ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಭ್ರೂಣಹತ್ಯೆ; ನ್ಯಾಯಾಲಯಕ್ಕೆ ಪಿಸಿಆರ್‌ ಸಲ್ಲಿಕೆ

Published 21 ಮೇ 2024, 13:36 IST
Last Updated 21 ಮೇ 2024, 13:36 IST
ಅಕ್ಷರ ಗಾತ್ರ

ಮಂಡ್ಯ: ಹೆಣ್ಣು ಭ್ರೂಣಹತ್ಯೆ ಪ್ರಕರಣ ಸಂಬಂಧ ಸಿಡಿಐ ವರದಿ ಆಧರಿಸಿ ಆರೋಪಿಗಳ ವಿರುದ್ಧ ವಿಚಾರಣೆ ನಡೆಸುವಂತೆ ಕೋರಿ ಸಕ್ಷಮ ಪ್ರಾಧಿಕಾರದಿಂದ ಮಂಗಳವಾರ ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ನೋಂದಣಿ (ಪಿಸಿಆರ್) ಮಾಡಲಾಯಿತು.

ಸಿಐಡಿ ಅಧಿಕಾರಿಗಳು ವಿಚಾರಣಾ ವರದಿ ಸಲ್ಲಿಸಿ ತಿಂಗಳಾಗಿದ್ದರೂ ಅಧಿಕಾರಿಗಳು ನ್ಯಾಯಾಲಯಕ್ಕೆ ದೂರು ದಾಖಲು ಮಾಡಿಲ್ಲ ಎಂಬ ಬಗ್ಗೆ ‘ಪ್ರಜಾವಾಣಿ’ ಮೇ 18ರಂದು ‘ಜಾಮೀನು ಪಡೆದಿವರಿಂದ ಮತ್ತೆ ಭ್ರೂಣಹತ್ಯೆ’ ವರದಿ ಪ್ರಕಟಿಸಿತ್ತು.

ವರದಿಯಿಂದ ಎಚ್ಚೆತ್ತ ಪಿಸಿ ಮತ್ತು ಪಿಎನ್‌ಡಿಸಿ (ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ) ಅನುಷ್ಠಾನ ಅಧಿಕಾರಿ, ಪ್ರಭಾರ ಉಪ ವಿಭಾಗಾಧಿಕಾರಿ ಸುರೇಶ್‌ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ಜೊತೆಗೆ, 1,500 ಪುಟಗಳ ಸಿಐಡಿ ವರದಿ ಹಾಗೂ ಇನ್ನಿತರ ಸಾಕ್ಷ್ಯಗಳನ್ನು ಒಳಗೊಂಡ ಕಡತವನ್ನು ಸಲ್ಲಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರಿ ವಕೀಲರು ಹಾಜರಿದ್ದರು.

ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಕಚೇರಿಯನ್ನು ಸಕ್ಷಮ ಪ್ರಾಧಿಕಾರವೆಂದು ಗುರುತಿಸಲಾಗಿದೆ. ಸಿಐಡಿ ವರದಿ ನೀಡಿದಾಗ ಶಿವಮೂರ್ತಿ ಅವರು ಉಪ ವಿಭಾಗಾಧಿಕಾರಿಯಾಗಿದ್ದರು. ಆದರೆ ಲೋಕಸಭಾ ಚುನಾವಣಾ ಕಾರಣಕ್ಕೆ ಅವರನ್ನು ನಿಯೋಜನೆ ಮೇಲೆ ಕಳುಹಿಸಲಾಯಿತು. ಅವರು ಪ್ರಭಾರ ಉಪ ವಿಭಾಗಾಧಿಕಾರಿಗೆ ಅಧಿಕಾರ ಪತ್ರ (ಪವರ್‌ ಆಫ್‌ ಅಟಾರ್ನಿ) ನೀಡದ ಕಾರಣ ತಿಂಗಳಾದರೂ ಸಿಐಡಿ ವರದಿ ಕೋರ್ಟ್‌ಗೆ ಸಲ್ಲಿಕೆಯಾಗಿರಲಿಲ್ಲ.

‘ಪಿಸಿ ಮತ್ತು ಪಿಎನ್‌ಡಿಸಿ ರಾಜ್ಯ ಉಪ ನಿರ್ದೇಶಕ ಡಾ.ವಿವೇಕ್‌ ದೊರೆ ಅವರು ಮಂಡ್ಯಕ್ಕೆ ಬಂದು ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಸಭೆ ನಡೆಸಿದರು. ಉಪ ವಿಭಾಗಾಧಿಕಾರಿ ಅವರು ಪ್ರಭಾರಿಯಾಗಿದ್ದರೂ ವ್ಯಕ್ತಿ ಮುಖ್ಯವಲ್ಲ, ಸಕ್ಷಮ ಪ್ರಾಧಿಕಾರವಾಗಿರುವ ಕಾರಣ ಅವರೇ ದೂರು ನೀಡಬಹುದು ಎಂಬ ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ದೂರು ಸಲ್ಲಿಸಲಾಗಿದ್ದು ಮೇ 24ರಂದು ಹಾಜಾರಾಗವಂತೆ ಕೋರ್ಟ್‌ ಸೂಚಿಸಿದೆ’ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT