ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಕಾರ್ಯಕರ್ತರ ಖರ್ಚಿಗೂ ಕಾಸಿಲ್ಲ: ಕೆ.ಎಸ್‌. ನಂಜುಂಡೇಗೌಡ ಅಳಲು

Published 19 ಏಪ್ರಿಲ್ 2024, 13:56 IST
Last Updated 19 ಏಪ್ರಿಲ್ 2024, 13:56 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಲೋಕಸಭೆ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಧಾರಾಳವಾಗಿ ಹಣ ಖರ್ಚು ಮಾಡುತ್ತಿರುವ ಸಂದರ್ಭದಲ್ಲಿ ಬಿಜೆಪಿ– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಕಡೆಯಿಂದ ಬಿಜೆಪಿ ಕಾರ್ಯಕರ್ತರ ಓಡಾಟದ ಖರ್ಚಿಗೂ ಕಾಸು ಕೊಡದೇ ಇರುವುದರಿಂದ ಕೆಲಸ ಮಾಡಲು ಕಷ್ಟವಾಗಿದೆ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಸ್‌.ನಂಜುಂಡೇಗೌಡ ಸಮಸ್ಯೆ ತೋಡಿಕೊಂಡರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ– ಜೆಡಿಎಸ್‌ ಮೈತ್ರಿ ಕೂಟದ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಪರ ಜನರಿಗೆ ಒಲವಿದೆ. ಆದರೆ ಅದು ಮತವಾಗಿ ಪರಿವರ್ತನೆ ಆಗಬೇಕಾದರೆ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಪ್ರತಿ ಮತದಾರರನ್ನು ಭೇಟಿ ಮಾಡಿ ಮತ ಕೇಳಬೇಕು. ಅದಕ್ಕಾಗಿ ಪಕ್ಷದ ಉತ್ಸಾಹಿ ಕಾರ್ಯಕರ್ತರಿಗೆ ದಿನ ನಿತ್ಯದ ಖರ್ಚಿಗಾದರೂ ಹಣ ಕೊಡಿಸಬೇಕು ಎಂದು ವೇದಿಕೆಯಲ್ಲಿದ್ದ ಜೆಡಿಎಸ್‌ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಅಲ್ಕೋಡ್‌ ಹನುಮಂತಪ್ಪ ಅವರಲ್ಲಿ ಮನವಿ ಮಾಡಿದರು.

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಚೊಂಬು ಕೊಟ್ಟಿದೆ ಎಂದು ಕಾಂಗ್ರೆಸ್‌ ಜಾಹೀರಾತು ನೀಡಿ ಸಣ್ಣತನ ತೋರಿದೆ’ ಎಂದು ಕೆ.ಎಸ್‌. ನಂಜುಂಡೇಗೌಡ ಟೀಕಿಸಿದರು.‌

ಜೆಡಿಎಸ್‌ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಅಲ್ಕೋಡ್‌ ಹನುಮಂತಪ್ಪ ಮಾತನಾಡಿ, ‘ಮಂಡ್ಯ ಕ್ಷೇತ್ರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಗೆಲ್ಲುವುದು ಖಚಿತ. ಆದರೆ ಕನಿಷ್ಟ ಎರಡು ಲಕ್ಷ ಮತಗಳ ಅಂತರದಿಂದ ಅವರು ಗೆಲ್ಲುವಂತೆ ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು. ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಸಮನ್ವಯತೆಯಿಂದ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಮಾತನಾಡಿ, ‘ಜೆಡಿಎಸ್‌ ಜತೆ ಪ್ರಚಾರ ನಡೆಸಲು ಸಿದ್ದರಿದ್ದೇವೆ. ಆದರೆ ಆ ಪಕ್ಷದ ಸ್ಥಳೀಯ ಮುಖಂಡರು ಇದುವರೆಗೆ ನಮ್ಮನ್ನು ಸಂಪರ್ಕಿಸಿಲ್ಲ. ಆದರೂ ಪ್ರತ್ಯೇಕವಾಗಿ ಬಿಜೆಪಿ ಕಾರ್ಯಕರ್ತರು ಕುಮಾರಸ್ವಾಮಿ ಅವರ ಪರ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ’ ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಪೀಹಳ್ಳಿ ಎಸ್‌. ರಮೇಶ್‌ ಅಧ್ಯಕ್ಷತೆ ವಹಿಸಿದ್ದರು. ಮೈತ್ರಿಕೂಟದ ಅಭ್ಯರ್ಥಿ ಪರ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಶನಿವಾರದಿಂದ ಬೂತ್‌ ಮಟ್ಟದಲ್ಲಿ ಜಂಟಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್‌. ಸಿದ್ದರಾಮಯ್ಯ, ಜಿಲ್ಲಾ ಘಟಕದ ಉಪಾಧ್ಯಕ್ಷ ಬೇವಿನಹಳ್ಳಿ ಮಹೇಶ್‌, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಬಿ.ಸಿ. ಸಂತೋಷಕುಮಾರ್‌, ನಂದೀಶ್‌, ಜೆಡಿಎಸ್‌ ಮುಖಂಡ ಸಿ.ಕೆ. ಪಾಪಯ್ಯ, ಶಿವಣ್ಣ, ಎಂ. ಪ್ರಕಾಶ್‌ ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT