ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸ್ಥಾನಕ್ಕಾಗಿ ಕೈಕಟ್ಟಿ ನಿಂತಿದ್ದ ಕುಮಾರಸ್ವಾಮಿ: ಸಚಿವ ಚಲುವರಾಯಸ್ವಾಮಿ

Published 16 ಮಾರ್ಚ್ 2024, 13:57 IST
Last Updated 16 ಮಾರ್ಚ್ 2024, 13:57 IST
ಅಕ್ಷರ ಗಾತ್ರ

ಮಂಡ್ಯ: ‘ಜನರು ಗೆಲ್ಲಿಸಿದ್ದ ಕಾರಣಕ್ಕಾಗಿ ಸಚಿವನಾಗಿ ಕೆಲಸ ಮಾಡಿದ್ದೇನೆ, ಈಗಲೂ ಸಚಿವನಾಗಿದ್ದೇನೆ. ಅಧಿಕಾರಕ್ಕಾಗಿ ನಾನು ಯಾರ ಮುಂದೆಯೂ ಕೈಕಟ್ಟಿ ನಿಂತಿಲ್ಲ. ಬಿಜೆಪಿ ಜೊತೆ ಸರ್ಕಾರ ಮಾಡುವುದಕ್ಕೂ ಮೊದಲು ಮುಖ್ಯಮಂತ್ರಿ ಸ್ಥಾನಕ್ಕಾಗಿ ಕುಮಾರಸ್ವಾಮಿ ಅವರೇ ನನ್ನ ಮುಂದೆ ಕೈಕಟ್ಟಿ ನಿಂತಿದ್ದರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿರುಗೇಟ ಉನೀಡಿದರು.

ಶ್ರೀನಿವಾಸಪುರ ಗೇಟ್‌ನಿಂದ ಜ್ಯೋತಿ ಇಂಟರ್‌ನ್ಯಾಷನಲ್‌ ಹೋಟೆಲ್‌ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ಜೆ.ಸಿ.ವೃತ್ತದಲ್ಲಿ ಹೈಟೆಕ್  ವೃತ್ತ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಶುಕ್ರವಾರ ನಡೆದ ಜೆಡಿಎಸ್‌ ಸಭೆಯಲ್ಲಿ ಎಚ್‌.ಡಿ.ಕುಮಾಸ್ವಾಮಿ ಸೇರಿದಂತೆ ಜೆಡಿಎಸ್‌ ಮುಖಂಡರು ಮಾಡಿದ್ದ ಎಲ್ಲಾ ಆರೋಪಗಳಿಗೂ ತಿರುಗೇಟು ನೀಡಿದರು.

‘ಹೊಟ್ಟೆಪಾಡಿಗಾಗಿ ಜೆಡಿಎಸ್‌ನವರು ಬಿಜೆಪಿ ಜೊತೆ ಹೋಗಿದ್ದಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ, ನಾನು ಹೇಳಿದ್ದ ಮಾತಿನ ಅರ್ಥವೇ ಬೇರೆಯಾಗಿತ್ತು. ಆದರೆ ತಪ್ಪಾಗಿ ಅರ್ಥೈಸಿಕೊಂಡು ಆರೋಪ ಮಾಡುತ್ತಿದ್ದಾರೆ. ಅವರ ಎಲ್ಲಾ ಆರೋಪಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ನಾವು ಕಳೆದ 8 ತಿಂಗಳಿಂದ ಜಿಲ್ಲೆಯ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮ ರೂಪಿಸಿದ್ದೇವೆ. ಆದರೆ ಜೆಡಿಎಸ್‌ ಮುಖಂಡರು ಆರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘39 ಶಾಸಕರ ಬಳಿ ಕುಮಾರಸ್ವಾಮಿ ಅವರು ಹೇಗೆ ದುಂಬಾಲು ಬಿದ್ದಿದ್ದರು ಎಂಬ ಬಗ್ಗೆ ನಮಗೆ ಗೊತ್ತಿದೆ.  ಜೆಡಿಎಸ್‌ನವರು ಭಾಷಣ ಮಾಡುವುದಲ್ಲಿ ಮುಂದಿದ್ದಾರೆ. ನಾವು ಅಭಿವೃದ್ಧಿಯಲ್ಲಿ ಮುಂದಿದ್ದೇವೆ. ಸಾವಿರ ಕೋಟಿ ಅನುದಾನ ತಂದಿದ್ದೀನಿ ಎಂದು ಬರಿ ಬಾಯಲ್ಲಿ ಹೇಳುವುದಿಲ್ಲ, ನಾವು ಕೆಲಸ ಮಾಡಿ ತೋರಿಸುತ್ತೇವೆ. ನಮ್ಮ ಕೆಲಸಗಳು ಮಾತನಾಡುತ್ತವೆ’ ಎಂದರು.

‘ಜೆಡಿಎಸ್‌ ನಾಯಕರಿಗೆ ಜಿಲ್ಲೆಯ ಅಭಿವೃದ್ಧಿ ಬೇಕಾಗಿಲ್ಲ. ಅವರಿಗೆ ಹೊಸ ಮೈಷುಗರ್‌ ಕಾರ್ಖಾನೆ ಬೇಡ, ಹೊಸ ಕೃಷಿ ವಿಶ್ವವಿದ್ಯಾಲಯ ಬೇಡ. ವೈದ್ಯಕೀಯ ಕಾಲೇಜನ್ನೂ ಸ್ಥಳಾಂತರ ಮಾಡಿ ಎಂದು ಬೇಕಾದರೂ ಹೇಳುತ್ತಾರೆ. ಜಿಲ್ಲೆ ಅಭಿವೃದ್ಧಿಯಾದರೆ ಇವರ ಹಿಡಿತಕ್ಕೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಅಭಿವೃದ್ಧಿಗೆ ವಿರೋಧಿಗಳಾಗಿದ್ದಾರೆ’ ಎಂದು ಆರೋಪಸಿದಿರು.

‘ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಾವು ಯಾರನ್ನೂ ಕೇಳಿ ತೀರ್ಮಾನ ಮಾಡಬೇಕಾಗಿಲ್ಲ, ಜನರ ಅಗತ್ಯಗಳಿಗೆ ತಕ್ಕಂತೆ ಅಭಿವೃದ್ಧಿ ಮಾಡುತ್ತಿದ್ದೇವೆ. ಕಾಂಗ್ರೆಸ್ ಒಕ್ಕಲಿಗರ ನಾಯಕತ್ವ ತುಳಿಯುತ್ತಿದೆ ಎಂಬ ಮಾತನ್ನು ಜೆಡಿಎಸ್‌ನವರು ಹೇಳುತ್ತಾರೆ. ಹಾಗಾದರೆ ಕಾಂಗ್ರೆಸ್‌ನಲ್ಲಿ ಒಕ್ಕಲಿಗರಿಲ್ಲವೇ, ನಾವು ಒಕ್ಕಲಿಗರಲ್ಲವಾ’ ಎಂದು ಪ್ರಶ್ನಿಸಿದರು.

‘ಬೆಂಗಳೂರು ಗ್ರಾಮಾಂತರ ಕ್ಷೇತ್ರ ಜೆಡಿಎಸ್‌ನವರ ಹಿಡಿತದಲ್ಲಿ ಇಲ್ಲ. ಇದೇ ಕಾರಣಕ್ಕೆ ಡಾ.ಸಿ.ಎನ್‌.ಮಂಜುನಾಥ್‌ ಅವರನ್ನು ಬಿಜೆಪಿ ಚಿನ್ಹೆಯಡಿ ಸ್ಪರ್ಧಿಸುವಂತೆ ಮಾಡಿದ್ದಾರೆ. ಜೆಡಿಎಸ್‌ನವರಿಗೆ ತಮ್ಮ ಪಕ್ಷದ ಮೇಲೆ ನಂಬಿಕೆ ಇಲ್ಲ. ಸೋಲಿನ ಭಯದಿಂದ ಬಿಜೆಪಿಯಿಂದ ನಿಲ್ಲಿಸಿದ್ದಾರೆ. ನನಗೆ ಮಂಜುನಾಥ್‌ ಅವರ ಬಗ್ಗೆ ಅಪಾರ ಗೌರವವಿದೆ’ ಎಂದರು.

‘ನಾವು ಯಾರ ಮನೆಯನ್ನೂ ಒಡೆದಿಲ್ಲ, ಯಾರು, ಯಾವಾಗ ಮನೆ ಒಡೆದಿದ್ದಾರೆ ಎಂಬುದು ಚೆನ್ನಾಗಿ ಗೊತ್ತಿದೆ. ನಾವು ಕಾಂಗ್ರೆಸ್‌ ಅಭ್ಯರ್ಥಿಯನ್ನು ಒಂದು ತಿಂಗಳ ಹಿಂದೆಯೇ ಆಯ್ಕೆ ಮಾಡಿ ಕ್ಷೇತ್ರದಾದ್ಯಂತ ಓಡಾಡುತ್ತಿದ್ದೇವೆ. ಆದರೆ ಜೆಡಿಎಸ್‌ನವರು ಇನ್ನೂ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯವಾಗಿಲ್ಲ’ ಎಂದರು.

‘ಜೆಡಿಎಸ್‌ ಮುಖಂಡರ ಹೊಟ್ಟೆ ನೋವಿಗೆ ಔಷಧಿ ಇಲ್ಲ, ಅದಕ್ಕೆ ವೈದ್ಯರೇ ಔಷಧಿ ಕೊಡಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕುತಂತ್ರ ಮಾಡಿ ಸೋಲಿಸಿದರು ಎಂದು ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಕಾರ್ಯಸೂಚಿ ಮಾಡುವುದು ಸಹಜ, ಅದನ್ನು ಕುತಂತ್ರ ಎಂದರೆ ನಾವೇನು ಮಾಡಬೇಕು? ನಾವು ಕಳೆದ ಚುನಾವಣೆಯಲ್ಲಿ ಮನೆಯಲ್ಲಿದ್ದೆವು, ಯಾರ ಪರವೂ ಪ್ರಚಾರ ಮಾಡಲಿಲ್ಲ’ ಎಂದರು.

‘ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯನ್ನು ಜನರು ಒಪ್ಪಿರಲಿಲ್ಲ, ಈ ಚುನಾವಣೆಯಲ್ಲೂ ಜನರು ಬಿಜೆಪಿ– ಜೆಡಿಎಸ್‌ ಮೈತ್ರಿಯನ್ನು ಒಪ್ಪಲು ಸಿದ್ಧರಿಲ್ಲ. ಎದುರಾಳಿಯನ್ನು ನೋಡಿ ನಾವು ಚುನಾವಣೆ ಮಾಡುವುದಿಲ್ಲ. ಯಾರೇ ಅಭ್ಯರ್ಥಿಯಾದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಬಿಜೆಪಿ-ಜೆಡಿಎಸ್ ಒಡೆದ ಮಡಿಕೆಯಾಗಿದ್ದು ಮೈತ್ರಿ ಧಿಕ್ಕರಿಸಿ ಜನ ನಮ್ಮನ್ನು ಬೆಂಬಲಿಸುತ್ತಾರೆ’ ಎಂದರು.

ಶಾಸಕ ಗಣಿಗ ರವಿಕುಮಾರ್‌, ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು), ನಗರಸಭೆ ಸದಸ್ಯರಾದ ನಹೀಂ, ರಾಮಲಿಂಗಯ್ಯ, ಶ್ರೀಧರ್ , ಮುಖಂಡರಾದ ಚಿದಂಬರ್, ರವಿ ಭೋಜೇಗೌಡ, ಗೀತಾ, ಪೂರ್ಣಿಮಾ ಇದ್ದರು.

ಕೃಷಿ ವಿವಿ; ಸಮಿತಿ ರಚನೆ

‘ವಿ.ಸಿ.ಫಾರಂಗೆ ಸಮಗ್ರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರೂಪ ಕೊಡುವ ಉದ್ದೇಶದಿಂದ ಬೆಂಗಳೂರು ಕೃಷಿ ವಿವಿಯ ವಿಶ್ರಾಂತ ಕುಲಪತಿ ರಾಜೇಂದ್ರ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಶೀಘ್ರ ಅವರು ವರದಿ ಸಲ್ಲಿಸಲಿದ್ದು ಅದರ ಆಧಾರದ ಮೇಲೆ ಕೃಷಿ ವಿವಿ ರೂಪಿಸಲಾಗುವುದು’ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. ‘ರಾಜೇಂದ್ರ ಪ್ರಸಾದ್‌ ಅವರು ಮಂಡ್ಯ ಜಿಲ್ಲೆಯವರೇ ಆಗಿದ್ದು ವಿ.ಸಿ.ಫಾರಂ ಬಗ್ಗೆ ಅವರಿಗೆ ಸಮಗ್ರ ಮಾಹಿತಿ ಇದೆ. ವಿವಿ ರಚನೆ ಸಂಬಂಧ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು ಅದರಂತೆ ಸಮಿತಿ ರಚನೆಯಾಗಿದೆ. ಹೊಸ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಸಮಿತಿ ವರದಿ ನೀಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT