ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ: ಸೋಮನಳ್ಳಮ್ಮ ಬ್ರಹ್ಮ ರಥೋತ್ಸವ

ಭಕ್ತಿಭಾವದಿಂದ ಜರುಗಿದ ಜಾತ್ರೆ; ವಿಶೇಷ ಪೂಜೆ– ಅಲಂಕಾರ
Published 3 ಮಾರ್ಚ್ 2024, 12:47 IST
Last Updated 3 ಮಾರ್ಚ್ 2024, 12:47 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕಿನ ಇತಿಹಾಸ ಪ್ರಸಿದ್ಧವಾದ ಶಕ್ತಿ ದೇವತೆ ಸೋಮನಳ್ಳಮ್ಮ ದೇವಿಯ ಬ್ರಹ್ಮ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕ ಮತ್ತು ಧಾರ್ಮಿಕ ವಿಧಿವಿಧಾನದ ಜೊತೆಗೆ ಭಕ್ತಿಭಾವಗಳೊಂದಿಗೆ ಬ್ರಹ್ಮ ರಥೋತ್ಸವವು ವೈಭವದಿಂದ ಜರುಗಿತು.

ತಾಲ್ಲೂಕಿನ ಹೊಣಕೆರೆ ಹೋಬಳಿಯ ಸೋಮನಹಳ್ಳಿ ಗ್ರಾಮದಲ್ಲಿರುವ ಸೋಮನಳ್ಳಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂತಿಮ ದಿನವಾದ ಭಾನುವಾರದಂದು ಬ್ರಹ್ಮ ರಥೋತ್ಸವವು ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಅದ್ಧೂರಿಯಾಗಿ ಜರುಗಿತು.

ವಿವಿಧ ಬಗೆಯ ಹೂವು, ಬಣ್ಣಬಣ್ಣದ ಬಟ್ಟೆಗಳನ್ನು ಒಳಗೊಂಡಂತೆ ವಿವಿಧ ಬಗೆಯ ಅಲಂಕಾರಿ ವಸ್ತುಗಳನ್ನು ಬಳಸಿಕೊಂಡು ರಥವನ್ನು ಸಿಂಗಾರ ಮಾಡಲಾಗಿತ್ತು. ಜೊತೆಗೆ ಅಲಂಕಾರಗೊಂಡಿದ್ದ ರಥದಲ್ಲಿ ಸೋಮನಳ್ಳಮ್ಮ ದೇವಿಯ ಸರ್ವಾಲಂಕೃತ ಉತ್ಸವ ಮೂರ್ತಿಯನ್ನು ಇರಿಸುವ ಸಮಯದಲ್ಲಿ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ನಂತರ ರಥೋತ್ಸವಕ್ಕೆ ಮುನ್ನ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ಚಾಲನೆಯನ್ನು ನೀಡಲಾಯಿತು. ರಥೋತ್ಸವಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಸೋಮನಳ್ಳಮ್ಮ ದೇವಿಯ ಒಕ್ಕಲಿನವರು ವಿಶೇಷ ಪೂಜೆ ಸಲ್ಲಿಸಿ, ಹರಕೆಯನ್ನು ಈಡೇರಿಸಿದರು. ಸಾವಿರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತ ಸಮರ್ಪಿಸಿದರು. ಅಲ್ಲದೇ ಭಕ್ತರು ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿ ರಥಕ್ಕೆ ಬಾಳೆಹಣ್ಣು ಜವನ ಎಸೆಯುವ ಮೂಲಕ ಸಂಭ್ರಮಿಸಿದರು.

ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರವನ್ನು ಮಾಡಲಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ಬಂದು ದರ್ಶನ ಪಡೆದರು.

ದೇವಿಯ ಮೂಲ ಸ್ಥಾನವಾದ ಚೀಣ್ಯ ಸೇರಿದಂತೆ, ವಡ್ಡರಹಳ್ಳಿ, ಗುಡ್ಡೇನಹಳ್ಳಿ, ಸೋಮನಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಗಂಗನಹಳ್ಳಿ, ಕನಗೋನಹಳ್ಳಿ, ಕುಪ್ಪಹಳ್ಳಿ, ಕೆಮ್ಮನಹಳ್ಳಿ ಗ್ರಾಮಗಳ ಗ್ರಾಮಸ್ಥರು ರಥೋತ್ಸವದ ಮುಂದಾಳತ್ವ ವಹಿಸಿದ್ದರು.

ಸೋಮನಹಳ್ಳಿ ಕ್ಷೇತ್ರದ ದೇವಾಲಯಗಳಾದ ಕೋಟೆಮಾರಮ್ಮದೇವಿ, ಆಂಜನೇಯಸ್ವಾಮಿ, ದೊಡ್ಡಮ್ಮ ಮತ್ತು ಚಿಕ್ಕಮ್ಮದೇವಿ ದೇವಾಲಯಗಳಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಜಾತ್ರೆಗೆ ಬಂದಿದ್ದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೋಲಿಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯದ ಸುತ್ತಮುತ್ತ ಭಕ್ತರು ಜಾತ್ರೆಗೆ ಬಂದಿದ್ದವರಿಗೆ ಪಾನಕ, ಮಜ್ಜಿಗೆ ವಿತರಿಸುವ ವ್ಯವಸ್ಥೆ ಮಾಡಿದ್ದರು. ಅಲ್ಲಲ್ಲಿ ಅನ್ನದಾನದ ವ್ಯವಸ್ಥೆಯನ್ನು ಸಹ ಏರ್ಪಡಿಸಿದ್ದರು. ಜಾತ್ರೆಗೆ ಬಂದಿದ್ದ ಸೋಮನಳಮ್ಮ ದೇವಿಯ ಒಕ್ಕಲಿನವರು ಹರಿಸೇವೆ ಮಾಡಿ ಪೂಜೆ‌ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಾಲಯದಲ್ಲಿ ಸೋಮನಳ್ಳಮ್ಮ ದೇವಿ ದರ್ಶನವನ್ನು ಪಡೆದು ಪೂಜೆ ಸಲ್ಲಿಸಿದರು. ಶನಿವಾರ ಕೊಂಡೋತ್ಸವವು ಕೂಡು ವಿಜೃಂಭಣೆಯಿಂದ ಜರುಗಿತ್ತು.

ನಾಗಮಂಗಲ ತಾಲ್ಲೂಕಿನ ಸೋಮನಹಳ್ಳಮ್ಮ ದೇವಿಯ ಬ್ರಹ್ಮರಥೋತ್ಸವವು ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ್ದು ಭಕ್ತರು ತೇರನ್ನು ಎಳೆದು ಸಂಭ್ರಮಿಸಿದರು.
ನಾಗಮಂಗಲ ತಾಲ್ಲೂಕಿನ ಸೋಮನಹಳ್ಳಮ್ಮ ದೇವಿಯ ಬ್ರಹ್ಮರಥೋತ್ಸವವು ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ್ದು ಭಕ್ತರು ತೇರನ್ನು ಎಳೆದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT