ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಜನಾದ್ರಿ: ಸಂಚಾರ ದಟ್ಟಣೆ, ಸಾರ್ವಜನಿಕರ ಪರದಾಟ

Published 26 ಮೇ 2024, 3:15 IST
Last Updated 26 ಮೇ 2024, 3:15 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ದೇವಸ್ಥಾನದ ಬಳಿ ರಸ್ತೆಬದಿ ಭಕ್ತರು ಕಾರು, ಬೈಕ್, ಆಟೊಗಳನ್ನು ನಿಲ್ಲಿಸಿ, ದೇವರ ದರ್ಶನಕ್ಕೆ ಬೆಟ್ಟವೇರಿದ್ದರಿಂದ ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅಂಜನಾದ್ರಿ ಬೆಟ್ಟದ ಮುಂಭಾಗ, ಹನುಮನಹಳ್ಳಿ ಗ್ರಾಮದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಪರಿತಪಿಸಿದರು.

ಕಳೆದ ಒಂದು ವಾರದಿಂದ ಗಂಗಾವತಿ ಸುತ್ತಮುತ್ತ ಉತ್ತಮ ಮಳೆಯಾಗಿ, ಬಿಸಿಲಿನ ತಾಪಮಾನ ಕಡಿಮೆಯಾಗಿದೆ. ಮಳೆಯಿಂದ ವಾತಾವರಣ ತಂಪಾದ ಹಿನ್ನೆಲೆಯಲ್ಲಿ ಶನಿವಾರ ಅಂಜನಾದ್ರಿ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು.

ಶುಕ್ರವಾರ ಸುರಿದ ಮಳೆಗೆ ಅಂಜನಾದ್ರಿ ಸುತ್ತಮುತ್ತಲಿನ ಜಮೀನುಗಳು ಕೆಸರಿನಿಂದ ಕೂಡಿದ್ದು, ಬೈಕ್, ಕಾರು, ಆಟೊಗಳನ್ನು ನಿಲ್ಲಿಸಲು ಆಗದಂತೆ ಪರಿಸ್ಥಿತಿ ಎದುರಾದ್ದರಿಂದ ಭಕ್ತರು ತಮ್ಮ ವಾಹನಗಳನ್ನು ರಸ್ತೆ ಬದಿಗೆ ನಿಲ್ಲಿಸಿದ್ದು, ಬೃಹತ್ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಕೆಲ ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿ ಸವಾರರು ಮುಂದೆ ಸಾಗಲು ಪರದಾಡಿದರು.

ನಿಷೇಧಿತ ಸ್ಥಳದಲ್ಲಿ ಪಾರ್ಕಿಂಗ್: ಅಂಜನಾದ್ರಿ ಬಳಿ ಪೊಲೀಸ್ ಇಲಾಖೆ ಅಲ್ಲಲ್ಲಿ ರಸ್ತೆಬದಿ ವಾಹನ ನಿಲುಗಡೆಗೆ ನಿಷೇಧವಿದೆ ಎಂದು ನಾಮಫಲಕಗಳು ಅಳವಡಿಸಿದ್ದು, ಅಲ್ಲಿಯೇ ಕಾರು, ಬೈಕ್, ಆಟೊಗಳು ನಿಲ್ಲಿಸಲಾಗಿತ್ತು.

ಹನುಮನಹಳ್ಳಿ ಗ್ರಾಮದ ಬಳಿ ಸಂಚಾರ ದಟ್ಟಣೆ ಉಂಟಾಗಿ, ಸವಾರರು ರಸ್ತೆಗೆ ಗಾಡಿಗಳನ್ನು ನಿಲ್ಲಿಸಿ, ತಾ ಮುಂದು, ನಾ ಮುಂದು ಜಗಳವಾಡುತ್ತಿದ್ದರೂ, ಯಾವೋಬ್ಬ ಪೊಲೀಸ್ ಅಧಿಕಾರಿಯೂ ಸಂಚಾರ ದಟ್ಟಣೆ ತಪ್ಪಿಸಲು ಸ್ಥಳಕ್ಕೆ ಧಾವಿಸಲಿಲ್ಲ. ಸಾರ್ವಜನಿಕರೇ ತಾಳ್ಮೆಯಿಂದ ಒಬ್ಬರಿಗೊಬ್ಬರು ಅನುಸರಿಸಿಕೊಂಡು ಸಂಚಾರ ದಟ್ಟಣೆ ತಪ್ಪಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇಷ್ಟೆಲ್ಲ ಸಮಸ್ಯೆ ಉಂಟಾದರೂ ಸಂಜೆಯವರೆಗೆ ಭಕ್ತರ ವಾಹನಗಳನ್ನು ರಸ್ತೆಬದಿಯೇ ನಿಲ್ಲಿಸಲಾಗಿತ್ತು. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ತೆರವಿಗೆ ಪೊಲೀಸರು ಮುಂದಾಗಲಿಲ್ಲ ಎಂದು ಗ್ರಾಮಸ್ಥರು ದೂರಿದರು.

‘ಅಂಜನಾದ್ರಿ ಬೆಟ್ಟಕ್ಕೆ ಶನಿವಾರ, ಭಾನುವಾರ, ಹಬ್ಬ-ಹರಿದಿನಗಳಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಭಕ್ತರು ಕಾರು, ಆಟೊ, ಬೈಕ್, ಟಿಂಪೋ ಸೇರಿ ಇತರೆ ವಾಹನಗಳನ್ನು ರಸ್ತೆಬದಿಯೇ ನಿಲ್ಲಿಸಿ ದರ್ಶನಕ್ಕೆ ಹೋಗುವುದರಿಂದ ತುಂಬ ಸಲ ವಾಹನ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ಸಮಸ್ಯೆಯಾಗುತ್ತಿದೆ. ಇಲ್ಲಿ ಪೊಲೀಸ್ ಸಿಬ್ಬಂದಿ ಸರಿಯಾಗಿ ಕರ್ತವ್ಯ  ನಿರ್ವಹಿ ಸುವುದಿಲ್ಲ’ ಎಂದು ವಿಜಯನಗರ ಜಿಲ್ಲೆಯ ಭಕ್ತ ಮಂಜುನಾಥ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT