ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಭ್ರೂಣಹತ್ಯೆ; ಮಹಿಳೆ ಸಾವು, ಹಲವರು ಅಸ್ವಸ್ಥ

Published 29 ಮೇ 2024, 0:45 IST
Last Updated 29 ಮೇ 2024, 3:08 IST
ಅಕ್ಷರ ಗಾತ್ರ

ಮಂಡ್ಯ: ಹೆಣ್ಣು ಭ್ರೂಣಹತ್ಯೆ ಉದ್ದೇಶದಿಂದ ರಹಸ್ಯವಾಗಿ ಗರ್ಭಪಾತ ಮಾಡಿಸಿಕೊಂಡ ಮಹಿಳೆಯರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈಗಾಗಲೇ ಹಲವರು ಅಸ್ವಸ್ಥಗೊಂಡಿದ್ದು ಒಬ್ಬರು ಮೃತಪಟ್ಟಿರುವ ಪ್ರಕರಣ ವರದಿಯಾಗಿದೆ.

ಪಾಂಡವಪುರದಲ್ಲಿ ಗರ್ಭಪಾತ ಮಾಡಿಸಿಕೊಂಡ ಕೆ.ಆರ್‌.ನಗರ ತಾಲ್ಲೂಕಿನ ಇಬ್ಬರು ಮಹಿಳೆಯರು ಈಚೆಗೆ ತೀವ್ರ ಅಸ್ವಸ್ಥಗೊಂಡಿದ್ದರು. ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಭಯಪಟ್ಟು ಗರ್ಭಪಾತ ಮಾಡಿಸಿಕೊಂಡ ಸ್ಥಳಕ್ಕೇ ಬಂದಿದ್ದರು. ಅವರ ಕುಟುಂಬದ ಸದಸ್ಯರು ಪಾಂಡವಪುರ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಗರ್ಭಪಾತ ಮಾಡಿಸಿದ್ದ ಶುಶ್ರೂಷಕಿ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

‘ಆದರೆ, ತೀವ್ರ ಅಸ್ವಸ್ಥತೆ ಕಾರಣಕ್ಕೆ ಇಬ್ಬರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇಬ್ಬರಲ್ಲಿ ಒಬ್ಬ ಮಹಿಳೆ ಮೃತಪಟ್ಟು, ಮತ್ತೊಬ್ಬರು ಗುಣಮುಖರಾದರು’ ಎಂಬ ವಿಷಯ ಆರೋಗ್ಯ ಇಲಾಖೆ ಅಧಿಕಾರಿಗಳ ತನಿಖೆಯಿಂದ ಪತ್ತೆಯಾಗಿದೆ.

‘ಗರ್ಭಪಾತ ಮಾಡಿಸಿಕೊಂಡ ಮಹಿಳೆಯರು, ವೈಯಕ್ತಿಕ ಹಾಗೂ ವೈದ್ಯಕೀಯ ಆರೈಕೆಯ ಕೊರತೆಯಾಗಿ ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಸಮರ್ಪಕ ಚಿಕಿತ್ಸೆ ಪಡೆಯದಿ
ದ್ದರೆ ಅವರು ಪ್ರಾಣ ಕಳೆದುಕೊಳ್ಳುವ ಅಪಾಯವಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಮೈಸೂರಿನ ಸೇಂಟ್‌ ಜೋಸೆಫ್‌ ಆಸ್ಪತ್ರೆಯಲ್ಲಿ ಕೆ.ಆರ್‌.ನಗರ ಮೂಲದ ಮಹಿಳೆ ಮೃತಪಟ್ಟ ವಿಷಯ ದೃಢಪಟ್ಟಿದೆ. ಆ ಬಗ್ಗೆ ನರ್ಸ್‌ವೊಬ್ಬರು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಪಾಂಡವಪುರದಲ್ಲಿ
ಗರ್ಭಪಾತ ಮಾಡಿರುವುದು ಹಾಗೂ ಅಸ್ವಸ್ಥಗೊಂಡು ಮತ್ತೆ ಪಾಂಡವಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಬಗ್ಗೆ ದಾಖಲೆಗಳಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ತಿಳಿಸಿದರು.

ಆರೋಪಿ ಅಶ್ವಿನಿಗೆ ಸೀರೆ ಉಡುಗೊರೆ

ಪಾಂಡವಪುರ ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ಭ್ರೂಣಹತ್ಯೆ ನಡೆಸುವಾಗ ಸಿಕ್ಕಿಬಿದ್ದ ಪ್ರಮುಖ ಆರೋಪಿ, ಡಿ ದರ್ಜೆ ನೌಕರರಾದ ಅಶ್ವಿನಿ ಬಗ್ಗೆ ಹಲವು ಕುತೂಹಲಕಾರಿ ಅಂಶಗಳು ಗೊತ್ತಾಗಿವೆ.

‘ಅಶ್ವಿನಿಯೇ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದು, ಗಂಡು ಭ್ರೂಣ ಪತ್ತೆ
ಯಾದರೆ ಹಣ, ಸೀರೆ ಸೇರಿ ಹಲವು ರೀತಿಯ ಉಡುಗೊರೆ ಪಡೆಯುತ್ತಿದ್ದರು. ಯಾವುದೇ ಮುಂಜಾಗರೂಕತೆ ಕೈಗೊಳ್ಳದೇ ಗರ್ಭಿಣಿಯರಿಗೆ ಗರ್ಭಪಾತದ ಗುಳಿಗೆ (ಎಂಟಿಪಿ ಕಿಟ್) ನುಂಗಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಆರೋಗ್ಯ ಇಲಾಖೆ ವತಿಯಿಂದಲೂ ಸಮಗ್ರ ತನಿಖೆ ನಡೆಯುತ್ತಿದ್ದು ಈವರೆಗೆ 10 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ತಿಳಿಸಿದರು.

ಕಾಡುತ್ತಿರುವ ನಂಜು

‘ಗರ್ಭಪಾತ ಮಾಡಿಸಿಕೊಂಡವರು ವಿಷಯವನ್ನು ರಹಸ್ಯವಾಗಿಡಲು ಯತ್ನಿಸುತ್ತಿದ್ದಾರೆ. ಏನೂ ಆಗಿಲ್ಲ ಎಂಬಂತೆ ನಿತ್ಯದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದು, ವೈದ್ಯಕೀಯ ಹಾಗೂ ವೈಯಕ್ತಿಕ ಆರೈಕೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗಾಗಿ ಹೊಟ್ಟೆಯ ಗಾಯ ನಂಜಾಗಿ (ಸೆಪ್ಟಿಕ್‌) ಹಲವು ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ತಾಯಿ- ಮಗುವಿನ ಜೀವ ಅಪಾಯದಲ್ಲಿದ್ದಾಗ ಮಾತ್ರ ಗರ್ಭಪಾತ ಮಾಡಬಹುದು. ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, 25ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯಲ್ಲಿ ಸಹಾಯಕರಾಗಿ ಕೆಲಸ ಮಾಡಿದ ಎಂಬಿಬಿಎಸ್ ವೈದ್ಯರು, ಗರ್ಭಪಾತ ನಡೆಸುವ ಅರ್ಹತೆಯ ಪ್ರಮಾಣಪತ್ರ ಪಡೆದವರು ಮಾತ್ರ ಅದನ್ನು ನಡೆಸಬೇಕು.‌ ಆದರೆ ಭ್ರೂಣ ಹತ್ಯೆಯಲ್ಲಿ ನರ್ಸ್‌ಗಳೇ ಗರ್ಭಪಾತ ಪ್ರಕ್ರಿಯೆ ನಡೆಸುತ್ತಿರುವುದು ಅಪಾಯಕಾರಿ’ ಎಂದು ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT