ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಆರ್.ಪೇಟೆ: ಎಥೆನಾಲ್ ಘಟಕ ನಿರ್ಮಾಣದಿಂದ ರೈತರಿಗೆ ಲಾಭ

ಕಬ್ಬು ಬೆಳೆಗಾರರಿಗೆ ಜಾಗೃತಿ ಸಭೆ
Published 29 ಫೆಬ್ರುವರಿ 2024, 15:26 IST
Last Updated 29 ಫೆಬ್ರುವರಿ 2024, 15:26 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಕಬ್ಬು ಬೆಳೆಗಾರರ ಸಂಘ ಮತ್ತು ಕೋರಮಂಡಲ ಸಕ್ಕರೆ ಕಾರ್ಖಾನೆ ವತಿಯಿಂದ ತಾಲ್ಲೂಕಿನ ಕುಪ್ಪಹಳ್ಳಿ , ಹೊನ್ನೇನಹಳ್ಳಿ ಗ್ರಾಮಗಳಲ್ಲಿ ಕಬ್ಬು ಬೆಳೆಗಾರರ ಜಾಗೃತಿ ಸಭೆ ನಡೆಯಿತು.

ಸಭೆಯಲ್ಲಿ ಮಾಕವಳ್ಳಿ ಬಳಿ ಇರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಸ್ಥಾಪನೆ ಮಾಡುವುದನ್ನು ಕೆಲವರು ವಿರೋಧಿಸಿ ಸಾರ್ವಜನಿಕರು ಮತ್ತು ಕಬ್ಬುಬೆಳೆಗಾರರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಕಬಗ್ಬು ಬೆಳೆಗಾರರು ಅಪಪ್ರಚಾರಕ್ಕೆ ಕಿವಿಗೊಡದೆ ಕಾರ್ಖಾನೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಜಾಗೃತಿ ಸಭೆಯಲ್ಲಿ ಮನವರಿಕೆ ಮಾಡಲಾಯಿತು.

ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬೋರಾಪುರಮಂಜುನಾಥ್ ಮಾತನಾಡಿ, ಎಥೆನಾಲ್ ಘಟಕ ಸ್ಥಾಪಿಸಿ, ಉತ್ಪಾದನೆಯಿಂದ ರೈತರಿಗೆ ಲಾಭ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಯಾವುದೇ ಅನನುಕೂಲಗಳಿಲ್ಲ. ಪರಿಸರ ಹಾಗೂ ರೈತಸ್ನೇಹಿಯಾಗಿರುವ ಎಥೆನಾಲ್ ಘಟಕದ ಆರಂಭಕ್ಕೆ ನಾವೆಲ್ಲರೂ ಸಮ್ಮತಿ ಸೂಚಿಸಬೇಕಾಗಿದೆ ಎಂದರು.

ಸಭೆ: ಮಾ. 6 ರಂದು ಮಂಡ್ಯ ಜಿಲ್ಲಾಧಿಕಾರಿ  ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಇದೇ ಅಭಿಪ್ರಾಯ ನೀಡಬೇಕು. ಕಾರ್ಖಾನೆಯ ಪರವಾಗಿ ನಿಲ್ಲಬೇಕು ಎಂದು ಮನವಿ ಮಾಡಿದ ಅವರು ಅಪಪ್ರಚಾರಕ್ಕೆ ಕಿವಿಗೊಡದೆ ಕಾರ್ಖಾನೆಯ ಉಳಿವು ಹಾಗೂ ರೈತರ ಹಿತಕ್ಕಾಗಿ ಕಾರ್ಖಾನೆ ಹಮ್ಮಿಕೊಂಡಿರುವ ಯೋಜನೆಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕೋರಮಂಡಲ್ ಸಕ್ಕರೆ ಕಾರ್ಖಾನೆ ಕಬ್ಬು ವಿಭಾಗದ ಹಿರಿಯಅಧಿಕಾರಿ ಕೆ.ಬಾಬುರಾಜ್ ಮಾತನಾಡಿ, 24 ವರ್ಷಗಳಿಂದ ತಾಲ್ಲೂಕಿನ ರೈತರ ಜೀವನಾಡಿಯಾಗಿ ಕಬ್ಬು ಬೆಳೆಗಾರರ ಸ್ನೇಹಿತನಂತೆ ಕೆಲಸ ಮಾಡುತ್ತಿದೆ. ಸಕಾಲದಲ್ಲಿ ಹಣ ಪಾವತಿಯಲ್ಲಿ ಬೇರೆ ಕಾರ್ಖಾನೆಗಿಂತ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗ ಕಾರ್ಖಾನೆ ₹250 ಕೋಟಿ ವೆಚ್ಚದಲ್ಲಿ ಪರಿಸರಕ್ಕೆ ತೊಂದರೆಯಾಗದಂತೆ ಅತ್ಯಧುನಿಕ ತಂತ್ರಜ್ಞಾನವನ್ನು ಬಳಸಿ ಎಥೆನಾಲ್, ಜೈವಿಕ ಇಂಧನ ಘಟಕ ಉತ್ಪಾದನೆಗೆ ಮುಂದಾಗಿದೆ. ಇದರಿಂದ ಹೊರಗೆ ಬರುವ ಪೇಂಟ್ ವಾಶ್ ಸಂಸ್ಕರಣೆ ಮಾಡಿ ಮರುಬಳಕೆಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುವದು. ಇದರಿಂದ ರೈತರಿಗೆ ಮತ್ತು ಕಾರ್ಖಾನೆಗೆ ಲಾಭವಾಗಲಿದೆ. ಕಾರ್ಖಾನೆಯ ಆವರಣದಲ್ಲಿ ಸಾವಿರಾರು ಸಂಖ್ಯೆಯ ಮರಗಿಡಗಳನ್ನು ಬೆಳೆಸಲಾಗಿದೆ. ತ್ಯಾಜ್ಯ ಹೊರಹೋಗದಂತೆ ಕ್ರಮವಹಿಸಿದೆ. ಹೀಗಿದ್ದರೂ ಅಪಪ್ರಚಾರ ಮಾಡುತ್ತಿರುವುದು ಬೇಸರ ತರಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾದ ನಿರ್ದೇಶನದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಎಥೆನಾಲ್ ಘಟಕ ಸ್ಥಾಪನೆ ಮಾಡಲಾಗುವುದು. ಇದರಿಂದ ರೈತರಿಗೆ ನಿಗದಿಪಡಿಸಿದ ಎಫ್.ಆರ್.ಪಿ ದರಕ್ಕಿಂತಲೂ ಹೆಚ್ಚಿನ ಹಣ ನೀಡಲು ಸಾಧ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಎಥೆನಾಲ್ ಇಂಧನಕ್ಕೆ ಬೇಡಿಕೆಯಿದ್ದು, ಕಾರ್ಖಾನೆ ಹೆಚ್ಚುವರಿ ಲಾಭಗಳಿಸಿ ಅಭಿವೃದ್ಧಿಯ ಸಾಧ್ಯವಾಗಲಿದೆ. ಪರಿಸರಪ್ರಿಯರು ಎಂದು ಹೇಳಿಕೊಂಡು ಕೆಲವರು ಜನರನ್ನು ತಪ್ಪುದಾರಿಗೆಳೆಯುತಿದ್ದಾರೆ.  ಅಂಥವರ ಮಾತಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಕಾರ್ಖಾನೆಯ ಅಧಿಕಾರಿ ದತ್ತಾತ್ರೇಯ, ಮುಖಂಡರಾದ ಬಲರಾಮೇಗೌಡ, ಮಂಜುನಾಥ್, ರವಿಕುಮಾರ್, ಕಾಯಿ ಮಂಜೇಗೌಡ, ದರ್ಶನ್, ಜಯರಾಮೇಗೌಡ, ಸಾಕ್ಷೀಬೀಡು ಕೃಷ್ಣೇಗೌಡ, ವಡಕಹಳ್ಳಿ ಮಂಜೇಗೌಡ, ದೇವರಾಜೇಗೌಡ, ಸುರೇಶ್  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT