ಐತಿಹಾಸಿಕ ಗೆಳತಿ ಮಂಟಪ ನಿರ್ಲಕ್ಷ್ಯ

ಸೋಮವಾರ, ಜೂನ್ 17, 2019
28 °C
ಜೂಜುಕೋರರು, ಕುಡುಕರು ಹಾಗೂ ಪುಂಡರ ಅಡ್ಡೆಯಾದ ಸ್ಮಾರಕ

ಐತಿಹಾಸಿಕ ಗೆಳತಿ ಮಂಟಪ ನಿರ್ಲಕ್ಷ್ಯ

Published:
Updated:
Prajavani

ನಾಗಮಂಗಲ: ಪಟ್ಟಣದಿಂದ ಕೆ.ಆರ್.ಪೇಟೆಗೆ ತೆರಳುವ ರಸ್ತೆ ಸಮೀಪದ ಗುಡ್ಡದಲ್ಲಿರುವ ಗೆಳತಿ ಮಂಟಪ ಇಂದು ಸ್ಥಳೀಯರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.

ಪಟ್ಟಣದಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ಗುಡ್ಡದ ಮಂಟಪ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಸ್ಥಳೀಯರಿಗೆ ಇದರ ಪರಿಚಯವೇ ಇಲ್ಲದಂತಾಗಿದೆ. ಅಂದು ಪ್ರಕೃತಿಯ ಸೌಂದರ್ಯ ಸವಿಯಲು ನಿರ್ಮಾಣವಾಗಿದ್ದ ಮಂಟಪ ಇಂದು ಜೂಜುಕೋರರ, ಕುಡುಕರ, ಪುಂಡರ ಮತ್ತು ಮೋಜು ಮಸ್ತಿ ಮಾಡುವವರ ಅಡ್ಡೆಯಾಗಿ ಪರಿಣಮಿಸಿದೆ. ಮೋಜಿಗಾಗಿ ಬಂದ ಕಿಡಿಗೇಡಿಗಳು ಮದ್ಯದ ಬಾಟಲಿಗಳನ್ನು ಸ್ಮಾರಕದ ಕಂಬಗಳಿಗೆ ಒಡೆದು, ಇಸ್ಪೀಟ್ ಕಾರ್ಡುಗಳು, ಪ್ಲಾಸ್ಟಿಕ್ ಬಾಟಲಿ, ಲೋಟ ಮತ್ತು ಕವರ್‌ಗಳನ್ನು ಬಿಸಾಡಿ ಮಂಟಪವನ್ನು ಹಾಳು ಮಾಡಿದ್ದಾರೆ.

ಸ್ಮಾರಕ ಹಳೆದಾಗಿರುವುದರಿಂದ ಗೋಡೆಗಳು ಕುಸಿದು ಬೀಳುವ ಹಂತ ತಲುಪಿವೆ. ಅಲ್ಲದೆ ಗುಡ್ಡದ ಕಡೆಗೆ ಬರುವ ದಾರಿಯಲ್ಲಿ ಪಟ್ಟಣದ ಕೋಳಿ ಅಂಗಡಿ ಮತ್ತು ಕಲ್ಯಾಣ ಮಂಟಪದ ತ್ಯಾಜ್ಯಗಳನ್ನು ಸುರಿಯಲಾಗುತ್ತಿದ್ದು, ಇದರಿಂದಾಗಿ ಮಂಟಪದ ದಾರಿಗೆ ಹೋದರೆ ದುರ್ನಾತ ಮೂಗಿಗೆ ಬಡಿಯುತ್ತದೆ.

ನಾಗಮಂಗಲದ ಕನ್ನಡ ಸಂಘದ ಗೆಳೆಯರ ಬಳಗ ಆಗಾಗ್ಗೆ ಹುಣ್ಣಿಮೆಯ ರಾತ್ರಿಯಲ್ಲಿ ಈ ಮಂಟಪಕ್ಕೆ ಬರುವ ವಾಡಿಕೆ ಇಟ್ಟುಕೊಂಡಿದ್ದಾರೆ. ಇಂತಹ ಅದ್ಭುತ ಇತಿಹಾಸ ಹೊಂದಿರುವ ಮನೋಹರ ಸ್ಥಳವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಮಂಪಟದ ಐತಿಹಾಸಿಕ ಹಿನ್ನೆಲೆ

15ನೇ ಶತಮಾನದಲ್ಲಿ ನಾಗಮಂಗಲವನ್ನು ಆಳುತ್ತಿದ್ದ ವಿಜಯನಗರದ ಸಾಮಂತನಾಗಿದ್ದ ತಿಮ್ಮಣ್ಣ ದಂಡನಾಯಕ ತನ್ನ ಗೆಳತಿಯ ನೆನಪಿಗಾಗಿ ಕಟ್ಟಿಸಿದ ಸುಂದರ ಮಂಟಪ ಇದು. 20x 20 ಅಡಿ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಸುತ್ತಲೂ ಕಲ್ಲುಗಳಿಂದ ಮಾಡಿದ ಜಗತಿ ಮತ್ತು ಒಂಬತ್ತು ಅಂಕಣಗಳನ್ನು ಇದು ಹೊಂದಿದೆ. ಮಂಟಪದಲ್ಲಿ ನಿಂತು ನೋಡಿದರೆ ಪಟ್ಟಣದ ಸಂಪೂರ್ಣ ವಿಹಂಗಮ ನೋಟ ಕಾಣಸಿಗುತ್ತದೆ. ಈ ದೃಶ್ಯ ನೋಡಲು ಈಗಲೂ ರೋಮಾಂಚನವಾಗುತ್ತದೆ.

ಈ ಗುಡ್ಡ ನಾಗಮಂಗಲದವರಿಗೆ ಒಂದು ನೈಸರ್ಗಿಕ ಟೆಲಿಸ್ಕೋಪ್‌ನಂತಿದೆ. ಪಕ್ಕದಲ್ಲೇ ತಿಮ್ಮಣ್ಣ ದಂಡನಾಯಕ ಗೆಳತಿ ವಾಸವಿದ್ದ ಗವಿಯೂ ಇದೆ. ಗವಿಯ ಬಂಡೆಯನ್ನು ಹೊಡೆದು ಕಲ್ಲುಗಣಿಗಾರಿಕೆ ನಡೆಸಲು ಪ್ರಯತ್ನಿಸಲಾಗಿದೆ. ಗವಿಗೆ ಪ್ರವೇಶದ್ವಾರದಲ್ಲಿ ತೆಳು ಇಟ್ಟಿಗೆಗಳಿಂದ ಕಟ್ಟಿದ ಗೋಡೆಯ ಅವಶೇಷಗಳಿವೆ.

ಕೃತಜ್ಞತೆ ಮರೆತ ಜನ

ತಿಮ್ಮಣ್ಣ ದಂಡನಾಯಕ ಅವನ ಗೆಳತಿ ಹೆಸರಿನಲ್ಲಿ ಕಟ್ಟಿಸಿದ ಕೆರೆಯ ನೀರನ್ನೇ ಪಟ್ಟಣದ ಜನ ಇಂದೂ ಕುಡಿಯುತ್ತಿ ದ್ದಾರೆ. ಆದರೆ, ಆ ಮಹಿಳೆಯ ನೆನಪಿಗಾಗಿ ಕಟ್ಟಿದ ಸ್ಮಾರಕವನ್ನು ರಕ್ಷಿಸದೇ ಇರುವುದನ್ನು ನೋಡಿ ದರೆ ನಾವು ಎಷ್ಟು ಕೃತಜ್ಞರು ಎಂಬುದು ತಿಳಿಯುತ್ತದೆ ಎಂದು ಇತಿಹಾಸ ತಜ್ಞ ಕಲೀಂ ಉಲ್ಲಾ ಬೇಸರ ವ್ಯಕ್ತಪಡಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !