ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಉದ್ಯಾನ ರಕ್ಷಣೆಗೆ ಕಾಂಪೌಂಡ್

ಮಾದರಿ ಉದ್ಯಾನವಾಗಿ, ಅಭಿವೃದ್ಧಿ ಮಾಡುವ ಗುರಿ
Last Updated 21 ಏಪ್ರಿಲ್ 2019, 20:38 IST
ಅಕ್ಷರ ಗಾತ್ರ

ಮಂಡ್ಯ: ನಗರದ ಬಹು ಆಕರ್ಷಣೀಯ ತಾಣವಾದ ಕಾವೇರಿ ಉದ್ಯಾನಕ್ಕೆ ಆರು ತಿಂಗಳ ಒಳಗಾಗಿ ಸುಮಾರು ₹ 2.20 ಕೋಟಿ ಅನುದಾನದಲ್ಲಿ ಕಾಂಪೌಂಡ್ ನಿರ್ಮಿಸಿ ದೇಶಕ್ಕೆ ಮಾದರಿ ವನವಾಗಿ ಅಭಿವೃದ್ಧಿ ಮಾಡಲಾಗುವುದು.

ನಾಲ್ವಡಿ ಕೃಷ್ಣರಾಜ ಒಡೆಯರು ಮಂಡ್ಯದಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಿ ಅದರ ಮುಂಭಾಗದಲ್ಲಿ ಭವ್ಯ ವನ ಹಾಗೂ ಕಾವೇರಿ ವನವನ್ನು ನಿರ್ಮಾಣ ಮಾಡಿದರು. ಕೆಆರ್‌ಎಸ್ ಅಣೆಕಟ್ಟೆ ಬಳಿಯ ಉದ್ಯಾನದಲ್ಲಿ ಕಾರಂಜಿಗಾಗಿ ಬಳಕೆ ಮಾಡಿರುವ ದುಬಾರಿ ಲೈಟ್‌ಗಳಂತೆ ಇಲ್ಲಿಯೂ, ದುಬಾರಿ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿದೆ. ಇಂತಹ ದಶಕಗಳ ಇತಿಹಾಸ ಹೊಂದಿರುವ ಕಾವೇರಿ ವನವನ್ನು ಎರಡು ಬಾರಿ ಅಭಿವೃದ್ಧಿ ಮಾಡಲಾಗಿದೆ. ಈಗ ಕಾವೇರಿ ಉದ್ಯಾನ ಸೇರಿ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಎಲ್ಲಾ ಉದ್ಯಾನಗಳ ಸುತ್ತಲೂ ವಿಧಾನ ಸೌಧದ ಸುತ್ತಲಿನಂತೆ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ.

ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಅತಿ ಹೆಚ್ಚು ಜನರು ವಾಯುವಿಹಾರ ಮಾಡಲು ಕಾವೇರಿ ಉದ್ಯಾನಕ್ಕೆ ಬರುತ್ತಾರೆ. ಇಲ್ಲಿ ಪ್ರತಿ ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಸಂಗೀತ ಕಾರಂಜಿ ಆಕರ್ಷಣೀಯವಾಗಿರುತ್ತದೆ. ಇದನ್ನು ನೋಡಲು ಕುಟುಂಬ ಸಮೇತರಾಗಿ ನಗರ ಸೇರಿ ಸುತ್ತಲಿನ ಗ್ರಾಮೀಣ ಭಾಗದ ಜನರು ಬರುತ್ತಾರೆ. ಮಕ್ಕಳಿಗಾಗಿ ಆಟಿಕೆ ಸಾಮಗ್ರಿ ಅಳವಡಿಸಲಾಗಿದ್ದು, ಮನೋರಂಜನಾ ತಾಣವಾಗಿದೆ. ಸುತ್ತಲೂ ತಡೆಗೋಡೆ ನಿರ್ಮಾಣದಿಂದ ಉದ್ಯಾನಕ್ಕೆ ಮತ್ತಷ್ಟು ಮೆರುಗು ಬರಲಿದೆ.

ಉದ್ಯಾನದಲ್ಲಿ ಕುಳಿತುಕೊಳ್ಳುವ ಸುಮಾರು 70 ಆಸನಗಳಿದ್ದವು. ಕಾಂಪೌಂಡ್ ನಿರ್ಮಾಣಕ್ಕಾಗಿ ಸ್ಥಳ ತೆರವು ಮಾಡುವಾಗ ಕೆಲವು ಹಳೆಯ ಆಸನಗಳು ಹಾಳಾಗಿವೆ. ಒಟ್ಟಾರೆ ನೀರಿನ ಕಾರಂಜಿ, ಮಕ್ಕಳ ಆಟಿಕೆ ಪರಿಕರ, ಸುಂದರ ಹೂವಿನ ಗಿಡಗಳು, ಲಾನ್ (ಮೆತ್ತನೆಯ ಹುಲ್ಲು ಹಾಸು) ಹಾಗೂ ಪಾದಚಾರಿ ಮಾರ್ಗ ಉತ್ತಮವಾಗಿವೆ. ಈ ಉದ್ಯಾನ ಮಕ್ಕಳು, ವೃದ್ಧರು ಸೇರಿ ಎಲ್ಲಾ ವರ್ಗದ ಜನರಿಗೂ ಮನರಂಜನೆಯ ತಾಣವಾಗಲಿದೆ.

ಜಿಲ್ಲಾಧಿಕಾರಿ ಕಚೇರಿ ಬಳಿಯ ಉದ್ಯಾನದ ಸುತ್ತಲೂ ತಡೆಗೋಡೆ ನಿರ್ಮಾಣಕ್ಕೆ ಸುಮಾರು ₹ 2.20 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹ 80 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈಗ ಅಧಿಕಾರಕ್ಕೆ ಬಂದಿರುವ ಮೈತ್ರಿ ಸರ್ಕಾರ ₹ 55 ಲಕ್ಷ ಅನುದಾನ ನೀಡಿದೆ. ಕಾಂಪೌಂಡ್ ನಿರ್ಮಾಣದ ಕಾಮಗಾರಿ ಟೆಂಡರ್‌ ಅನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್)ಕ್ಕೆ ನೀಡಲಾಗಿದೆ. ಉಳಿದ ₹ 85 ಲಕ್ಷ ಅನುದಾನ ಬಿಡುಗಡೆಯಾದರೆ, ಮುಂದಿನ ಆರು ತಿಂಗಳಲ್ಲಿ ಕಾಂಪೌಂಡ್ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್.ರಾಜು ಮಾಹಿತಿ ನೀಡಿದರು.

ನ. 1ಕ್ಕೆ ಕಾವೇರಿ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ

ಜಿಲ್ಲಾಧಿಕಾರಿ ಕಚೇರಿ ಬಳಿಯ ಉದ್ಯಾನಕ್ಕೆ ಕಾಂಪೌಂಡ್ ನಿರ್ಮಾಣದ ಮೂಲಕ ಸಸ್ಯ ವೈವಿಧ್ಯ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು. ನ.1ಕ್ಕೆ ಪೂರ್ಣ ನಿರ್ಮಿಸಿ ಕಾವೇರಿ ಉದ್ಯಾನದಲ್ಲಿಯೇ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುವುದು ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಂ.ಎಸ್.ರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT