ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಗ್ರಾಮೀಣಾಭಿವೃದ್ಧಿಗೆ ಅನುದಾನ ಕಡಿತ

ಪ್ರಾಂತ ರೈತ ಸಂಘದ ಜಿಲ್ಲಾಮಟ್ಟದ ಸಮ್ಮೇಳನ: ಯಶವಂತ ಆರೋಪ
Published 9 ಆಗಸ್ಟ್ 2023, 7:37 IST
Last Updated 9 ಆಗಸ್ಟ್ 2023, 7:37 IST
ಅಕ್ಷರ ಗಾತ್ರ

ಕೊಪ್ಪಳ: ‘ಕೇಂದ್ರ ಸರ್ಕಾರ ಸತತವಾಗಿ ಆರೋಗ್ಯ, ಶಿಕ್ಷಣ, ಉದ್ಯೋಗ ಖಾತರಿ, ಆಹಾರ ಭದ್ರತೆ ಹಾಗೂ ಗ್ರಾಮೀಣ ಮೂಲಸೌಕರ್ಯಕ್ಕೆ ಅನುದಾನ ಕಡಿತ ಮಾಡುತ್ತಿದೆ. ಇದರಿಂದ ಅಭಿವೃದ್ಧಿ ಕಡಿಮೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಪ್ರಗತಿಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ನಡೆದ ಸಂಘದ ಜಿಲ್ಲಾಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯಾವುದೇ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಂಬಲ ಬೆಲೆ ನೀಡದೇ ವಂಚನೆ ಮಾಡಿದೆ. ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಲೇ ಇವೆ. ರೈತ ಕುಟುಂಬದ ಸಾಲ ಮಾತ್ರ ಡಬಲ್ ಆಗಿದೆ. ಇಂತಹ ರೈತ ವಿರೋಧಿ ಆಡಳಿತವನ್ನು ತಿರಸ್ಕರಿಸಬೇಕು’ ಎಂದು ಕರೆ ನೀಡಿದರು.

‘ಯಾವಾಗಲೂ ಬರ ಪಡೀತ ಪ್ರದೇಶವಾದ ಕೊಪ್ಪಳ ಜಿಲ್ಲೆಯನ್ನು ನೀರಾವರಿಗೆ ಒಳಪಡಿಸಲು ಬಚಾವತ್ ತೀರ್ಪಿನ ಪ್ರಕಾರ ಸಿಕ್ಕಿರುವ ಕೃಷ್ಣಾ ನದಿ ನೀರನ್ನು ಬಳಸಲು ಯೋಜನೆ ರೂಪಿಸದೇ ಇಲ್ಲಿನ ಶಾಸಕರು, ಸಚಿವರು, ಸಂಸದರು ಕಾಲಹರಣ ಮಾಡುತ್ತಿದ್ದಾರೆ. ಬಲವಾದ ಹೋರಾಟದ ಮೂಲಕ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡ ಎಚ್‌.ಆರ್‌. ನವೀನ್ ‘ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳೇ ಉರುಳಿದರೂ ರೈತರ ಬದುಕು ಹಸನಾಗಿಲ್ಲ. ನಿರುದ್ಯೋಗ ಹಾಗೂ ಬಡತನ ಬೆಳೆಯುತ್ತಿದೆ. ಕೃಷಿ ಭೂಮಿ ಉದ್ಯಮಿಗಳ ಪಾಲಾಗುತ್ತಿದೆ. ಕಳವಳಕಾರಿಯಾದ ಈ ರೀತಿಯ ಬೆಳವಣಿಗೆಗಳು ನಡೆಯುತ್ತಲೇ ಇದ್ದರೆ ಭವಿಷ್ಯದಲ್ಲಿ ದೇಶದಲ್ಲಿ ಆಹಾರಕ್ಕಾಗಿ ಹಾಹಾಕಾರ ಸೃಷ್ಟಿಯಾಗುವ ಆತಂಕ ತಪ್ಪಿದ್ದಲ್ಲ’ ಎಂದರು.

ದೊಡ್ಡನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಹ ಕಾರ್ಯದರ್ಶಿ ಜಿ. ನಾಗರಾಜ್, ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಾಸೀಂ ಸರ್ದಾರ್‌, ಮುಖಂಡರಾದ ಸಂಗಮ್ಮ, ವಕೀಲ ಆರ್ ಕೆ ದೇಸಾಯಿ, ಎಂ. ಸಿದ್ದಪ್ಪ, ಶಿವಕುಮಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT