ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಮತದಾನ ಹೆಚ್ಚಳಕ್ಕೆ ಬಿಸಿಲೇ ಸವಾಲು

ನಿರಂತರ ಸ್ವೀಪ್‌ ಚಟುವಟಿಕೆಗಳ ಶ್ರಮಕ್ಕೆ ಲಭಿಸುವುದೇ ಫಲ?
Published 6 ಮೇ 2024, 14:11 IST
Last Updated 6 ಮೇ 2024, 14:11 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಶತಾಯುಗತಾಯು ಹೆಚ್ಚಿಸಲೇಬೇಕು ಎಂದು ಜಿಲ್ಲಾ ಸ್ವೀಪ್‌ ಸಮಿತಿ ಜಿಲ್ಲೆಯಾದ್ಯಂತ ಅನೇಕ ಜಾಗೃತಿ ಕಾರ್ಯಕ್ರಮಗಳು ನಡೆಸಿದ್ದು ಅದಕ್ಕೆ ಫಲ ಲಭಿಸುವುದೇ ಎನ್ನುವುದು ಮಂಗಳವಾರ ಗೊತ್ತಾಗಲಿದೆ.

ಆದರೆ, ನಿರಂತರವಾಗಿ ಏರುತ್ತಲೇ ಇರುವ ಬಿಸಿಲಿನ ತಾಪಮಾನ ಮತ್ತು ಬಿಸಿಗಾಳಿ ಮತದಾನದ ಮೇಲೆ ಪರಿಣಾಮ ಬೀರಬಹುದು ಎನ್ನುವ ಆತಂಕ ವ್ಯಕ್ತವಾಗಿದೆ. ಇತ್ತೀಚೆಗಿನ ಹಲವು ದಿನಗಳಿಂದ ಜಿಲ್ಲೆಯಲ್ಲಿ 40 ಕ್ಕಿಂತಲೂ ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಭಾರತ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮತದಾನ ನಡೆಯುವ ಮಂಗಳವಾರ 41ರಷ್ಟು ತಾಪಮಾನ ದಾಖಲಾಗುವ ಸಾಧ್ಯತೆಯಿದೆ.

ಆದ್ದರಿಂದ ಮತದಾನ ಪ್ರಮಾಣ ಹೆಚ್ಚಿಸುವುದು ಸ್ವೀಪ್‌ ತಂಡಕ್ಕೆ ಈಗ ಸವಾಲಿನ ಕೆಲಸವಾಗಿದೆ. ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಜಾಥಾ, ಮೇಣದ ಬತ್ತಿ ಮೆರವಣಿಗೆ, ಬೈಕ್‌ ರ್‍ಯಾಲಿ, ಕಾಲೇಜುಗಳಿಗೆ ಓಡಾಡಿ ಮೊದಲ ಬಾರಿಗೆ ಮತದಾನ ಮಾಡಲು ಕಾಯುತ್ತಿರುವ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ.

ಬಿಸಿಲು ಹೆಚ್ಚಿರುವ ಕಾರಣ ಮತದಾರರಿಗೆ ಹಾಗೂ ಕರ್ತವ್ಯ ನಿರತ ಸಿಬ್ಬಂದಿಗೆ ತೊಂದರೆಯಾಗಬಾರದೆಂದು ಅಗತ್ಯ ಇರುವಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗಿದೆ.
ರಾಹುಲ್‌ ರತ್ನಂ ಪಾಂಡೆಯ, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ, ಕೊಪ್ಪಳ

ಆದರೆ ಬಿಸಿಲು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ಮತದಾನದ ಪ್ರಮಾಣ ಹೆಚ್ಚಿಸಿದರೆ ಫಲಿತಾಂಶವೂ ನಮ್ಮ ಪರವಾಗಿ ಬರುತ್ತದೆ ಎನ್ನುವ ಲೆಕ್ಕಾಚಾರ ಹೊಂದಿರುವ ಅಭ್ಯರ್ಥಿಗಳು ಹಾಗೂ ಪಕ್ಷಗಳು ಬಿಸಿಲಿನ ಕಾವು ಏರುವ ಮೊದಲೇ ಮತದಾನ ಮಾಡುವಂತೆ ಮಾಡಲು ತಿಳಿಸುತ್ತಿವೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6 ಗಂಟೆಯ ತನಕ ಜರುಗಲಿದೆ.

ಸುಸ್ತಾದ ಸಿಬ್ಬಂದಿ: ಇಲ್ಲಿನ ಗವಿಮಠದ ಆವರಣದ ಕಾಲೇಜಿನಲ್ಲಿ ಸೋಮವಾರ ನಡೆದ ಮಸ್ಟರಿಂಗ್‌ ಕಾರ್ಯದ ವೇಳೆ ಹಲವು ಸಿಬ್ಬಂದಿ ಬಿಸಿಲಿನ ಹೊಡೆತಕ್ಕೆ ಸುಸ್ತಾದರು. ಒಬ್ಬ ಸಿಬ್ಬಂದಿಗೆ ತಲೆ ಸುತ್ತು ಬಂದ ಘಟನೆಯೂ ನಡೆಯಿತು.

ಬಂದೋಬಸ್ತ್‌ ಕರ್ತವ್ಯಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸರು ಮತ್ತು ನಾಗಲ್ಯಾಂಡ್‌ನ ಸ್ಟೇಟ್‌ ಆರ್ಮಿ ರಿಸರ್ವ್‌ (ಎಸ್‌ಎಪಿ) ತಂಡದಿಂದ 216 ಜನ ಸಿಬ್ಬಂದಿಯೂ ಇಲ್ಲಿಗೆ ಬಂದಿದ್ದಾರೆ. ನಾಗಲ್ಯಾಂಡ್‌ ಇಲ್ಲಿಗಿಂತಲೂ ಬಿಸಿಲಿನ ಪ್ರಮಾಣ ಕಡಿಮೆಯಿರುವ ಕಾರಣ ಸಿಬ್ಬಂದಿಗೆ ಜಿಲ್ಲೆಯ ಬಿಸಿಲು ಸಹಿಸುವುದೇ ದೊಡ್ಡ ತಲೆನೋವಾಗಿದೆ.

ಜಿಲ್ಲಾಡಳಿತ ಚುನಾವಣಾ ಸಿಬ್ಬಂದಿಗೆ ಮಸ್ಟರಿಂಗ್‌ ಕೇಂದ್ರದಲ್ಲಿ ನೀರು ಹಾಗೂ ಊಟದ ವ್ಯವಸ್ಥೆ ಮಾಡಿ ಬಿಸಿಲು ಕಾಡದಂತೆ ಅಲ್ಲಲ್ಲಿ ಶಾಮಿಯಾನಗಳನ್ನು ಹಾಕಿತ್ತು. ಮರದ ನೆರಳು, ಗವಿಮಠದ ಕಾಲೇಜಿನ ಆವರಣದಲ್ಲಿಯೂ ಹಲವು ಸಿಬ್ಬಂದಿ ವಿಶ್ರಾಂತಿ ಪಡೆದ ಚಿತ್ರಣ ಕಂಡುಬಂದಿತು.

ಮತದಾನಕ್ಕೆ ದುಬೈನಿಂದ ಬಂದ ದಂಪತಿ

ಗಂಗಾವತಿ: ಸ್ವಂತ ಊರಿನಲ್ಲಿದ್ದರೂ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುವವರೇ ಹೆಚ್ಚು. ಆದರೆ ದಂಪತಿ ಪ್ರಜಾಪ್ರಭುತ್ವದ ಮೌಲ್ಯ ಸಾರಲು ಮತದಾನಕ್ಕಾಗಿ ದುಬೈನಿಂದ ಇಲ್ಲಿಗೆ ಬಂದಿದ್ದಾರೆ. ದುಬೈನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಉದ್ಯಮಿ ಅರ್ಹಾಳ್‌ ಶರಣಪ್ಪ ಅವರ ಪುತ್ರಿ ಐಶ್ವರ್ಯಾ ಮತ್ತು ಅಳಿಯ ಕಿರಣ್ ಪಾಟೀಲ್‌ ತವರಿಗೆ ಬಂದಿದ್ದು ಮಂಗಳವಾರ ಮತದಾನದ ಹಕ್ಕು ಚಲಾಯಿಸುವರು. ಈ ದಂಪತಿಗೆ ಗಂಗಾವತಿ ತಾಲ್ಲೂಕು ಸ್ವೀಪ್‌ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.  ಜಿಲ್ಲೆಯ ಚುನಾವಣಾ ಆಯೋಗ ಐಕಾನ್‌ ಡಾ. ಶಿವಕುಮಾರ್ ಮಾಲಿಪಾಟೀಲ್ ಅಂಗವಿಕಲರ ಪ್ರತಿಭೆ ಹನುಮೇಶ್ ಪೂಜಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT