ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಸಾಮರಸ್ಯಕ್ಕೆ ಕೆಂಪೇಗೌಡ ಮಾದರಿ

ಕೆಂಪೇಗೌಡ ಜಯಂತಿ ಆಚರಣೆ; ಭಾವಚಿತ್ರ ಮೆರವಣಿಗೆ, ಡಾ.ಎಸ್‌.ಬಿ.ಶಂಕರೇಗೌಡ ಅಭಿಮತ
Last Updated 27 ಜೂನ್ 2018, 10:46 IST
ಅಕ್ಷರ ಗಾತ್ರ

ಮಂಡ್ಯ: ‘ಧರ್ಮ ಸಾಮರಸ್ಯ, ಸಮನ್ವಯ, ಸಮಾನತೆಗೆ ಮಾದರಿಯಾಗಿ ನಾಡಪ್ರಭು ಕೆಂಪೇಗೌಡರು ಬದುಕಿದ್ದರು. ಅನ್ಯ ಧರ್ಮ ಸಹಿಷ್ಣುವಾಗಿದ್ದ ಅವರು ಮುನ್ನೋಟದೊಂದಿಗೆ ಬೆಂಗಳೂರು ನಿರ್ಮಿಸಿದರು’ ಎಂದು ನಿವೃತ್ತ ಪ್ರಾಚಾರ್ಯ ಡಾ.ಎಸ್‌.ಬಿ.ಶಂಕರೇಗೌಡ ಹೇಳಿದರು.

ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬುಧವಾರ ನಗರದ ಕಲಾಮಂದಿರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಅವರು ಉಪನ್ಯಾಸ ನೀಡಿದರು.

‘ವಿಜಯನಗರ ಅರಸರಿಗೆ ಸಾಮಂತರಾಗಿದ್ದ ಕೆಂಪೇಗೌಡರು ರಾಜಭಕ್ತಿಯ ಸಾಕಾರ ಮೂರ್ತಿಯಾಗಿದ್ದರು. ಕಾರಾಗೃಹದಲ್ಲಿದ್ದಾಗಲೂ ರಾಜಭಕ್ತಿ ತೋರಿ ಮೆಚ್ಚುಗೆಗೆ ಪಾತ್ರರಾದರು. ಅವರ ಪ್ರಗತಿಪರ ಚಿಂತನೆಗಳು, ಅಭಿವೃದ್ಧಿಯ ಮುನ್ನೋಟ ವಿಜಯನಗರ ಅರಸರಿಗೆ ಮೆಚ್ಚುಗೆಯಾಗಿತ್ತು. ಬೆಂಗಳೂರು ನಿರ್ಮಾಣ ಕಾರ್ಯದಲ್ಲಿ ಅರಸರಿಂದ ಅಪಾರ ಸಹಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇತಿಹಾಸದ ಅರಿವು ಹೊಂದಿದ್ದ ಅವರು ಹೊಸ ಇತಿಹಾಸ ಸೃಷ್ಟಿಸಿದರು. ಯಲಹಂಕವನ್ನಾಳಿದ ಪ್ರಭುಗಳಲ್ಲಿ ಕೆಂಪೇಗೌಡರು ನಾಡಿನ ಪ್ರಗತಿಗೆ ಆದ್ಯತೆ ನೀಡಿದರು’ ಎಂದರು.

‘ಬೆಂದಕಾಳೂರು ಬೆಂಗಳೂರು ಆಗಿ ರೂಪ ಪಡೆಯಿತು ಎಂಬ ಮಾತಿದೆ, ಆದರೆ ಅದಕ್ಕೆ ಸ್ಪಷ್ಟ ದಾಖಲೆಗಳು ಎಲ್ಲೂ ಸಿಗುವುದಿಲ್ಲ. ಕೆಂಪೇಗೌಡರು ಬೆಂಗಳೂರು ನಗರವನ್ನು ಹೊಸದಾಗಿ ನಿರ್ಮಾಣ ಮಾಡಿದರು. ದೊಡ್ಡ ನಗರವಾಗಿ ರೂಪಗೊಂಡ ಕಾರಣದಿಂದಲೇ ನಮ್ಮ ರಾಜ್ಯದ ರಾಜಧಾನಿ ಮಹಾನಗರವಾಗಿ ಬೆಳೆಯಿತು. ಒಕ್ಕಲುತನವನ್ನು ಪೋಷಣೆ ಮಾಡುತ್ತಿದ್ದ ಅವರು ಒಂದು ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಿದರು. ಅದೊಂದು ಜಾತಿಯಾಗಿ ರೂಪಗೊಳ್ಳುವ ಬದಲು ಒಂದು ಸಂಸ್ಕೃತಿಯಾಗಿ ಹಲವು ಸಮುದಾಯಗಳನ್ನು ಒಳಗೊಂಡು ಮುನ್ನಡೆಯಿತು. ಒಕ್ಕಲುತನ ಮಾಡುವವರೆಲ್ಲರೂ ಒಕ್ಕಲಿಗರು ಎಂಬ ಭಾವನೆ ಮೂಡುವಂತಾಯಿತು’ ಎಂದು ಹೇಳಿದರು.

‘ವಿಜಯನಗರ ಕೀರ್ತಿ ಪತಾಕೆಯನ್ನು ಬೆಂಗಳೂರಿಗೂ ತಂದ ಕೆಂಪೇಗೌಡರು ಮುಂದಾಲೋಚನೆಯೊಂದಿಗೆ ನಗರ ನಿರ್ಮಿಸಿದರು. ಎಂಟು ದಿಕ್ಕುಗಳಲ್ಲಿ ನಗರವನ್ನು ವಿಸ್ತರಣೆ ಮಾಡಿದರು. ಸುತ್ತಲೂ ಕೋಟೆ ಕಟ್ಟಿದರು, ಹೆಬ್ಬಾಗಿಲು ನಿರ್ಮಿಸಿದರು. ಇವು ಇಂದಿಗೂ ಬೆಂಗಳೂರಿನಲ್ಲಿ ಸ್ಮಾರಕವಾಗಿ ಉಳಿದಿವೆ. ಅಕ್ಕಿಪೇಟೆ, ಬಳೆ ಪೇಟೆ ಮುಂತಾದ ಹಲವು ಪೇಟೆಗಳನ್ನು ಅವರು ನಿರ್ಮಿಸಿದರು. ಪೇಟೆಗಳು ಇಂದು ಕಿಷ್ಕಿಂದೆಯಂತಾಗಿದ್ದರೂ ಮೊದಲು ವೃತ್ತಿಯಾಧಾರಿತ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿದ್ದವು. ಬೆಂಗಳೂರು ಇಂದು ಹಲವು ಹೆಸರುಗಳಿಂದ ವಿಶ್ವದೆಲ್ಲೆಡೆ ಗುರುತಿಸಿಕೊಂಡಿದೆ. ಅದರ ಹಿಂದೆ ಕೆಂಪೇಗೌಡರ ಮುನ್ನೋಟವಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಸ್‌.ನಾಗರತ್ನಾ ಸ್ವಾಮಿ ಮಾತನಾಡಿ ‘ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಕೆಂಪೇಗೌಡ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ಬೃಹತ್‌ ಬೆಂಗಳೂರು ನಗರ ನಿರ್ಮಿಸಿದ ಪ್ರಭುಗಳು ಕನ್ನಡ ನಾಡಿಗೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯಬೇಕು. ಇಂದಿನ ಮಕ್ಕಳು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ.ಲಾವಣ್ಯಾ ಕಿರಣ್‌, ಕೆ.ರುದ್ರೇಶ್‌, ಎಂ.ಎನ್‌.ಚೇತನ್‌ಕುಮಾರ್‌, ದೇವರಾಜು, ಧನಂಜಯ, ವೈ.ಎಸ್‌.ಸಿದ್ದೇಗೌಡ ಅವರಿಗೆ ಈ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಂ.ಶ್ರೀನಿವಾಸ್‌, ನಗರಸಭೆ ಪ್ರಭಾರ ಅಧ್ಯಕ್ಷೆ ಸುಜಾತಾ ಮಣಿ, ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌ ಹಾಜರಿದ್ದರು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮೊದಲು ನಗರದ ವಿವಿಧೆಡೆ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾ ತಂಡಗಳ ಜೊತೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ, ಆರ್‌ಪಿ ರಸ್ತೆ ಮೂಲಕ ಮೆರವಣಿಗೆ ಕಲಾಮಂದಿರ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT