ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾತನಹಳ್ಳಿಯಿಂದ ಮಂಡ್ಯಕ್ಕೆ ರೈತರ 40 ಕಿ.ಮೀ. ಪಾದಯಾತ್ರೆ

ಸಾರ್ವಜನಿಕ ಕೊಳವೆ ಭಾವಿ ಅಕ್ರಮ ಸ್ವಾಧೀನ ಹರಾಜು
Published 1 ಜೂನ್ 2024, 15:07 IST
Last Updated 1 ಜೂನ್ 2024, 15:07 IST
ಅಕ್ಷರ ಗಾತ್ರ

ಭಾರತೀನಗರ: ‘ಸಾರ್ವಜನಿಕ ಉಪಯೋಗಕ್ಕಾಗಿ ನಿರ್ಮಿಸಲಾಗಿದ್ದ ಕೈ ಪಂಪ್‌   ಅಳವಡಿಸಿದ ಕೊಳವೆಬಾವಿಯನ್ನು ಇಲ್ಲಿಯ ಹಾಲು ಉತ್ಪಾದಕರ ಸಂಘವೊಂದರ ಅಧ್ಯಕ್ಷ  ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಖಾಸಗಿಯವರಿಗೆ ಹರಾಜು ಹಾಕಿದ್ದಾರೆ’ ಎಂದು ಆರೋಪಿಸಿ ಮಳವಳ್ಳಿ ತಾಲ್ಲೂಕು ರೈತ ಮುಖಂಡ ಮುತ್ತುರಾಜು ಪಾದಯಾತ್ರೆ ಮೂಲಕ ಏಕಾಂಗಿ ಹೋರಾಟ ಹಮ್ಮಿಕೊಂಡಿದ್ದಾರೆ.

‘ಗ್ರಾಮದ ಮಧ್ಯಭಾಗದಲ್ಲಿ ಕಳೆದ 30 ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಯಿಸಿ ಕೈಪಂಪ್‌ನ್ನು ಹಾಕಲಾಗಿತ್ತು.  ಬೋರ್‌ವೆಲ್‌ನಿಂದ ಸುತ್ತಲಿನ ಡೇರಿ, ಆಸ್ಪತ್ರೆ, ಶಾಲಾ ಮಕ್ಕಳು, ಹಿಂದುಳಿದ,  ಪರಿಶಿಷ್ಟ ವಿಭಾಗಗಳ ಜನರು ಕುಡಿಯುವ ನೀರನ್ನು ಪಡೆಯುತ್ತಿದ್ದರು. ಇತ್ತೀಚೆಗೆ ಬರಗಾಲ ಆವರಿಸಿದ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಗ್ರಾಮಪಂಚಾಯಿತಿ ಅಧ್ಯಕ್ಷರಾಗಿರುವ ಚಿಕ್ಕಣ್ಣಗೌಡ ಎಂಬವರು ಶುದ್ಧ ಕುಡಿಯುವ ನೀರಿನ ಘಟಕಕ್ಕೆಂದು ₹500 ರೂಪಾಯಿ ಬಾಡಿಗೆಗೆ ಪಡೆದು ಸದರಿ ಕೈಪಂಪ್‌ ಅಳವಡಿಸಿದ್ದ ಬೋರ್‌ವೆಲ್‌ಗೆ ಮೋಟರ್‌ ಹಾಕಿಸಿ, ಕುಡಿಯುವ ನೀರಿನ ಘಟಕ ನಿರ್ಮಿಸಿದ್ದಾರೆ’ ಎಂದು ಮುತ್ತುರಾಜು ದೂರಿದ್ದಾರೆ.

‘ನೀರಿನ  ಘಟಕವನ್ನು ಚಿಕ್ಕಣ್ಣಗೌಡ ₹15,500 ಸಾವಿರಕ್ಕೆ ಟೆಂಡರ್‌ ಹಾರಾಜಿನಲ್ಲಿ ಮಾರಾಟ ಮಾಡಿದ್ದಾರೆ. ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಖಾಸಗಿಯವರಿಗೆ ಒಂದು ಬೋರ್‌ವೆಲ್‌ಗೆ₹ 8 ಸಾವಿರವನ್ನು ಗ್ರಾಮ ಪಂಚಾಯಿತಿ ನೀಡುತ್ತಿದೆ. ಈ ಬಗ್ಗೆ ಪಂಚಾಯಿತಿ ಪಿಡಿಓ, ಕಾರ್ಯದರ್ಶಿಯವರಿಗೆ ಏ.4 ರಂದು ಮನವಿ ಸಲ್ಲಿಸಿದ್ದೆ. ಆದರೆ ಅಧಿಕಾರಿಗಳಿಂದ ಯಾವುದೇ ಉತ್ತರ ಬಂದಿಲ್ಲ’ ಎಂದು ಮುತ್ತುರಾಜು ತಿಳಿಸಿದರು.

‘ನ್ಯಾಯ ಸಿಗುವವರೆಗೂ ಹೋರಾಟ ಮಾಡಲು ಸಿದ್ದನಿದ್ದು, ಕ್ಯಾತನಹಳ್ಳಿಯಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ಫಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪೋಲಿಸ್‌ ವರಿಷ್ಠಾಧಿಕಾರಿ, ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ಶನಿವಾರ ಬೆಳಿಗ್ಗೆ ಅಂಬೇಡ್ಕರ್‌, ರೈತ ಮುಖಂಡ ಸಿಎಸ್‌.ಪುಟ್ಟಣ್ಣಯ್ಯ ಅವರ ಭಾವಚಿತ್ರವಿರುವ ನಾಮಫಲಕವನ್ನು ಹಾಕಿಕೊಂಡು ಮಳವಳ್ಳಿ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಿಂದ ಸೈಕಲ್‌ ತಳ್ಳಿಕೊಂಡು 40 ಕಿ.ಮೀ ವರೆಗೆ ಪಾದಯಾತ್ರೆ ತೆರಳುತ್ತಿದ್ದು, ಮಾರ್ಗ ಮಧ್ಯೆ ಯಾವುದಾದರೂ ಗ್ರಾಮದಲ್ಲಿ ಸಾರ್ವಜನಿಕರ ಪಡಸಾಲೆ ಮೇಲೆ ಕಾಲ ಕಳೆದು ನಂತರ ಭಾನುವಾರ ಮಂಡ್ಯ ತಲುಪಿ ಸೋಮವಾರ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT