ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ‘ಗೋ ಬ್ಯಾಕ್‌ ಚಳವಳಿ’

Published 14 ಮಾರ್ಚ್ 2024, 14:16 IST
Last Updated 14 ಮಾರ್ಚ್ 2024, 14:16 IST
ಅಕ್ಷರ ಗಾತ್ರ

ಮಂಡ್ಯ: ಕೇಂದ್ರ ಸರ್ಕಾರದ ಪರವಾಗಿ ‘ನಮೋ ಭಾರತ’ ಕಾರ್ಯಕ್ರಮದಡಿ ನರೇಂದ್ರ ಮೋದಿ ಪರ ಚುನಾವಣಾ ಭಾಷಣ ಮಾಡಲು ಬರುತ್ತಿರುವ ಚಕ್ರವರ್ತಿ ಸೂಲಿಬೆಲೆ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಗೋಬ್ಯಾಕ್‌ ಚಳವಳಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಮಾರ್ಚ್‌16 ರಂದು ನಮೋ ಭಾರತ ದಿಕ್ಸೂಚಿ ಭಾಷಣ ಮಾಡಲು ಬರುತ್ತಿರುವ ಚಕ್ರವರ್ತಿ ಅವರಿಗೆ ಪ್ರವೇಶ ನೀಡಬಾರದು, ಕೋಮುವಾದ ಭಾಷಣದ ಮೂಲಕ ಜನಸಾಮಾನ್ಯರ ಸಾಮರಸ್ಯ ಬದುಕಿಗೆ ಧಕ್ಕೆ ತರುತ್ತಿದ್ದಾರೆ. ಮಂಡ್ಯ ಜಿಲ್ಲೆ ಸ್ವಾಭಿಮಾನ, ಸ್ವಾಮರಸ್ಯ ಮತ್ತು ಪ್ರೀತಿಗೆ ಹೆಸರುವಾಸಿಯಾಗಿದೆ. ಕೆಲ ದಿನಗಳ ಹಿಂದೆ ಧ್ವಜದ ವಿಚಾರವಾಗಿ ಕೋಮುವಾದಿಗಳು, ಜಾತಿ ವಾದಿಗಳು, ದೇಶ ದ್ರೋಹಿಗಳು ರಾಷ್ಟ್ರಧ್ವಜಕ್ಕೆ ಅವಮಾನಿಸಿ ಜಿಲ್ಲೆಯಲ್ಲಿ ಶಾಂತಿ ಕದಡಲು ಮುಂದಾಗಿದ್ದರು’ ಎಂದು ಆರೋಪಿಸಿದರು.

ಇದೀಗ ಮತ್ತದೇ ಕೋಮು ಭಾವನೆ ಕೆರಳಿಸಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಕೆಲಸ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಮಾರ್ಚ್‌ 16 ರಂದು ಚಕ್ರವರ್ತಿ ಸೂಲಿಬೆಲೆ ಭಾಷಣ ಆಯೋಜಿಸಲಾಗಿದೆ. ಈತನ ಪ್ರಚೋದಕ ಭಾಷಣ ಜಿಲ್ಲೆಯ ಎಲ್ಲ ಜನರ ಸೌಹಾರ್ದ ಮತ್ತು ಸಾಮರಸ್ಯ ಬದುಕಿಗೆ ಧಕ್ಕೆ ತರಲಿದೆ ಎಂದು ಕಿಡಿಕಾರಿದರು.

‘ಈತ ಇದೂವರೆಗೂ ಮಾಡಿರುವ ಭಾಷಣಗಳಲ್ಲಿ ಬರೀ ಸುಳ್ಳುಗಳೇ ಹೆಚ್ಚಾಗಿದೆ. ಮೊದಿ ಲ್ಯಾಪ್‌ಟಾಪ್‌ನಲ್ಲೇ ದೇಶದ ಎಲ್ಲಾ ಆಸ್ಪತ್ರೆಗಳನ್ನು ವೀಕ್ಷಣೆ ಮಾಡಲಿದ್ದಾರೆ, ಚಿನ್ನದ ರಸ್ತೆ ನಿರ್ಮಾಣವಾಗಲಿದೆ. ಟ್ರೈನ್ ಸೌಂಡ್ ಕಡಿಮೆ ಮಾಡಲಾಗಿದೆ ಎಂಬ ಹಸಿ ಸುಳ್ಳುಗಳನ್ನು ಹರಡಿಸಿದ್ದಾರೆ. ಸಾಲು ಸಾಲು ಸುಳ್ಳುಗಳಿಂದ ಜನಸಾಮಾನ್ಯರನ್ನು ಯಾಮಾರಿಸುತ್ತಿರುವ ಮತ್ತು ಕೋಮು ಭಾವನೆ ಕೆರಳಿಸುತ್ತಿರುವ ಈ ಸುಳ್ಳುಗಾರ ಜಿಲ್ಲೆಗೆ ಪ್ರವೇಶಿಸದಂತೆ ಪೊಲೀಸರು ತಡೆಯಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ಶಿವರಾಜ್ ಮರಳಿಗ, ಮದ್ದೂರು ಶ್ರೀನಿವಾಸ್, ತಿಮ್ಮೇಶ್, ಗುರುಲಿಂಗಯ್ಯ, ಸವಿತಾ, ರವಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT