ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮಕ್ಕೆ ರಸ್ತೆ, ಕೆರೆಗೆ ನೀರು ಶೀಘ್ರ: ಸಚಿವ ಎನ್.ಚಲುವರಾಯಸ್ವಾಮಿ

Published 10 ಡಿಸೆಂಬರ್ 2023, 13:40 IST
Last Updated 10 ಡಿಸೆಂಬರ್ 2023, 13:40 IST
ಅಕ್ಷರ ಗಾತ್ರ

ನಾಗಮಂಗಲ: ‘ಗ್ರಾಮಕ್ಕೆ ರಸ್ತೆ, ಕೆರೆಗೆ ನೀರು ಹರಿಸುವ ಮತ್ತು ಕಾಲುವೆ‌ ನಿರ್ಮಾಣ ಕೆಲಸವನ್ನು ಕೆಲವೇ ತಿಂಗಳಲ್ಲಿ ಮಾಡುತ್ತೇನೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲ್ಲೂಕಿನ ಹೊಣಕೆರೆ ಹೋಬಳಿಯ ಗೊಟಕನಹಳ್ಳಿಯಲ್ಲಿ ಭಾನುವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ‌ ಸಂಘದ ನೂತನ ಕಟ್ಟಡ, ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ, ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮದ ಜನರು ನನ್ನ ಮೇಲೆ ಪ್ರೀತಿ, ಅಭಿಮಾನದಿಂದ ಸಹಕಾರ ಮಾಡಿದ್ದೀರಿ. ನಿಮ್ಮ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ. ಈಗಾಗಲೇ ನನ್ನ ಕೈಲಾದಷ್ಟು ಕೆಲಸವನ್ನು ಮಾಡಿದ್ದೇನೆ’ ಎಂದರು.

‘ಅಭಿವೃದ್ಧಿ ವಿಚಾರದಲ್ಲಿ ಜನರು ಸ್ವಲ್ಪ ತಾಳ್ಮೆ ವಹಿಸಿ, ಖಂಡಿತವಾಗಿಯೂ ಕೆಲಸ ಮಾಡುತ್ತೇನೆ. ಅಲ್ಲದೇ ಗ್ರಾಮದ ಹಾಲು ಉತ್ಪಾದಕರ ಸಂಘವು ಕೆಲವೇ ವರ್ಷಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕಟ್ಟಡ ನಿರ್ಮಾಣ ಮಾಡಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ತಾಲ್ಲೂಕಿನಲ್ಲಿ ನಿಮ್ಮ ಸಂಘವು ಮಾದರಿಯಾಗಿದೆ. ಜೊತೆಗೆ ಹೈನುಗಾರಿಕೆಯು ಜನರನ್ನು ಆರ್ಥಿಕವಾಗಿ ಸದೃಢಗೊಳಿಸಿ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿಯಿರಿ’ ಎಂದರು.

ಮನ್ಮುಲ್ ಅಧ್ಯಕ್ಷ ಬೋರೇಗೌಡ ಮಾತನಾಡಿ, ‘ಸಂಘವು ಕಳೆದ ಸಾಲಿನಲ್ಲಿ ಲಾಭ ಮಾಡಿದ್ದು, ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುತ್ತಿರುವುದು ಸಂತಸ ತಂದಿದೆ. ಈ ಸಂಘವು ಕೆಲವೇ ವರ್ಷದ ಹಿಂದೆ ಪ್ರಾರಂಭವಾಗಿದ್ದು, ಕಟ್ಟಡವನ್ನು ನಿರ್ಮಾಣ ಮಾಡಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ’ ಎಂದು ಹೇಳಿದರು.

‘ಕಳೆದ ಸಾಲಿನಲ್ಲಿ ₹4.30 ಲಕ್ಷ ಲಾಭ ಪಡೆದುಕೊಂಡಿದೆ. ಸಂಘದ ಚಟುವಟಿಕೆಗಳಲ್ಲಿ ಎಲ್ಲರ ಸಹಕಾರ ಇರಲಿ’ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಗ್ರಾಮದ ಮುಖಂಡರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಲಕ್ಷ್ಮೀಕಾಂತ್, ಕೊಣನೂರು ಹನುಮಂತು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಸಿಡಿಪಿಒ ಕೃಷ್ಣಮೂರ್ತಿ, ಮನ್ಮುಲ್ ಅಧ್ಯಕ್ಷ ಬೋರೆಗೌಡ, ಲಕ್ಷ್ಮೀ ನಾರಾಯಣ್, ಜವರೇಗೌಡ, ಕೃಷ್ಣೇಗೌಡ, ಜಯರಾಮು, ಹುಚ್ಚೇಗೌಡ, ಗೋವಿಂದೇಗೌಡ, ನಾಗಣ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT