ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಮನಸ್ಸಲ್ಲಿ ಉಲ್ಲಾಸದ ಮಳೆ

ವರುಣನ ಸಿಂಚನಕ್ಕೆ ಸಂಭ್ರಮಿಸಿದ ಜನ, ತಂಪಾದ ಭೂಮಿ
Published 13 ಏಪ್ರಿಲ್ 2024, 15:38 IST
Last Updated 13 ಏಪ್ರಿಲ್ 2024, 15:38 IST
ಅಕ್ಷರ ಗಾತ್ರ

ಕೊಪ್ಪಳ: ಬಿರುಬಿಸಿಲು, ಅರೆತಾಪ, ಕಾದು ಕೆಂಡವಾಗಿದ್ದ ನೆಲ ಮತ್ತು ಝಳಕ್ಕೆ ರೋಸಿ ಹೋಗಿದ್ದ ಜಿಲ್ಲೆಯ ಜನರಿಗೆ ಶನಿವಾರ ಸುರಿದ ಮಳೆ ಭಾರಿ ಖುಷಿ ನೀಡಿತು. ಮನಸ್ಸೂ ಉಲ್ಲಸಿತವಾಯಿತು.

ಹಿಂದಿನ ವರ್ಷದಿಂದ ಎಲ್ಲರ ಬಾಯಲ್ಲೂ ಬರೀ ಬರಗಾಲದ್ದೇ ಮಾತು. ಇದು ಜನರಲ್ಲಿಯೂ ಬೇಸರ ಮೂಡಿಸಿತು. ರೈತಾಪಿ ವರ್ಗವಂತೂ ಬಳಲಿ ಬೆಂಡಾಗಿತ್ತು. ಜನ, ಬೀದಿಬದಿ ವ್ಯಾಪಾರಿಗಳು 41 ಹಾಗೂ 42 ಡಿಗ್ರಿ ಸೆಲ್ಸಿಯಸ್‌ ಬಿರುಬಿಸಿಲಿನಲ್ಲಿಯೂ ವ್ಯಾಪಾರ ಮಾಡಿ ಸುಸ್ತಾಗಿದ್ದರು. ಆದ್ದರಿಂದ ಒಂದಷ್ಟು ಮಳೆಗಾಗಿ ಜಿಲ್ಲೆಯ ಜನ ಕಾಯುತ್ತಿದ್ದರು. ಶನಿವಾರ ಸಂಜೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುರಿದ ಮಳೆ ಭೂಮಿಗೆ ತಂಪೆರೆಯಿತು.

ಮೊದಲೆಲ್ಲ ಮಳೆ ಬಂದರೆ ಜನ ಕೊಡೆ ಹಿಡಿದು ಸಾಗುತ್ತಿದ್ದರು. ಇಲ್ಲವೇ ಸಮೀಪದ ಸ್ಥಳದಲ್ಲಿ ಮಳೆಯ ನೀರು ಬಿಡದ ಸ್ಥಳದಲ್ಲಿ ಆಸರೆ ಪಡೆಯುತ್ತಿದ್ದರು. ಆದರೆ ಮಳೆ ಸುರಿದಾಗ ಅನೇಕ ಜನ ಯುವಕರು ನಗರದಲ್ಲಿ ಬಕೆಟ್‌ನಲ್ಲಿ ತುಂಬಿಕೊಂಡು ಮೈ ಮೇಲೆ ಸುರಿದುಕೊಂಡು ಸಂಭ್ರಮಿಸಿದರು. ಬೀದಿಬದಿಯ ಪಾನಿಪೂರಿ ಮಾರಾಟ ಮಾಡುವ ವ್ಯಾಪಾರಿಗಳು ತಲೆಯ ಮೇಲೆ ಹೊತ್ತು ಮಳೆಯಲ್ಲಿಯೇ ಸಾಗಿ ಸಡಗರ ಪಟ್ಟ ಕ್ಷಣಗಳೂ ಕಂಡುಬಂದವು.

ನಿತ್ಯ ಕೆಲಸ ಮಾಡುವ ಕಾರ್ಮಿಕರು ಮನೆಗೆ ವಾಪಸ್‌ ಹೋಗುವಾಗ ಪ್ಲಾಸ್ಟಿಕ್‌ ಚೀಲ ಹೊದ್ದು ಹೋಗುತ್ತಿದ್ದದ್ದು, ಬೈಕ್‌ ಮೇಲೆ ಹೊರಟಿದ್ದು, ಒಂದೇ ಟವಲ್‌ ಹಂಚಿಕೊಂಡು ಇಬ್ಬರು ಹೊದ್ದು ನಡೆದಿದ್ದು, ಮಳೆಯಲ್ಲಿ ನೆನೆಯುತ್ತ ಸೈಕಲ್‌ ತುಳಿಯುತ್ತ ಹೊರಟ ವೃದ್ಧ, ಸಾಮಾನು ಸರಂಜಾಮುಗಳನ್ನು ಬೈಕ್‌ಮೇಲೆ ಹೇರಿಕೊಂಡು ಮಳೆಯಲ್ಲಿ ಹೊರಟಿದ್ದು ಹೀಗೆ ಅನೇಕ ಖುಷಿಯ ಕ್ಷಣಗಳಿಗೂ ಮಳೆ ಸಾಕ್ಷಿಯಾಯಿತು.

ಒಂದೇ ಟವಲನ್ನು ಅರ್ಧರ್ಧ ಹೊದ್ದು ಮಳೆಯಲ್ಲಿಯೇ ಮಾತನಾಡುತ್ತ ಹೊರಟ ವ್ಯಕ್ತಿಗಳು
ಒಂದೇ ಟವಲನ್ನು ಅರ್ಧರ್ಧ ಹೊದ್ದು ಮಳೆಯಲ್ಲಿಯೇ ಮಾತನಾಡುತ್ತ ಹೊರಟ ವ್ಯಕ್ತಿಗಳು
ಮಳೆಯಲ್ಲಿ ನೆನೆಯುತ್ತ ಸೈಕಲ್‌ ತುಳಿಯುತ್ತ ಹೊರಟ ವೃದ್ಧ
ಮಳೆಯಲ್ಲಿ ನೆನೆಯುತ್ತ ಸೈಕಲ್‌ ತುಳಿಯುತ್ತ ಹೊರಟ ವೃದ್ಧ
ಸಾಮಗ್ರಿ ಸರಂಜಾಮುಗಳನ್ನು ಬೈಕ್‌ಮೇಲೆ ಹೇರಿಕೊಂಡು ಮಳೆಯಲ್ಲಿಯೇ ಹೊರಟ ಸವಾರ
ಸಾಮಗ್ರಿ ಸರಂಜಾಮುಗಳನ್ನು ಬೈಕ್‌ಮೇಲೆ ಹೇರಿಕೊಂಡು ಮಳೆಯಲ್ಲಿಯೇ ಹೊರಟ ಸವಾರ
ಬೀದಿಬದಿ ವ್ಯಾಪಾರಿಗಳು ಮಳೆಯಲ್ಲಿಯೇ ನೆಂದುಕೊಡ ಹೋದ ಚಿತ್ರಣ
ಬೀದಿಬದಿ ವ್ಯಾಪಾರಿಗಳು ಮಳೆಯಲ್ಲಿಯೇ ನೆಂದುಕೊಡ ಹೋದ ಚಿತ್ರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT