ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಯೇ ಈ ಕ್ಷೇತ್ರದ ನಿಯಮ!

ವೈಶಿಷ್ಟ್ಯದಿಂದ ಕೂಡಿದ ತರೀಕೆರೆ ವಿಧಾನಸಭಾ ಕ್ಷೇತ್ರ
Last Updated 6 ಏಪ್ರಿಲ್ 2018, 7:16 IST
ಅಕ್ಷರ ಗಾತ್ರ

ತರೀಕೆರೆ: ತರೀಕೆರೆ ವಿಧಾನಸಭಾ ಕ್ಷೇತ್ರ ಹತ್ತು ಹಲವು ವೈಶಿಷ್ಟ್ಯಗಳಿಂದಾಗಿ ರಾಜ್ಯದ ಗಮನ ಸೆಳೆದಿದ್ದು, ಈವರೆಗಿನ ಚುನಾವಣಾ ಇತಿಹಾಸ ಗಮನಿಸಿದರೆ ಬದಲಾವಣೆಯೇ ಕ್ಷೇತ್ರದ ನಿಯಮ ಎನ್ನುವಂತಿದೆ.

ಭೌಗೋಳಿಕವಾಗಿ ಅರ್ಧ ಬಯಲು ಮತ್ತು ಅರ್ಧ ಮಲೆನಾಡಾಗಿರುವ ಕ್ಷೇತ್ರದಲ್ಲಿ ಚಿನ್ನದ ಬೆಲೆ ತಂದು ಕೊಡುತ್ತಿರುವ ವಾಣಿಜ್ಯ ಬೆಳೆ ಅಡಿಕೆ ಕೂಡ ರಾಜಕಾರಣಕ್ಕೆ ಒಂದು ಹೊಸ ಆಯಾಮವನ್ನು ತಂದು ಕೊಟ್ಟಿದೆ ಎಂದರೆ ತಪ್ಪಿಲ್ಲ. ಬೇರೆ ಕ್ಷೇತ್ರದಿಂದ ವಲಸೆ ಬಂದ ರಾಜಕಾರಣಿಗಳನ್ನು ಇಲ್ಲಿನ ಜನ ಒಪ್ಪಿಕೊಂಡ ಉದಾಹರಣೆಯೇ ಇಲ್ಲ. ಆರಂಭದಿಂದ ಈವರೆಗೂ ಇಲ್ಲಿ ಆಯ್ಕೆಗೊಂಡವರು ಲಿಂಗಾಯತ ಮತ್ತು ಕುರುಬ ಸಮಾಜದ ಅಭ್ಯರ್ಥಿಗಳು. ಎಂಟು ಬಾರಿ ಲಿಂಗಾಯತ ಹಾಗೂ ನಾಲ್ಕು ಬಾರಿ ಕುರುಬ ಸಮಾಜದವರು ಶಾಸಕರಾಗಿದ್ದಾರೆ. 2004 ಮತ್ತು 2013ರಲ್ಲಿ ನಡೆದ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ಸ್ವಾತಂತ್ರ್ಯಾನಂತರ 1952ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಕ್ಷದಿಂದ ಟಿ.ನಾಗಪ್ಪ 8,093ಮತಗಳನ್ನು ಪಡೆದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಸಿ.ಬಸಪ್ಪ (8,059) ವಿರುದ್ಧ ಕೇವಲ 34ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಮತ ಎಣಿಕೆಯಲ್ಲಿ ಲೋಪ ಹಾಗೂ ಚುನಾವಣೆ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷಗಳಾಗಿವೆ ಎಂದು ಆರೋಪಿಸಿದ ಟಿ.ಸಿ.ಬಸಪ್ಪ ಪ್ರಕರಣ ಕುರಿತು ಮೊದಲ ಬಾರಿಗೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ದೇಶದಲ್ಲಿಯೇ ದಾಖಲಾದ ಮೊದಲ ಪ್ರಕರಣವಾಗಿ ಸಾಕಷ್ಟು ಕುತೂಹಲ ಸೃಷ್ಟಿಸಿತ್ತು. ಆರು ತಿಂಗಳವರೆಗೆ ಪ್ರಕರಣ ನ್ಯಾಯಾಲಯದಲ್ಲಿದ್ದು ಕೊನೆಗೆ ಟಿ.ನಾಗಪ್ಪರ ಆಯ್ಕೆಯನ್ನು ಅನೂರ್ಜಿತಗೊಳಿಸಿ ತೀರ್ಪು ನೀಡಿದ ನ್ಯಾಯಾಲಯ ಟಿ.ಸಿ.ಬಸಪ್ಪರ ಆಯ್ಕೆಯನ್ನು ಘೋಷಿಸಿತ್ತು.

ಟಿ.ಸಿ.ಬಸಪ್ಪ ಅಕಾಲಿಕ ನಿಧನ ಹೊಂದಿದ ಕಾರಣ ಮೊದಲ ಬಾರಿಗೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದು ಅವರ ಸಹೋದರ ಟಿ.ಸಿ.ಶಾಂತಪ್ಪ ಕ್ಷೇತ್ರದಿಂದ ಹೊರಗಿನವರಾದ ಗರ್ಜೆ ಮರುಳಪ್ಪರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು.

1957ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಟಿ.ಆರ್.ಪರಮೇಶ್ವರಯ್ಯ 18,328 ಮತಗಳನ್ನು ಪಡೆದು ಪಕ್ಷೇತರ ಅಭ್ಯರ್ಥಿಯಾಗಿದ್ದ ಸಿ.ಎಂ.ಚಂದ್ರಶೇಖರಪ್ಪ (14,936)ರನ್ನು ಸೋಲಿಸಿದ್ದರು. 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಆರ್.ಪರಮೇಶ್ವರಯ್ಯ 18,357 ಮತಗಳನ್ನು ಪಡೆದು ಪ್ರಜಾ ಸೋಷಿಯಲಿಸ್ಟ್ ಪಕ್ಷದ ಹಂಜಿ ಶಿವಣ್ಣ (17,990)ರನ್ನು ಸೋಲಿಸಿ ಎರಡನೇ ಬಾರಿಗೆ ಜಯ ದಾಖಲಿಸಿದರು.

1967ರ ಚುನಾವಣೆಯಲ್ಲಿ ಪ್ರಜಾ ಸೋಷಿ ಯಲಿಸ್ಟ್ ಪಕ್ಷದ ಅಭ್ಯರ್ಥಿ ಹಂಜಿ ಶಿವಣ್ಣ 22, 107 ಮತ ಗಳಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಕಾಣಬೇಕಿದ್ದ ಟಿ.ಆರ್.ಪರಮೇಶ್ವರಯ್ಯ (18,357)ರನ್ನು ಸೋಲಿಸಿದರು. ನಂತರ 1972ರಲ್ಲಿ ನಡೆದ ಚುನಾವಣೆಯಲ್ಲಿ ಹಂಜಿ ಶಿವಣ್ಣ 16,628 ಮತಗಳ ಪಡೆದು ಕಾಂಗ್ರೆಸ್ ಪಕ್ಷದ ಎಚ್.ಆರ್.ಬಸವರಾಜು ಅವರನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ಚುನಾಯಿತರಾದರು. ಇದೇ ಚುನಾವಣೆಯಲ್ಲಿ ಜಾನಪದ ಕೋಗಿಲೆ ಕೆ.ಆರ್.ಲಿಂಗಪ್ಪ ಸ್ಪರ್ಧಿಸಿ 8,681 ಮತಗಳನ್ನು ಗಳಿಸಿ ಸೋಲು ಅನುಭವಿಸಿ ಗಮನ ಸೆಳೆದಿದ್ದರು.

1978ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಎಚ್.ಎಂ. ಮಲ್ಲಿಕಾ ರ್ಜುನಪ್ಪ (30,106) ಸಂಸ್ಥಾ ಕಾಂಗ್ರೆಸ್ ಪಕ್ಷದ ಡಿ.ಎಲ್.ಮಲ್ಲಯ್ಯ (9,538)ರನ್ನು ಸೋಲಿಸಿ ಬಾರಿ ಅಂತರದಲ್ಲಿ ಜಯಗಳಿಸಿದರು.

1983ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಎಚ್ .ಆರ್.ಬಸವರಾಜು ಚುನಾವಣಾ ಕಣದಲ್ಲಿದ್ದು ನಿಧನರಾದ ಕಾರಣ ಅವರ ಸಹೋದರ ಎಚ್.ಆರ್.ರಾಜು ಸ್ಪರ್ಧಿಸಿ ಅನುಕಂಪದ ಅಲೆಯಲ್ಲಿ 38,516 ಮತಗಳಿಸಿ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಟಿ.ವಿ.ಶಿವಶಂಕರಪ್ಪ (21,809)ರನ್ನು ಸೋಲಿಸಿದರು. ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಸರ್ಕಾರದಲ್ಲಿ ಸಹಕಾರ ಖಾತೆ ರಾಜ್ಯ ಸಚಿವರಾಗಿ ಹಾಗೂ ಸಂಪುಟ ವಿಸ್ತರಣೆಯಾದಾಗ ಪರಿಸರ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿ ಕ್ಷೇತ್ರದ ಮೊದಲ ಸಚಿವನೆಂಬ ಹೆಗ್ಗಳಿಕೆಗೆ ಪಾತ್ರರಾದರು.

1985ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿ ಬಿ.ಆರ್.ನೀಲಕಂಠಪ್ಪ 40,137 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಎಸ್.ಎಂ.ನಾಗರಾಜು (18,496)ರನ್ನು ಸೋಲಿಸುವ ಮೂಲಕ ಜನತಾಪಕ್ಷ ಇಲ್ಲಿ ಜಯ ದಾಖಲಿಸಿತು.

1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಚ್.ಆರ್.ರಾಜು 36,769 ಮತ ಪಡೆದು ಜನತಾದಳದ ಅಭ್ಯರ್ಥಿ ಬಿ.ಆರ್.ನೀಲಕಂಠಪ್ಪ (18, 496)ರನ್ನು ಸೋಲಿಸುವ ಮೂಲಕ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಬಂದಿತು.

1994ರಲ್ಲಿನ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಎಸ್.ಎಂ.ನಾಗರಾಜು 33,769 ಮತಗಳಿಸುವ ಮೂಲಕ ಜನತಾದಳದ ಅಭ್ಯರ್ಥಿ ಬಿ.ಆರ್.ನೀಲ ಕಂಠಪ್ಪ (33,212)ರನ್ನು ಸೋಲಿಸುವ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದರು.

ಎರಡು ಚುನಾವಣೆಯಲ್ಲಿ ಸೋಲುಂಡ ಬಿ.ಆರ್.ನೀಲಕಂಠಪ್ಪ 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಿಂದ ಸ್ಪರ್ಧೆಗಿಳಿದು 47,825 ಮತ ಗಳನ್ನು ಪಡೆದು ಜೆ.ಡಿ.ಯು ಪಕ್ಷದಿಂದ ಸ್ಪರ್ಧೆ ನೀಡಿದ್ದ ಎಸ್.ಎಂ.ನಾಗರಾಜು (25,390)ರನ್ನು ಮಣಿಸಿ ಶಾಸಕ ರಾದರು.

2004ರ ಚುನಾವಣೆಯಲ್ಲಿ ಹಿಂದು ಳಿದ ವರ್ಗಗಳ ಓಲೈಸಲು ಮುಂದಾದ ಕಾಂಗ್ರೆಸ್ ಕುರುಬ ಸಮಾಜದ ಟಿ.ಎಚ್.ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಿತು. ಇದು ಮೂರು ದಶಕಗ ಳಿಂದ ಅಧಿಕಾರ ಹಿಡಿಯುವಲ್ಲಿ ವಿಫಲ ವಾಗಿದ್ದ ಹಿಂದುಳಿದ ವರ್ಗಗಳಲ್ಲಿ ಸಂಚಲನ ಹುಟ್ಟಿಸಿತು. ಅಹಿಂದ ವರ್ಗಗಳು ಒಟ್ಟಾಗಿದ್ದರ ಫಲವಾಗಿ ಟಿ.ಎಚ್.ಶಿವಶಂಕರಪ್ಪ 47,593 ಮತಗಳಿಸುವ ಮೂಲಕ ಬಿಜೆಪಿ
ಪಕ್ಷದ ಎಚ್.ಓಂಕಾರಪ್ಪ (27,919)ರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು.

2008ರಲ್ಲಿ ನಡೆದ ಚುನಾವಣೆಯಲ್ಲಿ ಬೀಸಿದ ಯಡಿಯೂರಪ್ಪ ಅಲೆಯ ಕಾರಣ ಬಿಜೆಪಿ ಅಭ್ಯರ್ಥಿ ಡಿ.ಎಸ್.ಸುರೇಶ್ 52,167 ದಾಖಲೆಯ ಮತಗಳನ್ನು ಪಡೆದು ಕಾಂಗ್ರೆಸ್‌ನ ಟಿ.ವಿ.ಶಿವಶಂಕರಪ್ಪರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಿದರು.

2013ರ ಚುನಾವಣೆಯಲ್ಲಿ ಕಾಂ ಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಗಿಟ್ಟಿಸಿ ಕುತೂಹಲ ಮೂಡಿಸಿದ ಜಿ.ಎಚ್.ಶ್ರೀನಿ ವಾಸ್ 35,817 ತಮ್ಮ ಎದುರಾಳಿ ಕೆಜೆಪಿಯಿಂದ ಎರಡನೇ ಬಾರಿಗೆ ಸ್ಪರ್ಧೆ ಮಾಡಿದ್ದ ಡಿ.ಎಸ್.ಸುರೇಶ್ (34,978) ರವರ ಆಸೆಗೆ ಬ್ರೇಕ್ ಹಾಕುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ದಾದಾಪೀರ್, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT