಆದರೆ ಮೊದಲೇ ಕೇವಿಯಟ್‌ ಅರ್ಜಿ ಸಲ್ಲಿಸಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ’ ಎಂದು ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT