ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡವಪುರ|ಸರ್ಕಾರ ರೂಪಿಸುವ ಬೃಹತ್ ಯೋಜನೆಗಳು ಅರಣ್ಯ ನಾಶಕ್ಕೆ ಕಾರಣ: ಶಿವಾನಂದ ಕಳವೆ

Published 4 ಜೂನ್ 2023, 13:17 IST
Last Updated 4 ಜೂನ್ 2023, 13:17 IST
ಅಕ್ಷರ ಗಾತ್ರ

ಪಾಂಡವಪುರ: ಸರ್ಕಾರ ರೂಫಿಸುವ ಬೃಹತ್ ಯೋಜನೆಗಳು ಅರಣ್ಯ ನಾಶಕ್ಕೆ ಕಾರಣವಾಗಿವೆ ಎಂದು ಪರಿಸರವಾದಿ, ಲೇಖಕ ಶಿವಾನಂದ ಕಳವೆ ಹೇಳಿದರು.


ತಾಲ್ಲೂಕಿನ ಹರವ ಗ್ರಾಮದ ರಾಮದೇವರ ದೇವಸ್ಥಾನದ ಆವರಣದ ದೇವರ ಕಾಡಿನಲ್ಲಿ ‘ಪರಿಸರದಿಂದ ನಾವು–ಪರಿಸರಕ್ಕಾಗಿ ನಾವು–ಪರಿಸರ ಬಳಗವು ಭಾನುವಾರ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ‘ಇರುವುದೊಂದೆ ಭೂಮಿ ಉಳಿಸಿಕೊಳ್ಳೋಣ ಸ್ವಾಮಿ’ ಮರದ ಕೆಳಗೆ ಮಾತುಕತೆ ಕಾರ್ಯಕ್ರಮದಲ್ಲಿ ‘ಮರ ಅಭಿವೃದ್ದಿ ಮತ್ತು ವಿಮರ್ಶೆ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.


ಸರ್ಕಾರಗಳು ಜನರನ್ನು ಹೊರಗಿಟ್ಟು ಅರಣ್ಯ ರಕ್ಷಿಸಲು ಯೋಚಿಸುತ್ತವೆ. ಆದರೆ ವಾಸ್ತವವಾಗಿ ಇದು ಸಾಧ್ಯವಿಲ್ಲ. ಅರಣ್ಯಕ್ಕೆ ಬೇಲಿ ಹಾಕುವ ಅವಶ್ಯಕತೆ ಇಲ್ಲ. ಬದಲಾಗಿ ಅವರ ರಕ್ಷಣೆಯಾದರೆ ಸಾಕು. 1988ರ ಕಾಯ್ದೆ ಪ್ರಕಾರ ಅರಣ್ಯ ಬೆಳೆಸುವುದಕ್ಕೆ ಮಹತ್ವ ದೊರೆತಿದೆ. ಅರಣ್ಯ ರಕ್ಷಣೆಗಾಗಿ ರೂಪಿಸಬೇಕಾದ ಯೋಜನೆಗಳ ಬಗ್ಗೆ ಅನೇಕರು ವರದಿ ನೀಡಿದ್ದಾರೆ. ಅದನ್ನು ಅನುಷ್ಠಾನಗೊಳಿಸಲು ಕಾಳಜಿಯ ಕೊರತೆ ಇದೆ. ಕಾಡಿಗೆ ಬೀಳುವ ಬೆಂಕಿ ಅರಣ್ಯವನ್ನು ಸುಡುತ್ತಿಲ್ಲ. ಬದಲಿಗೆ ಮನುಷ್ಯರನ್ನೇ ಸುಡುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.


ಗಿಡಮರ ಬೆಳೆಸುವ ವಿಚಾರದಲ್ಲಿ ರೈತರು ಮಂಚೂಣಿಯಲ್ಲಿದ್ದಾರೆ. ರಾಜ್ಯದಲ್ಲಿ ಹಲವಾರು ರೈತರು ತಮ್ಮ ಜಮೀನುಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮರಗಳನ್ನು ಬೆಳೆದು ಪೋಷಣೆ ಮಾಡುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ. ರೈತ ಒಂದು ಮರವನ್ನು ಕಡಿಯಲು ಅನುಮತಿಸುವುದಿಲ್ಲ. ಮರವನ್ನು ಮಕ್ಕಳಂತೆ ಬೆಳೆಸಿದ್ದೇನೆ ಕಡಿಯಲು ಮನಸ್ಸು ಬರುವುದಿಲ್ಲ ಎಂದು ಹೇಳುತ್ತಾನೆ. ಇದು ರೈತರಿಗೆ ಪರಿಸರದ ಮೇಲಿರುವ ನಿಜವಾದ ಕಾಳಜಿ ಎಂದರು.


ಕೇವಲ ಸಾಂಬಾರು ಪದಾರ್ಥಗಳ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ದೇಶದ ಅರಣ್ಯ ಸಂಪತ್ತನ್ನು ಲೂಟಿ ಮಾಡಿದರು. ಡಚ್ಚರು ಮತ್ತು ಫ್ರೆಂಚರು ಸಾಂಬಾರು ಪದಾರ್ಥಗಳಲ್ಲೊಂದಾದ ಕಾಳು ಮೆಣಸಿನ ದರವನ್ನು ಏರಿಕೆ ಮಾಡಿದ ಪರಿಣಾಮವಾಗಿ ಸಾಂಭಾರು ಪದಾರ್ಥಗಳ ನೇರ ಖರೀದಿಗೆ ಭಾರತಕ್ಕೆ ಆಗಮಿಸಿದ ಬ್ರಿಟಿಷರು ಇಲ್ಲಿನ ಕಾಡುಗಳನ್ನು ನಾಶ ಮಾಡಿದರು ಎಂದು ಹೇಳಿದರು.


ಬಳಿಕ ಪ್ರಶ್ನೋತ್ತರ ಮತ್ತು ಚರ್ಚೆ ನಡೆಯಿತು ಜತೆಗೆ ಮಕ್ಕಳು ಪರಿಸರ ಗೀತೆಗಳನ್ನು ಹಾಡಿದರು. ಪರಿಸರವಾದಿ ಮೈಸೂರಿನ ಹರೀಶ್ ಅವರು ‘ತಾರಸಿ ತೋಟಗಾರಿಕೆ’ಕುರಿತು ಮಾತನಾಡಿದರು. ನಂತರ ಮುಕ್ತ ಸಂವಾದ, ಚರ್ಚೆ ನಡೆಯಿತು.


ದೇವರ ಕಾಡು ಬೆಳೆಸಿದ ಲೇಖಕ ಹರವು ದೇವೇಗೌಡ ಅವರ ನೇತೃತ್ವದಲ್ಲಿ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರೈತ ಸಂಘದ ಮುಖಂಡ ಹರವು ಪ್ರಕಾಶ್, ಚಿಂತಕ ಪರಶುರಾಮೇಗೌಡ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ಡಿ.ಕೆ.ಅಂಕಯ್ಯ, ಮಕ್ಕಳ ಸಾಹಿತ್ಯ ಪರಿಷತ್ತಿನ ಎಚ್.ಆರ್.ಧನ್ಯಕುಮಾರ್, ಕೋ.ಪು.ಗುಣಶೇಖರ್ ಇತರರು ಇದ್ದರು.

ದೇವರ ಕಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಪರಿಸರ ಗೀತೆ ಹಾಡಿದರು.
ದೇವರ ಕಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಪರಿಸರ ಗೀತೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT