ಅಶುದ್ಧ ನೀರಿನಲ್ಲೇ ದೇವರಿಗೆ ತೀರ್ಥಸ್ನಾನ

7
ಕಲ್ಯಾಣಿಯಲ್ಲಿ ತೇಲುತ್ತಿದ್ದ ಕಸ–ಕಡ್ಡಿ ರಾಶಿ

ಅಶುದ್ಧ ನೀರಿನಲ್ಲೇ ದೇವರಿಗೆ ತೀರ್ಥಸ್ನಾನ

Published:
Updated:
Deccan Herald

ಮೇಲುಕೋಟೆ: ಕಲ್ಯಾಣಿಯ ನೀರಿನಲ್ಲಿ ತೇಲುತ್ತಿದ್ದ ಕಸಗಳ ರಾಶಿಯ ನಡುವೆಯೇ ಚೆಲುವನಾರಾಯಣಸ್ವಾಮಿಯ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ತೀರ್ಥಸ್ನಾನ ಕಾರ್ಯಕ್ರಮ ಸೋಮವಾರ ಮಧ್ಯಾಹ್ನ ನೆರವೇರಿತು. ಇದು ಭಕ್ತರ ಅಸಮಾಧಾನಕ್ಕೂ ಕಾರಣವಾಯಿತು.

ಮುಮ್ಮುಡಿ ಕೃಷ್ಣರಾಜ ಒಡೆಯರ್‌ ಅವರು ತೀರ್ಥಸ್ನಾನ ಪೂಜೆಗಾಗಿಯೇ ನಿರ್ಮಿಸಿರುವ ಭುವನೇಶ್ವರಿ ಮಂಟಪದಲ್ಲಿ ಈ ಬಾರಿ ಕಾರ್ಯಕ್ರಮ ನೆರವೇರದೇ ರಾಜರ ಆಶಯಕ್ಕೂ ಕತ್ತರಿ ಬಿತ್ತು.

ಬ್ರಹ್ಮೋತ್ಸವದ ಒಂಬತ್ತನೇ ದಿನ ನೀರನಲ್ಲಿ ಗಲೀಜು ತೇಲುತ್ತಿದ್ದರೂ ವಿಧಿಯಿಲ್ಲದೇ ಅರ್ಚಕರು ಮತ್ತು ಸ್ಥಾನೀಕರು ಅಭಿಷೇಕದ ವಿಧಿವಿಧಾನ ನೆರವೇರಿಸಿದರು. ಕಲ್ಯಾಣಿಯ ಮೂಲೆಗಳಲ್ಲಿ ಮೆರವಣಿಗೆ ಬರುವ ದಾರಿಯಲ್ಲಿ ಕಸ ಮತ್ತು ತ್ಯಾಜ್ಯ ರಾಶಿಯೇ ಬಿದ್ದಿದ್ದರೂ ಯಾರೂ ಶುಚಿಗೊಳಿಸಿರಲಿಲ್ಲ. ಇಡೀ ತೀರ್ಥಸ್ನಾನ ಕಲುಷಿತ ಪರಿಸರದ ಮಧ್ಯೆಯೇ ನೆರವೇರಿತು.

ಭುವನೇಶ್ವರಿ ಮಂಟಪದ ಅಕ್ಕಪಕ್ಕ ಮಲಮೂತ್ರ ವಿಸರ್ಜನೆ ಹಾಗೂ ಗಿಡಗಂಟಿಗಳು ಹೇರಳವಾಗಿ ಬೆಳೆದಿದ್ದರಿಂದ ಪಕ್ಕದ ಗಜೇಂದ್ರವರದನ ಸನ್ನಿಧಿಯ ಆವರಣದಲ್ಲಿ ಅ ಅಭಿಷೇಕ ನೆರವೇರಿತು.

ಭಾನುವಾರ ನಡೆದ ರಥೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಮಾತನಾಡಿ, ‘ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಲಗತ್ತಿಸಿ ರಾಜ್ಯ ಪ್ರಾಚ್ಯವಸ್ತು ಇಲಾಖೆಗೆ ಪತ್ರ ಬರೆಯಲಾಗಿದೆ. ಅವರು ಕ್ರಮ ಜರುಗಿಸಬೇಕು’ ಎಂದಿದ್ದಾರೆ.

ಪ್ರತಿಭಟನೆ: ಎಚ್ಚರಿಕೆ

ಗ್ರಾ.ಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಮಾತನಾಡಿ, ‘ಒಂದು ವಾರದಲ್ಲಿ ಕಲ್ಯಾಣಿಯ ಪರಿಸರವನ್ನು ಸ್ವಚ್ಛಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸದಿದ್ದರೆ ದೇವಾಲಯದ ಕಚೇರಿಯ ಎದುರು ಮೇಲುಕೋಟೆಯ ಎಲ್ಲ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ. ಮೇಲುಕೋಟೆಯ ಭವ್ಯ ಸ್ಮಾರಕಗಳ ರಕ್ಷಣೆಯ ಬಗ್ಗೆ ದೇಗುಲದ ಆಡಳಿತ ಮತ್ತು ರಾಜ್ಯ ಪ್ರಾಚ್ಯ ವಸ್ತು ಇಲಾಖೆ ನಿರ್ಲಕ್ಷ್ಯ ತೋರಿದೆ. ಚಲನಚಿತ್ರಗಳ ಚಿತ್ರೀಕರಣದಿಂದಲೇ ಲಕ್ಷಾಂತರ ರೂಪಾಯಿಗಳು ಆದಾಯವಿದ್ದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !