ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ ಲೋಕಸಭಾ ಕ್ಷೇತ್ರ: ಎದುರಾಳಿಗಳು ಸ್ನೇಹಿತರಾಗುವ ಸಮಯ

ಟಿಕೆಟ್‌ಗಾಗಿ ಹಲವರ ಪಟ್ಟು
Published 9 ಮಾರ್ಚ್ 2024, 0:58 IST
Last Updated 9 ಮಾರ್ಚ್ 2024, 0:58 IST
ಅಕ್ಷರ ಗಾತ್ರ

ಕೊಪ್ಪಳ: ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಭಿನ್ನ ಪಕ್ಷಗಳಲ್ಲಿದ್ದುಕೊಂಡು ಸವಾಲು ಎದುರಿಸಿದ್ದ ‘ಹಳೆಯ ಸ್ನೇಹಿತರು’ ಈಗ ಒಂದಾಗುವ ಸಮಯ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದು ಇದಕ್ಕೆ ಕಾರಣ.

ಸತತ ಎರಡು ಬಾರಿ ಸಂಸದರಾಗಿರುವ ಬಿಜೆಪಿಯ ಸಂಗಣ್ಣ ಕರಡಿ ಮೂರನೇ ಬಾರಿಯೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಮೊದಲು ಬಿಜೆಪಿಯಲ್ಲಿದ್ದ ಸಿ.ವಿ.ಚಂದ್ರಶೇಖರ್‌ ಅವರಿಗೆ ಹಿಂದಿನ ಎರಡೂ ವಿಧಾನಸಭಾ ಚುನಾವಣೆಗಳಲ್ಲಿ ಟಿಕೆಟ್‌ ಸಿಗದ ಕಾರಣಕ್ಕೆ ಅವರು ಪಕ್ಷ ತೊರೆದು ಕಳೆದ ವರ್ಷ ಜೆಡಿಎಸ್‌ ಸೇರಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

2018ರಲ್ಲಿ ಚಂದ್ರಶೇಖರ್‌ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರೂ ಪಕ್ಷ ಸಂಸದರ ಪುತ್ರ ಅಮರೇಶ ಕರಡಿ ಅವರಿಗೆ, 2023ರಲ್ಲಿ ಸಂಸದರ ಸೊಸೆ ಮಂಜುಳಾ ಕರಡಿ ಅವರಿಗೆ ಟಿಕೆಟ್‌ ನೀಡಿತ್ತು. ಸಂಸದರ ಕುಟುಂಬ ರಾಜಕಾರಣದ ಲಾಬಿಯಿಂದಲೇ ಎರಡೂ ಬಾರಿ ಟಿಕೆಟ್ ಕೈ ತಪ್ಪಿದೆ ಎನ್ನುವ ಕಾರಣಕ್ಕೆ ಚಂದ್ರಶೇಖರ್‌ ಬಿಜೆಪಿ ತೊರೆದಿದ್ದರು.

ಅನೇಕ ವರ್ಷ ಒಂದೇ ಪಕ್ಷದಲ್ಲಿದ್ದ ಸಂಗಣ್ಣ ಕರಡಿ ಮತ್ತು ಚಂದ್ರಶೇಖರ್‌ ಕಳೆದ ವರ್ಷದಿಂದ ರಾಜಕೀಯ ಎದುರಾಳಿಗಳಾಗಿದ್ದಾರೆ. ಇವರ ಒಡಕು ಕೊಪ್ಪಳ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ ಅವರ ಗೆಲುವಿಗೆ ಅನುಕೂಲವಾಗಿತ್ತು.

ಪೈಪೋಟಿ: ಈಗ ಸಂಗಣ್ಣ ಕರಡಿ, ಚಂದ್ರಶೇಖರ್‌ ಇಬ್ಬರೂ ‘ನನಗೇ ಟಿಕೆಟ್‌ ನೀಡಬೇಕು’ ಎಂದು ವರಿಷ್ಠರಿಗೆ ದುಂಬಾಲು ಬಿದಿದ್ದಾರೆ. ಟಿಕೆಟ್‌ಗಾಗಿ ಇವರ ಪೈಪೋಟಿ ಒಂದೆಡೆಯಾದರೆ, ವೃತ್ತಿಯಲ್ಲಿ ವೈದ್ಯರಾಗಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಬಸವರಾಜ ಕೂಡ ಟಿಕೆಟ್‌ಗಾಗಿ ತಮ್ಮ ಆಪ್ತ ಬಳಗದವರನ್ನು ಕರೆದುಕೊಂಡು ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಹೀಗಾಗಿ ಟಿಕೆಟ್‌ಗಾಗಿ ತುರುಸಿನ ಪೈಪೋಟಿ ನಡೆದಿದೆ.

ಕಾಂಗ್ರೆಸ್‌ನಲ್ಲಿಯೂ ಹೋರಾಟ: ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿಯೂ ಪ್ರಮುಖವಾಗಿ ಮೂವರ ನಡುವೆ ಪೈಪೋಟಿ ಏರ್ಪಟ್ಟಿದೆ.

ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಸಹೋದರ ರಾಜಶೇಖರ ಹಿಟ್ನಾಳ ಈ ಬಾರಿಯೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ಸಿಂಧನೂರಿನ ಬಸನಗೌಡ ಬಾದರ್ಲಿ ಕೂಡ ಟಿಕೆಟ್‌ ಗಟ್ಟಿಸಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. 

ಸಿ.ವಿ. ಚಂದ್ರಶೇಖರ್‌
ಸಿ.ವಿ. ಚಂದ್ರಶೇಖರ್‌

ಬಿಜೆಪಿ ಸೇರುವರೇ ಚಂದ್ರಶೇಖರ್‌?

ಮುನಿಸು ಮರೆತು ಪಕ್ಷಕ್ಕೆ ಮರಳುವಂತೆ ಬಿಜೆಪಿಯ ಹಲವು ನಾಯಕರು ಸಿ.ವಿ.ಚಂದ್ರಶೇಖರ್‌ ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದು ಮಾತೃಪಕ್ಷಕ್ಕೆ ಮರಳಿ ಬರುತ್ತಾರೆ ಎನ್ನುವ ಚರ್ಚೆ ಜಿಲ್ಲೆಯ ರಾಜಕೀಯ ವಲಯದಲ್ಲಿದೆ. ಪಕ್ಷಗಳ ವರಿಷ್ಠರು ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಚಂದ್ರಶೇಖರ್‌ ಅವರು ಪಕ್ಷ ತಿಳಿಸುವ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆಯೊ? ಅಥವಾ ಮಾತೃ ಪಕ್ಷಕ್ಕೆ ಮರಳಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಾರೋ ಎನ್ನುವ ಕುತೂಹಲವಿದೆ. ಈ ಬಗ್ಗೆ ಅವರನ್ನು ಕೇಳಿದಾಗ ‘ಬಿಜೆಪಿಯಿಂದ ಟಿಕೆಟ್‌ ನೀಡಿದರೆ ಮಾತ್ರ ಆ ಪಕ್ಷ ಸೇರುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT