ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿ ಸಂಖ್ಯೆ ಇಲ್ಲದ ವಾಹನಗಳ ಜಪ್ತಿ

ಕುಷ್ಟಗಿಯಲ್ಲಿ ಪೊಲೀಸರಿಂದ ವಿಶೇಷ ಕಾರ್ಯಾಚರಣೆ
Last Updated 29 ನವೆಂಬರ್ 2022, 5:42 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ನೋಂದಣಿ ಸಂಖ್ಯೆ ಇಲ್ಲದ ನೂರಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದರು.

ನೋಂದಣಿ ಸಂಖ್ಯೆ ಇಲ್ಲದಿದ್ದರೂ ತರಹೇವಾರಿ ಚಿತ್ರ, ರಾಜಕೀಯ ನಾಯಕರ ಫೋಟೊಗಳು ಸೇರಿದಂತೆ ತೋಚಿದ ಹೆಸರುಗಳನ್ನು ಬರೆಸುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಸಾಮಾನ್ಯವಾಗಿದ್ದು, ನ.25ರ ಸಂಚಿಕೆಯಲ್ಲಿ ‘ಪಾಲನೆಯಾಗದ ಸಂಚಾರಿ ನಿಯಮ’ ಶೀರ್ಷಿಕೆಯಡಿ ವಿಶೇಷ ವರದಿ ಮೂಲಕ ‘ಪ್ರಜಾವಾಣಿ’ ಗಮನ ಸೆಳೆದಿತ್ತು.

ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಇಲ್ಲಿಯ ಪೊಲೀಸರಿಗೆ ತಾಕೀತು ಮಾಡಿದ್ದರು. ಅಲ್ಲದೇ ನೋಂದಣಿ ಸಂಖ್ಯೆ ಇಲ್ಲದ ವಾಹನಗಳನ್ನು ಸಾಮೂಹಿಕ ಜಪ್ತಿ ಮಾಡಲು ಅನುಕೂಲವಾಗುವ ಟೈಗರ್‌ ವಾಹನವನ್ನೂ ಕಳಿಸಿದ್ದರು.

ಈ ಕಾರಣಕ್ಕೆ ವಿಶೇಷ ಕಾರ್ಯಾಚರಣೆಗಿಳಿದ ಪೊಲೀಸ್‌ ಸಿಬ್ಬಂದಿ ಸರ್ಕಲ್‌ ಇನ್‌ಸ್ಪೆಕ್ಟರ್‌ ನಿಂಗಪ್ಪ ರುದ್ರಪ್ಪಗೋಳ ಮತ್ತು ಸಬ್‌ ಇನ್‌ಸ್ಪೆಕ್ಟರ್ ಮೌನೇಶ ರಾಠೋಡ ನೇತೃತ್ವದಲ್ಲಿ ಭಾನುವಾರ ಸುಮಾರು 55 ವಾಹನಗಳನ್ನು ವಶಕ್ಕೆ ಪಡೆದಿದ್ದರು. ಸೋಮವಾರ ಬೆಳಗಿನ ಅವಧಿಯಲ್ಲಿ ಕೇವಲ ಎರಡು ತಾಸಿನಲ್ಲೇ 108 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಿದ್ದು ಕಂಡುಬಂದಿತು.

ಈ ಕುರಿತು ಮಾಹಿತಿ ನೀಡಿದ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ‘ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು ನೋಂದಣಿ ಸಂಖ್ಯೆ ಇಲ್ಲದಿರುವುದು, ಇದ್ದರೂ ಎದ್ದು ಕಾಣದಂತಿರುವುದು, ಕೆಲವು ವಾಹನಗಳಿಗೆ ಒಂದು ಬದಿಯಲ್ಲಿರುವುದು ಕಂಡುಬಂದಿದೆ. ದಾಖಲೆಗಳನ್ನು ಪರಿಶೀಲಿಸಿ ದಂಡ ವಿಧಿಸಿ ಕೆಲವು ವಾಹನಗಳನ್ನು ಹಿಂತಿರುಗಿಸಲಾಗಿದೆ. ಆದರೆ ಪುನಃ ತಪ್ಪು ಮಾಡಿದರೆ ವಾಹನಗಳನ್ನು ವಶಕ್ಕೆ ಪಡೆದು ಬಿಡುವುದಿಲ್ಲ. ಅದೇ ರೀತಿ ದಾಖಲೆ ಇಲ್ಲದ ಕೆಲ ವಾಹನಗಳನ್ನು ಹಿಂತಿರುಗಿಸಿಲ್ಲ’ ಎಂದರು.

‘ಸದ್ಯ ಪಟ್ಟಣದಲ್ಲಿ ಮಾತ್ರ ಕಾರ್ಯಾಚರಣೆ ನಡೆಯುತ್ತಿದ್ದು, ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಈ ಕ್ರಮ ಜರುಗಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಅಸಮಾಧಾನ: ವಾಹನಗಳನ್ನು ಸಾಮೂಹಿಕವಾಗಿ ಜಪ್ತಿ ಮಾಡುತ್ತಿರುವುದಕ್ಕೆ ಕೆಲ ರಾಜಕೀಯ ವ್ಯಕ್ತಿಗಳು ಪೊಲೀಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ ವಾಹನ ಬಿಡುವಂತೆ ಒತ್ತಾಯಿಸಿದ್ದಾರೆ ಎಂಬುದು ಗೊತ್ತಾಗಿದೆ. ಅಲ್ಲದೆ ಕೆಲ ವಾಹನಗಳನ್ನು ಪೊಲೀಸರು ಪರಿಶೀಲಿಸದೆ ಬಿಟ್ಟಿದ್ದಾರೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ವ್ಯಕ್ತಿಯೊಬ್ಬರು ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT