ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸಮಾಜ ಕಲ್ಯಾಣ ಸಚಿವರ ರಾಜೀನಾಮೆಗೆ ಆಗ್ರಹ

ಮಕ್ಕಳಿಂದ ಮಲಗುಂಡಿ ಸ್ವಚ್ಛ ಖಂಡನೆ ಖಂಡಿಸಿ ಪ್ರತಿಭಟನೆ
Published 19 ಡಿಸೆಂಬರ್ 2023, 14:19 IST
Last Updated 19 ಡಿಸೆಂಬರ್ 2023, 14:19 IST
ಅಕ್ಷರ ಗಾತ್ರ

ಮಂಡ್ಯ: ಕೋಲಾರ ಜಿಲ್ಲೆಯ ಯಲವಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳಿಂದ ಮಲಗುಂಡಿ ಸ್ವಚ್ಚಗೊಳಿಸಿದ ಪ್ರಕರಣದ ನೈತಿಕ ಹೊಣೆ ಹೊತ್ತು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು.

ನಗರದ ಸರ್‌ಎಂ.ವಿ.ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಕಾರಣರಾದ ಪ್ರಾಂಶುಪಾಲರು ಮತ್ತು ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಸರ್ಕಾರದ ವೈಫಲ್ಯ, ಬೆಳಗಾವಿಯ ವಂಟಮೂರಿ ಮಹಿಳೆ ಬೆತ್ತಲೆ ಪ್ರಕರಣದ ವಿರುದ್ಧವೂ ಕಿಡಿಕಾರಿದರು. ಮಲಗುಂಡಿ ಸ್ವಚ್ಚಗೊಳಿಸಿದ ಬಾಲಕರನ್ನು ಬಾಲ ಕಾರ್ಮಿಕರೆಂದು ಪರಿಗಣಿಸಿ ತಲಾ ₹50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಾದ್ಯಂತ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರ ನಿಯಂತ್ರಣಕ್ಕೆ ಇನ್ನಾದರೂ ಕ್ರಮ ಜರುಗಿಸಬೇಕು. ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯನ್ನು ಬೆತ್ತಲುಗೊಳಿಸಿ ನಡೆಸಿದ ದೌರ್ಜನ್ಯ ಅಮಾನವೀಯವಾದುದು. ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಪೋಕ್ಸೊ ಪ್ರಕರಣಗಳ ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಲು ವಿಶೇಷ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಹೆಣ್ಣು ಭ್ರೂಣ ಹತ್ಯೆ, ಮಹಿಳೆ ಬೆತ್ತಲೆ ಪ್ರಕರಣದ ಆರೋಪಿಗಳನ್ನು ಕಠಿಣ ಕಾನೂನು ಶಿಕ್ಷಗೆ ಒಳಪಡಿಸಬೇಕು ಎಂದು ಕೋರಿದರು

ಸಮಿತಿಯ ರಾಜ್ಯ ಅಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್, ಮುಖಂಡರಾದ ಎಸ್.ಕುಮಾರ್, ರಾಮಕೃಷ್ಣ ಸಂಪಹಳ್ಳಿ, ಸುರೇಶ್, ಸೋಮಶೇಖರ್ ಮೇನಾಗ್ರ, ಬಿ.ಆನಂದ, ಬಲರಾಮಣ್ಣ, ಭಾಗ್ಯಮ್ಮ, ಗೀತಾ ಆರ್ಮುಗಂ, ಮುರುಗೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT