ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಮತದಾನಕ್ಕೆ ಸಜ್ಜು; 2074 ಮತಗಟ್ಟೆ ಸ್ಥಾಪನೆ

ಲೋಕಸಭಾ ಚುನಾವಣೆ; ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಕ್ಕು ಚಲಾವಣೆ
Published 25 ಏಪ್ರಿಲ್ 2024, 13:59 IST
Last Updated 25 ಏಪ್ರಿಲ್ 2024, 13:59 IST
ಅಕ್ಷರ ಗಾತ್ರ

ಮಂಡ್ಯ: ಲೋಕಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕ್ಷೇತ್ರದಾದ್ಯಂತ 2074 ಮತಗಟ್ಟೆಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ತಾಲ್ಲೂಕು ಕೇಂದ್ರಗಳಲ್ಲಿ ಗುರುವಾರ ನಡೆದ ಮಸ್ಟರಿಂಗ್‌ ಪ್ರಕ್ರಿಯೆಯಲ್ಲಿ ಚುನಾವಣಾ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರ ಸೇರಿದಂತೆ ಅಗತ್ಯ ಪರಿಕರಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದರು.

ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಗುರುವಾರ ನಗರದ ಮಂಡ್ಯ ವಿವಿ ಆವರಣದಲ್ಲಿ ಬೆಳಿಗ್ಗೆ 6 ಗಂಟೆಗೆ ಮಸ್ಟರಿಂಗ್‌ ಪ್ರಕ್ರಿಯೆ ಆರಂಭವಾಯಿತು. ಮದ್ದೂರಿನ ಎಚ್‌.ಕೆವೀರಣ್ಣಗೌಡ ಕಾಲೇಜು, ಕೆ.ಆರ್‌.ಪೇಟೆ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ, ಮಳವಳ್ಳಿ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಮಸ್ಟರಿಂಗ್‌ ಪ್ರಕ್ರಿಯೆ ನಡೆಯಿತು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ನಿಯಮಾನುಸಾರ ಪರಿಕರಗಳನ್ನು ಪಡೆದು ಮತಗಟ್ಟೆಗಳತ್ತ ಹೆಜ್ಜೆ ಇಟ್ಟರು.

ಅಧಿಕಾರಿಗಳ ಸಮ್ಮುಖದಲ್ಲಿ ಬೆಳಿಗ್ಗೆ ಭದ್ರತಾ ಕೊಠಡಿಯನ್ನು ತೆರೆದು ವಿದ್ಯುನ್ಮಾನ ಮತಯಂತ್ರಗಳನ್ನು ಹಂಚಿಕೆ ಮಾಡಲಾಯಿತು. ವಿವಿ ಪ್ಯಾಟ್‌, ನಿಯಂತ್ರಣ ಘಟಕ (ಕಂಟ್ರೋಲ್‌ ಯೂನಿಟ್‌), ಪೇಪರ್‌ ಸೀಲ್‌, ಬೆರಳಿಗೆ ಹಚ್ಚುವ ಶಾಯಿ, ಗೋಪ್ಯ ಮತದಾನದ ಪರಿಕರ (ಕಂಪಾರ್ಟ್‌ಮೆಂಟ್‌) ಅರ್ಜಿ, ಕವರ್‌ಗಳನ್ನು ಸಿಬ್ಬಂದಿ ಅಧಿಕಾರಿಗಳಿಂದ ಪಡೆದುಕೊಂಡರು.

ಜಿಲ್ಲಾ ಚುನಾವಣಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಜಿ.ಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌ ಸೇರಿದಂತೆ ಅಧಿಕಾರಿಗಳ ತಂಡ ಮಸ್ಟರಿಂಗ್‌ ಕೇಂದ್ರಗಳಿಗೆ ಭೇಟಿ ನೀಡಿ ಪ್ರಕ್ರಿಯೆ ಪರಿಶೀಲಿಸಿತು. ಪಕ್ರಿಯೆಯಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ಸಮರ್ಪಕವಾಗಿ ನಡೆಯಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಸಿಬ್ಬಂದಿಗೆ ಸೂಚನೆ ನೀಡಿದರು.

ಸಿಬ್ಬಂದಿಯನ್ನು ಮತಗಟ್ಟೆಗೆ ಕರೆದೊಯ್ಯಲು 373 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ 274 ಸಾರಿಗೆ ಸಂಸ್ಥೆ ಬಸ್‌, 27 ಮಿನಿ ಬಸ್‌, 34 ಮ್ಯಾಕ್ಸಿ ಕ್ಯಾಬ್‌, 38 ಜೀಪ್‌ಗಳನ್ನು ಚುನಾವಣೆ ಕರ್ತವ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಸಿಬ್ಬಂದಿಗೆ ಗುರುವಾರ ರಾತ್ರಿ ಊಟ, ಶುಕ್ರವಾರ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ಸಂಜೆ ತಿಂಡಿಯ ವ್ಯವಸ್ಥೆ ನೋಡಿಕೊಳ್ಳಲು ಸ್ಥಳೀಯ ತಾ.ಪಂ ಅಧಿಕಾರಿಗಳು, ಮಧ್ಯಾಹ್ನದ ಬಿಸಿಯೂಟದ ಸಹಾಯಕ ನಿರ್ದೇಶಕರಿಗೆ ವಹಿಸಲಾಗಿದೆ.

2074 ಮತಗಟ್ಟೆ: ಮೈಸೂರು ಜಿಲ್ಲೆ ಕೆ.ಆರ್‌.ನಗರ ಕ್ಷೇತ್ರದ 252 ಮತಗಟ್ಟೆ ಸೇರಿದಂತೆ ಕ್ಷೇತ್ರದಾದ್ಯಂತ 2074 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1822 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಅವುಗಳಲ್ಲಿ 693 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆ, 33 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ.

7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ಒಟ್ಟು 8,396 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬರು ಮತಗಟ್ಟೆ ಅಧಿಕಾರಿ, ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ, ಒಬ್ಬರು ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಶಾಂತಿಯುತ ಮತದಾನ ಪಕ್ರಿಯೆಗಾಗಿ ಮತಗಟ್ಟೆಯ 100 ಮೀಟರ್‌ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾಜಕೀಯ ಪಕ್ಷಗಳ ಮುಖಂಡರು ಯಾವುದೇ ರೀತಿಯಿಂದಲೂ ಟೆಂಟ್‌ ಹಾಕಿಕೊಂಡು ಮತದಾರರನ್ನು ಸೆಳೆಯುವುದನ್ನು ನಿಷೇಧಿಸಲಾಗಿದೆ.

ಜೊತೆಗೆ ಶುಷ್ಕ ದಿನ ಘೋಷಣೆ ಮಾಡಲಾಗಿದ್ದು ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ಬಂದ್‌ ಮಾಡಲಾಗಿದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ 1824 ಪೊಲೀಸ್‌ ಸಿಬ್ಬಂದಿ ಮತಗಟ್ಟೆಗಳಿಗೆ ಭದ್ರತೆ ನೀಡಲಿದ್ದಾರೆ. ಇವರ ಜೊತೆಗೆ 288 ಸಿಆರ್‌ಪಿಎಫ್‌, ಎಸ್‌ಎಪಿ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.

40 ಸಖಿ 16 ಯುವ ಮತಗಟ್ಟೆ

ಜಿಲ್ಲೆಯಾದ್ಯಂತ 40 ಕೇಂದ್ರಗಳನ್ನು ಸಖಿ ಮತಗಟ್ಟೆ ಎಂದು ಗುರುತಿಸಲಾಗಿದ್ದು ಇಲ್ಲಿ ವಿಶೇಷವಾಗಿ ಮಹಿಳೆಯರೇ ಮತಗಟ್ಟೆ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. 8 ಅಂಗವಿಲಕರ ಮತಗಟ್ಟೆ ಗುರುತಿಸಲಾಗಿದ್ದು ಅಂಗವಿಕಲ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. 16 ಪಾರಂಪರಿಕ 16 ಯುವ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲೂ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ. ಸಖಿ ಮತಗಟ್ಟೆಗಳಿಗೆ ನೇರಳೆ ಬಣ್ಣ ಬಳಿಯಲಾಗಿದ್ದು ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ತೆಂಗಿನ ಗರಿ ಹೂವು ಬಲೂನ್‌ಗಳಿಂದ ಮತಗಟ್ಟೆಗಳಿಗೆ ವಿಶೇಷ ಕಳೆ ನೀಡಲಾಗಿದೆ. ಪಾರಂಪರಿಕ ಯುವ ಮತಗಟ್ಟೆಗಳನ್ನೂ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ.

ಮೊಬೈಲ್‌ ಬಳಕೆ ನಿಷಿದ್ಧ

ಮತಗಟ್ಟೆಗಳಲ್ಲಿ ಮತದಾರರು ಚುನಾವಣಾ ಸಿಬ್ಬಂದಿ ಮೊಬೈಲ್‌ ಫೋನ್‌ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತಗಟ್ಟೆ ಅಧಿಕಾರಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಕೇವಲ ಕೀಪ್ಯಾಡ್‌ ಫೋನ್‌ ಬಳಕೆ ಮಾಡಲು ಅನುಮತಿ ನೀಡಲಾಗಿದೆ. ‘ಪಾರದರ್ಶಕ ನ್ಯಾಯಯುತ ಚುನಾವಣೆ ನಡೆಸಲು ಜಿಲ್ಲೆಯ ಮತದಾರರು ಸಹಕಾರ ನೀಡಬೇಕು. ಎಲ್ಲರೂ ಮತಗಟ್ಟೆಗಳಿಗೆ ಬಂದು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಕುಮಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT