ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಕೊಳವೆಗೆ ಧಕ್ಕೆ, ಕುಷ್ಟಗಿಗೆ ಕೃಷ್ಣಾ ನೀರು ಸ್ಥಗಿತ

ವಾರದಿಂದಲೂ ನೀರಿಗೆ ಜನರ ಪರದಾಟ, ಮಾಹಿತಿ ನೀಡದ ಅಧಿಕಾರಿಗಳು
Published 18 ಡಿಸೆಂಬರ್ 2023, 14:39 IST
Last Updated 18 ಡಿಸೆಂಬರ್ 2023, 14:39 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣಕ್ಕೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಸುವ ಮುಖ್ಯಕೊಳವೆ ದುರಸ್ತಿಗೆ ಬಂದಿದ್ದರಿಂದ ಕಳೆದ ಒಂದು ವಾರದಿಂದಲೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ನೀರು ಸರಬರಾಜು ಮಾಡುವ ಹೊಣೆ ರಾಜ್ಯದ ಒಳಚರಂಡಿ ಮತ್ತು ನಗರ ನೀರು ಸರಬರಾಜು ಮಂಡಳಿಗೆ ಸೇರಿದ್ದು ದುರಸ್ತಿ ಸೇರಿದಂತೆ ನಿರ್ವಹಣೆಗೆ ಸಂಬಂಧಿಸಿದ ಖರ್ಚು ಇಲ್ಲಿಯ ಪುರಸಭೆಗೆ ಸೇರಿದೆ. ಆದರೆ ಪುರಸಭೆ ಮತ್ತು ಕೆಯುಡಬ್ಲೂಎಸ್‌ ಮಧ್ಯೆ ಸಮನ್ವಯ ಕೊರತೆಯಿಂದಾಗಿ ಪದೇಪದೇ ನೀರು ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ನಾಲ್ಕು ಕೊಳವೆ ಮಾರ್ಗಗಳ ಮೂಲಕ ಸುಮಾರು 40ಕಿಮೀ ದೂರದಿಂದ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತಿದ್ದು ಅವುಗಳ ಪೈಕಿ ಹುನಗುಂದ ತಾಲ್ಲೂಕಿನ ಅಮರಾವತಿ ಹಳ್ಳ, ಮುದಗಲ್‌ ರಸ್ತೆ ಮತ್ತು ಹುನಗುಂದ ಬಳಿ ಇರುವ ಮುಖ್ಯಕೊಳವೆಗಳಿಗೆ ಧಕ್ಕೆಯಾಗಿ ತಿಂಗಳ ಹಿಂದೆಯೇ ಸಣ್ಣ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿತ್ತು. ಆಗಲೇ ದುರಸ್ತಿ ಕೈಗೊಂಡಿದ್ದರೆ ಮಂಡಳಿಯ ಸಮಯ ಮತ್ತು ಪುರಸಭೆ ಹಣ ಎರಡರಲ್ಲೂ ಉಳಿತಾಯವಾಗುತ್ತಿತ್ತು. ಈ ವಿಷಯವನ್ನು ಮಂಡಳಿ ಅನೇಕ ಬಾರಿ ಪತ್ರ ಬರೆದು ಎಚ್ಚರಿಸಿದರೂ ಪುರಸಭೆ ನಿದ್ರಾವಸ್ಥೆಯಿಂದ ಏಳಲಿಲ್ಲ ಎಂದು ಹೇಳಲಾಗುತ್ತಿದೆ.

ಪುರಸಭೆ ನಿರ್ಲಕ್ಷ್ಯದಿಂದ ಜನರು ಈಗ ತೊಂದರೆ ಅನುಭವಿಸುವಂತಾಗಿದೆ. ನೀರಿಗಾಗಿ ಖಾಸಗಿ ಟ್ಯಾಂಕರ್‌, ಕೊಳವೆ ಬಾವಿಗಳ ಮೊರೆ ಹೋಗುತ್ತಿದ್ದಾರೆ. ಪುರಸಭೆ ನೀರು ಪೂರೈಕೆ ವ್ಯವಸ್ಥೆಯೂ ಸಮಾಧಾನಕರವಾಗಿಲ್ಲ. ತಮ್ಮ ವೈಯಕ್ತಿಕ ಕೆಲಸಗಳಿಗೆ ಆಸಕ್ತಿ ತೋರಿಸುವ ಪುರಸಭೆಯ ಕೆಲ ಸದಸ್ಯರು ಜನರ ಸಮಸ್ಯೆಯತ್ತ ಮಾತ್ರ ಗಮನಹರಿಸುವುದಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಪಾವತಿಯಾಗದ ಬಾಕಿ: ಈ ಮಧ್ಯೆ ನೀರು ಪೂರೈಕೆ ವ್ಯವಸ್ಥೆಯ ನಿರ್ವಹಣೆ ಪುರಸಭೆಗೆ ಸೇರಿದ್ದು ಕೆಲಸ ಮಾಡುವುದು ಕೆಯುಡಬ್ಲೂಎಸ್‌ದವರು. ಹಾಗಾಗಿ ಮಾಸಿಕ ಹಣ ಪಾವತಿಸಬೇಕಾಗುತ್ತದೆ. ಅದರ ಮೊತ್ತವೇ ಈಗ ₹1.30 ಕೋಟಿಯಷ್ಟು ಬಾಕಿ ಉಳಿದಿದೆ. ಪುರಸಭೆ ಹಣ ಪಾವತಿಸದ ಕಾರಣ ಮಂಡಳಿ ನೀರು ಪೂರೈಕೆ ಸ್ಥಗಿತಗೊಳಿಸಿದೆ ಎಂಬ ಆರೋಪ ಸಹ ಕೇಳಿಬಂದಿದೆ.

ಈ ಕುರಿತು ಮಾಹಿತಿಗಾಗಿ ಸಂಪರ್ಕಿಸಿದರೆ ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಕರೆ ಸ್ವೀಕರಿಸಲಿಲ್ಲ.

ವಾರದಿಂದ ನೀರು ಬಂದಾಗಿದ್ದರೂ ಪುರಸಭೆ ನಿರ್ಲಕ್ಷ್ಯ ಮುಂದುವರೆದಿದೆ ಸಮಸ್ಯೆ ಪರಿಹಾರಕ್ಕೆ ಶಾಸಕರೂ ಗಮನಹರಿಸಿಲ್ಲ.

-ಅನ್ವರ್‌ ಅತ್ತಾರ್, ಕೆಡಿಪಿ ಸದಸ್ಯ

‘ಬಾಕಿ ಕಾರಣಕ್ಕೆ ನಿಲ್ಲಿಸಿಲ್ಲ’

‘ಪುರಸಭೆ ಬಾಕಿ ಪಾವತಿಸದ ಕಾರಣಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿದೆ ಎಂಬುದು ತಪ್ಪು ನೀರು ಅವಶ್ಯಕ ಮೂಲಸೌಲಭ್ಯಗಳಲ್ಲಿ ಒಂದಾಗಿದ್ದು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಮೂರು ಕಡೆ ದುರಸ್ತಿಯಾಗಬೇಕಿದ್ದರಿಂದ ವಿಳಂಬವಾಗಿದೆ’ ಎಂದು ಕೆಯುಡಬ್ಲೂಎಸ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೀಣಾ ಸೀತಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು. ಈಗ ಕೆಲಸ ಪೂರ್ಣಗೊಂಡು ನೀರು ಪೂರೈಕೆ ಯಂತ್ರಗಳು ಕಾರ್ಯಾರಂಭ ಮಾಡಿವೆ ಮಂಗಳವಾರ ಬೆಳಿಗ್ಗೆ ಪಟ್ಟಣಕ್ಕೆ ನೀರು ತಲುಪುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT