ಹೊಸಹಳ್ಳಿ ವೃತ್ತದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆ

7
ಜಿಲ್ಲೆಯಲ್ಲಿ ಕಾಣದ ನಾಡಪ್ರಭು ನೆನಪಿನ ಸ್ಮಾರಕ, ಹೃದಯ ಭಾಗದಲ್ಲಿ ಮೂರ್ತಿ ಅನಾವರಣಕ್ಕೆ ನಿರ್ಧಾರ

ಹೊಸಹಳ್ಳಿ ವೃತ್ತದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆ

Published:
Updated:
ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಉದ್ದೇಶಿಸಲಾಗಿರುವ ಮಂಡ್ಯದ ಹೊಸಹಳ್ಳಿ ವೃತ್ತ

ಮಂಡ್ಯ: ಐದು ರಸ್ತೆಗಳು ಕೂಡುವ ಹೊಸಹಳ್ಳಿ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸುವ ಚಿಂತನೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಕೆಂಪೇಗೌಡ ಜಯಂತಿಯ ವೇಳೆಗೆ ಪ್ರತಿಮೆ ನಗರದ ಸೌಂದರ್ಯ ಹೆಚ್ಚಿಸಲಿದೆ.

ಸಣ್ಣದೊಂದು ಉದ್ಯಾನ ನಿರ್ಮಿಸಿ ಅದರ ನಡುವೆ ಕುದುರೆ ಮೇಲೆ ಕತ್ತಿ ಹಿಡಿದು ಕುಳಿತಿರುವ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಶಾಸಕ ಎಂ.ಶ್ರೀನಿವಾಸ್‌ ಉದ್ದೇಶಿಸಿದ್ದಾರೆ. ಈಚೆಗೆ ವೃತ್ತಕ್ಕೆ ಭೇಟಿ ನೀಡಿದ್ದ ಅವರು ಜನಾಭಿಪ್ರಾಯ ಸಂಗ್ರಹಿಸಿದ್ದಾರೆ. ನೂರು ಅಡಿ ರಸ್ತೆ ಸೇರಿದಂತೆ ಇಡೀ ವೃತ್ತದ ಅಂದ ಹೆಚ್ಚಿಸಲು ಪ್ರತಿಮೆ ಸ್ಥಾಪನೆ ಅಗತ್ಯ ಎಂದು ಜನರೂ ತಿಳಿಸಿದ್ದಾರೆ. ಈ ಕಾರಣ ಶಾಸಕರು ಸಕಲ ಸಿದ್ಧತೆ ನಡೆಸಿದ್ದಾರೆ. ನಗರಸಭೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಾಧಕ–ಬಾಧಕಗಳ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

‘ಜನಾಭಿಪ್ರಾಯದಂತೆ ಹೊಸಹಳ್ಳಿ ವೃತ್ತದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪಿಸಲಾಗುವುದು. ಇಷ್ಟು ವರ್ಷಗಳಾದರೂ ಮಂಡ್ಯದಲ್ಲಿ ಅವರ ಪ್ರತಿಮೆ ಇಲ್ಲ ಎಂಬ ಕೊರಗು ಇತ್ತು. ಆ ಕೊರಗು ಇನ್ನುಮುಂದೆ ಇಲ್ಲವಾಗಲಿದೆ. ಐದು ರಸ್ತೆ ಸಂಗಮಿಸುವ ಸರ್ಕಲ್‌ನಲ್ಲಿ ಪ್ರತಿಮೆ ಸ್ಥಾಪಿಸುವುದು ಸೂಕ್ತ ನಿರ್ಧಾರ. ಈ ಕುರಿತು ಬುಧವಾರ ನಡೆಯಲಿರುವ ಕೆಂಪೇಗೌಡರ ಜಯಂತಿಯಲ್ಲಿ ನಿರ್ಧಾರ ಪ್ರಕಟ ಮಾಡುತ್ತೇನೆ’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

ನೂರು ಅಡಿ ರಸ್ತೆ, ವಿ.ವಿ ರಸ್ತೆ, ಮಳವಳ್ಳಿ ರಸ್ತೆ ಹಾಗೂ ಹೊಸಹಳ್ಳಿ ರಸ್ತೆ ಕೂಡುವ ಹೊಸಹಳ್ಳಿ ಸರ್ಕಲ್‌ ಅಧಿಕ ಜನಸಂದಣಿಯ ತಾಣ. ತರಕಾರಿ ವ್ಯಾಪಾರಿಗಳು, ಫಾಸ್ಟ್‌ ಫುಡ್‌ ಅಂಗಡಿಗಳು ಇಲ್ಲಿ ಸಾಲುಗಟ್ಟಿ ಇರುತ್ತವೆ. ರೈತರು ನೇರವಾಗಿ ಮಾರಾಟ ಮಾಡುವ ತರಕಾರಿ ಕೊಳ್ಳಲು ಈ ವೃತ್ತಕ್ಕೆ ಬರಬೇಕು. ಇದು ನಗರದ ಹೃದಯ ಭಾಗವೂ ಹೌದು. ಮಳವಳ್ಳಿ, ಬನ್ನೂರು ಕಡೆಗೆ ತೆರಳುವ ಪ್ರಯಾಣಿಕರು ಇಲ್ಲಿ ಬಸ್‌ ಹತ್ತುತ್ತಾರೆ. ಇಲ್ಲಿ ಹಾಪ್‌ಕಾಮ್ಸ್‌ ಮಳೆಗೆಯೊಂದಿತ್ತು, ಇದನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ದು, ಈಗ ಜಾಗ ಖಾಲಿಯಾಗಿದೆ. ಆ ಸ್ಥಳ ಪ್ರತಿಮೆ ಸ್ಥಾಪನೆಗೆ ಸೂಕ್ತ ಎಂಬುದು ಜನರ ಅಭಿಪ್ರಾಯ.

ಜಾಗದ ವಿವಾದಕ್ಕೆ ಮುಕ್ತಿ: ಹೊಸಹಳ್ಳಿ ಸರ್ಕಲ್‌ನಲ್ಲಿ ಹಾಪ್‌ಕಾಮ್ಸ್‌ ಮಳಿಗೆ ತೆರವುಗೊಳಿಸಿದ ನಂತರ ಅಲ್ಲಿ ಶೌಚಾಲಯ ನಿರ್ಮಿಸಲು ನಗರಸಭೆ ಅಧಿಕಾರಿಗಳು ಉದ್ದೇಶಿಸಿದ್ದರು. 6 ತಿಂಗಳ ಹಿಂದೆ ಶೌಚಾಲಯ ನಿರ್ಮಾಣ ಕಾಮಗಾರಿಯೂ ಆರಂಭವಾಗಿ ಅಡಿಪಾಯ ತೋಡಲಾಗಿತ್ತು. ಆದರೆ ಜನರು ನಗರದ ಹೃದಯ ಭಾಗವಾಗಿರುವ ವೃತ್ತದಲ್ಲಿ ಯಾವುದೇ ಕಾರಣಕ್ಕೂ ಶೌಚಾಲಯ ನಿರ್ಮಿಸಕೂಡದು ಎಂದು ಒತ್ತಾಯಿಸಿದರು. ಈ ಕುರಿತು ಪರ– ವಿರೋಧ ಚರ್ಚೆಯೂ ನಡೆಯಿತು. ಕಡೆಗೆ ನಗರಸಭೆ ಶೌಚಾಲಯ ನಿರ್ಮಿಸುವ ಉದ್ದೇಶದಿಂದ ಹಿಂದೆ ಸರಿಯಿತು.

ಪಾರ್ಕ್‌ ಇಲ್ಲ : ನಾಡಪ್ರಭು ಕೆಂಪೇಗೌಡರ ಸ್ಮರಣೆ ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಯುತ್ತವೆ. ಆದರೆ ಅವರ ಹೆಸರಿನಲ್ಲಿ ಪ್ರತಿಮೆ, ಉದ್ಯಾನಗಳು ಇಲ್ಲ. ನಗರದ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಉದ್ಯಾನಕ್ಕೆ ಕೆಂಪೇಗೌಡ ಉದ್ಯಾನ ಎಂದು ಫಲಕ ಹಾಕಲಾಗಿದೆ. ಆದರೆ ಅಧಿಕೃತವಾಗಿ ನಗರಸಭೆಯಿಂದ ನಾಮಕರಣ ಮಾಡಿಲ್ಲ. ಈಗ ಕಾಲ ಕೂಡಿಬಂದಿದ್ದು ವರ್ಷದೊಳಗೆ ಪ್ರತಿಮೆ ಅನಾವರಣಗೊಳ್ಳಲಿದೆ’ ಎಂದು ಶಾಸಕರು ಹೇಳಿದರು.

ನಗರದಲ್ಲಿ ಕೆಂಪೇಗೌಡರ ಪ್ರತಿಮೆಯಾಗಬೇಕು ಎಂಬ ಆಸೆ ಬಹುಕಾಲದಿಂದಲೂ ಇತ್ತು. ಈಗ ಅದನ್ನೇ ಜನರೂ ಒತ್ತಾಯ ಮಾಡುತ್ತಿದ್ದಾರೆ. ಅದಕ್ಕೆ ಹೊಸಹಳ್ಳಿ ವೃತ್ತ ಸೂಕ್ತ ಸ್ಥಳ. ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ
- ಎಂ.ಶ್ರೀನಿವಾಸ್‌, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !