ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ದೂರು: ಚೌಡೇಶ್ವರಿ ದೇವಿ ಸತ್ಯದರ್ಶನ ಆರಂಭ, ವರ್ಷದಲ್ಲಿ ಕೇವಲ 36 ಗಂಟೆ ದರ್ಶನ!

ಹೂವು, ತಳಿರು, ರೋರಣಗಳಿಂದ ವಿಶೇಷ ಅಲಂಕಾರ
Published 29 ಮಾರ್ಚ್ 2024, 7:01 IST
Last Updated 29 ಮಾರ್ಚ್ 2024, 7:01 IST
ಅಕ್ಷರ ಗಾತ್ರ

ಮದ್ದೂರು: ವರ್ಷದಲ್ಲಿ ಕೇವಲ 36 ಗಂಟೆ ಸತ್ಯ ದರ್ಶನ ನೀಡಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಆರಂಭವಾಯಿತು.

ದೇವಿಯನ್ನು ನಂಬಿ ಬರುವ ಭಕ್ತರ ಬೇಡಿಕೆಗಳು ದೇವಾಲಯದಲ್ಲಿ ಈಡೇರುತ್ತದೆ ಎಂದು ಭಕ್ತರು ನಂಬುತ್ತಾರೆ. ಆದ್ದರಿಂದಲೇ ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹೆಮ್ಮನಹಳ್ಳಿ ಚೌಡೇಶ್ವರಿ ಅಮ್ಮನವರಿಗೆ ನಡೆದುಕೊಳ್ಳುತ್ತಾರೆ.

ತಾಲ್ಲೂಕಿನ ತೈಲೂರಮ್ಮನವರ ಹಬ್ಬದ ಬಳಿಕ ಬರುವ ಈ ಹೆಮ್ಮನಹಳ್ಳಿ ಚೌಡೇಶ್ವರಿ ಹಬ್ಬಕ್ಕೆ ತನ್ನದೇ ಅದ ಹಿರಿಮೆ ಹಾಗೂ ಐತಿಹಾಸಿಕವಾದ ಪರಂಪರೆ ಇದೆ. ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಎಲ್ಲಾ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗಾರಿಸಲಾಗಿದೆ. ದೇವಸ್ಥಾನದ ಗರ್ಭಗುಡಿಯನ್ನು ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಅಷ್ಟೇ ಅಲ್ಲದೆ ಹೊರಗಿನ ಆಕರ್ಷಕ ದೀಪಾಲಂಕಾರಗಳಿಂದ ಝಗಮಗಿಸುತ್ತಿದೆ.

ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಧ್ಯಾಹ್ನ 12 ಗಂಟೆಗೆ ಅಮೃತ ಮಣ್ಣಿನ ದೇವದ್ವಾರವನ್ನು ತೆರೆಯಲಾಯಿತು. ನಂತರ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತಾದಿಗಳು ದೇವಿಯ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್‌ನ ಪದಾಧಿಕಾರಿಗಳು ಸಕಲ ಸೌಲಭ್ಯ ಒದಗಿಸಿದ್ದರು.

ದೇವದ್ವಾರ ತೆಗೆದ ನಂತರ ಹರಕೆ ಮುಡಿ ತೆಗೆಸುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 2.30ರಿಂದ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಸಡಗರ ಸಂಭ್ರಮದಿಂದ ನಡೆಯಿತು. ಜನಪದ ಕಲಾತಂಡಗಳ ಪ್ರದರ್ಶನ ಭಕ್ತರ ಮನಸೂರೆಗೊಂಡಿತು.

ಸಂಜೆ ಬಂಡಿ ಉತ್ಸವ, ಅಮ್ಮನವರಿಗೆ ಅಭಿಷೇಕ, ಅಲಂಕಾರ ಮತ್ತು ಪೂಜಾ ವಿಧಾನ ನಡೆಯಿತು. ರಾತ್ರಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉತ್ಸವದ ಅಂಗವಾಗಿ ದಿನವೀಡಿ ವಿಶೇಷ ಪೂಜಾ ಕೈಂಕರ್ಯಗಳ ಜರುಗಿದರು.

ಶುಕ್ರವಾರ ನಸುಕಿನ 4.30 ಕ್ಕೆ ಅಮ್ಮನವರ ಅಗ್ನಿಕುಂಡಪ್ರವೇಶ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಅಮ್ಮನವರ ರಥೋತ್ಸವ, ಬಾಯಿಬೀಗ ವೈಭವಯುತವಾಗಿ ನಡೆಯಲಿದೆ. ರಾತ್ರಿ 10 ಗಂಟೆಗೆ ದೇವದ್ವಾರವನ್ನು ಮುಚ್ಚುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ’ ಎಂದು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ನ ಗೌರವಾಧ್ಯಕ್ಷ ರಾಜ್ ಕುಮಾರ್, ಕಾರ್ಯದರ್ಶಿ ಜಯಶಂಕರ್ ತಿಳಿಸಿದರು.

ಚೌಡೇಶ್ವರಿ ಅಮ್ಮನವರ ದೇವಸ್ಥಾನ
ಚೌಡೇಶ್ವರಿ ಅಮ್ಮನವರ ದೇವಸ್ಥಾನ

36 ಗಂಟೆ ಮಾತ್ರ ದರ್ಶನ

ಹೆಮ್ಮನಹಳ್ಳಿಯ ಶ್ರೀ ಚೌಡೇಶ್ವರಿ ದೇವಿಯವರು ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆಯು ಭಕ್ತರಲ್ಲಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಅಪಾರ ಸಂಖ್ಯೆಯ ಭಕ್ತರು ದೇವಿಯನ್ನು ಅರಸಿ ಬರುತ್ತಿದ್ದಾರೆ. ವರ್ಷದಲ್ಲಿ ಕೇವಲ 36 ಗಂಟೆಗಳು ಮಾತ್ರ ದೇವಿಯವರ ದರ್ಶನ ಸಿಗುವುದು ಇಲ್ಲಿನ ಕ್ಷೇತ್ರದ ವಿಶೇಷ ಎಂದು ಟ್ರಸ್ಟ್‌ ಕಾರ್ಯದರ್ಶಿ ಜಯಶಂಕರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT