ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ | ಭೂ ಅಕ್ರಮದ ತನಿಖೆ: ನಿವೃತ್ತ ನ್ಯಾಯಮೂರ್ತಿ ತನಿಖಾ ತಂಡ

Published 8 ಜನವರಿ 2024, 13:36 IST
Last Updated 8 ಜನವರಿ 2024, 13:36 IST
ಅಕ್ಷರ ಗಾತ್ರ

ಮಳವಳ್ಳಿ: ‘ತಾಲ್ಲೂಕಿನಲ್ಲಿ ನಡೆದ ಭೂ ಅಕ್ರಮದ ಸಮಗ್ರ ತನಿಖೆಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ನಿರಂತರವಾಗಿ ಸರ್ಕಾರಿ ಭೂಮಿಗಳ ಪರಭಾರೆ ನಡೆಯುತ್ತಿದೆ ಎಂದು ಚುನಾವಣೆಗೆ ಮುನ್ನ ಧ್ವನಿ ಎತ್ತಿದ್ದೆನು. ಆಗ ಯಾವುದೇ ದಾಖಲೆಗಳ ಕೊರತೆ ಇತ್ತು. ಇದೀಗ ದಾಖಲೆ ಲಭ್ಯವಾಗಿದ್ದು, 300 ಎಕರೆ ಸರ್ಕಾರಿ ಭೂಮಿ ಹಿಂಪಡೆದಿದ್ದು, ಇನ್ನೂ 400 ಎಕರೆ ಭೂಮಿಯನ್ನು ಸದ್ಯದಲ್ಲಿ ಹಿಂದಕ್ಕೆ ಪಡೆಯಲಾಗುವುದು’ ಎಂದರು.

‘ತಾಲ್ಲೂಕಿನಲ್ಲಿ ನಡೆದ ಅಕ್ರಮ ಭೂ ಕಬಳಿಕೆ ಹಗರಣಗಳ ವಿರುದ್ಧ ನಡೆಯುತ್ತಿರುವ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಕೆಲವರು ಹಮ್ಮಿಕೊಂಡಿರುವ ಪ್ರತಿಭಟನೆಗೆ ನಾನು ಹೆದರುವುದಿಲ್ಲ, ಶಾಸಕನಾಗಿ ಸರ್ಕಾರಿ ಭೂಮಿಯ ರಕ್ಷಣೆ ಕೆಲಸ ಮಾಡುತ್ತಿರುವೆ. ಅಕ್ರಮಗಳ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ದಳ ರಚಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ಹೇಳಿದರು.

‘ಹಗರಣದಲ್ಲಿ ಭಾಗಿಯಾಗಿರುವ ಕೆಲವರು ತನಿಖೆಯಿಂದ ತಪ್ಪಿಸಿಕೊಳ್ಳಲು ಇಂಥ ಹೋರಾಟ ನಡೆಸುತ್ತಿದ್ದು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಸ್ವಾತಂತ್ರ್ಯ ಇದೆ’ ಎಂದು ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕೊಳವೆ ಬಾವಿ ಕೊರೆದ ಆರು ಮಂದಿ ಫಲಾನುಭವಿಗಳಿಗೆ ಸಲಕರಣೆಗಳು ಹಾಗೂ ಇಬ್ಬರು ಮಹಿಳೆಯರಿಗೆ ಸಾಲದ ಚೆಕ್ ವಿತರಿಸಿದರು. ಇಲಾಖೆಯ ಜಿಲ್ಲಾ ನಿರ್ದೇಶಕಿ ಮಧುಶ್ರೀ, ತಾಲ್ಲೂಕು ಅಧಿಕಾರಿ ಆಶಾ ಇದ್ದರು.

ನನ್ನ ಮೇಲೆಯೇ ದಬ್ಬಾಳಿಕೆ ದೌರ್ಜನ್ಯ ನಡೆಸುವ ಪ್ರಯತ್ನ ನಡೆಯುತ್ತಿದ್ದು ಇದಕ್ಕೆಲ್ಲ ಬಗ್ಗುವುದಿಲ್ಲ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಮಟ್ಟ ಹಾಕದೇ ಬಿಡುವುದಿಲ್ಲ
ಪಿ.ಎಂ.ನರೇಂದ್ರಸ್ವಾಮಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT