ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ: ಜಿ.ಟಿ.ದೇವೇಗೌಡ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಕಚೇರಿಗೆ ಚಾಲನೆ; ಶಾಸಕ ಜಿ.ಟಿ.ದೇವೇಗೌಡ ಅಭಿಮತ
Published 25 ಮೇ 2024, 15:37 IST
Last Updated 25 ಮೇ 2024, 15:37 IST
ಅಕ್ಷರ ಗಾತ್ರ

ಮಂಡ್ಯ: ‘ಕಾಂಗ್ರೆಸ್‌ ದುರಾಡಳಿತದಿಂದಾಗಿ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಗುಣಮಟ್ಟ ಕುಸಿಯುತ್ತಿದೆ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳು ಬಸ್‌ನಲ್ಲಿ ಪ್ರಯಾಣ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದು.

ಇಲ್ಲಿನ ವಿದ್ಯಾನಗರದಲ್ಲಿ ತೆರೆದಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಕಚೇರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಭವಿಷ್ಯ ಬದಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ ದುರಾಡಳಿತದಿಂದ ಎಲ್ಲಾ ಕ್ಷೇತ್ರಗಳು ಹಿಂದುಳಿಯುತ್ತಿವೆ. ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಮಾಡಿದ್ದು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದೆ. ವಿದ್ಯಾರ್ಥಿಗಳು ಬಸ್‌ಗಳಲ್ಲಿ ಪ್ರಯಾಣ ಮಾಡಲಾಗದ ಸ್ಥಿತಿ ಇದೆ’ ಎಂದರು.

‘ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಒತ್ತು ನೀಡಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದರು. ಅದರಂತೆ ಬಿ.ಎಸ್‌.ಯಡಿಯೂರಪ್ಪ ಅವರು ಕೂಡ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ನಾನು ಶಿಕ್ಷಣ ಸಚಿವನಾಗಿದ್ದಾಗ ಶಾಲೆಗಳಲ್ಲಿ ಗ್ರಂಥಾಲಯ, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಿದ್ದೆವು. ನನ್ನ ಅವಧಿಯಲ್ಲಿ ಶಿಕ್ಷಕರನ್ನು ವರ್ಗಾವಣೆ ಮಾಡಲು ಮತ್ತು ಅಮಾನತು ಮಾಡಲು ಬಿಡಲಿಲ್ಲ’ ಎಂದರು.

‘ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರು ನಮ್ಮ ಅಭ್ಯರ್ಥಿ ಕೆ.ವಿವೇಕಾನಂದ ಅವರ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಶಿಕ್ಷಕರ ಅಭಿವೃದ್ಧಿಗೆ ವಿವೇಕಾನಂದ ಅವರು ಒಂದು ಗುರಿಯನ್ನಿಟ್ಟುಕೊಂಡಿದ್ದಾರೆ. ಹೀಗಾಗಿ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆ ಇದೆ. ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರು ನಮ್ಮ ಅಭ್ಯರ್ಥಿಯ ಜೊತೆಗಿದ್ದು ವಿವೇಕಾನಂದ ಅವರ ಗೆಲುವು ನಿಶ್ಚಿತ’ ಎಂದರು.

‘ನರೇಂದ್ರ ಮೋದಿ ಅವರು ಮತ್ತು ಎಚ್‌.ಡಿ.ದೇವೇಗೌಡ ಅವರು ಒಟ್ಟಿಗೆ ಕುಳಿತು ವೇದಿಕೆ ಹಂಚಿಕೊಂಡಾಗಲೇ ಕಾಂಗ್ರೆಸ್‌ನವರಿಗೆ ಹೊಟ್ಟೆಕಿಚ್ಚು ಹುಟ್ಟಿಕೊಂಡಿತ್ತು. ಪೆನ್‌ಡ್ರೈವ್‌ ಪ್ರಕರಣದಲ್ಲಿ ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ, ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಕೆಲಸ ಇನ್ನಾದರೂ ನಿಲ್ಲಬೇಕು. ಕಾಂಗ್ರೆಸ್‌ ಮುಖಂಡರು ಅಮಾಯಕರ ಮಾನ ಹರಾಜು ಹಾಕುತ್ತಿದ್ದಾರೆ’ ಎಂದರು.

ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಮಾತನಾಡಿ ‘ಕಳೆದ 20 ವರ್ಷಗಳಿಂದ ಸತತವಾಗಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಎಚ್.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿದ್ದೇನೆ. ಮೈತ್ರಿ ಮಾಡಿಕೊಂಡ ನಂತರ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿರುವ ನಾನು, ಶಿಕ್ಷಕರ ಕ್ಷೇತ್ರಕ್ಕೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನನಗೆ ಶಿಕ್ಷಕರು ಮೊದಲ ಪ್ರಾಶಸ್ತ್ಯ ಮತ ನೀಡುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಮುಖಂಡರಾದ ಬಿ.ಆರ್.ರಾಮಚಂದ್ರು, ಶಿವಮೂರ್ತಿ ಕೀಲಾರ, ಪೀಹಳ್ಳಿ ರಮೇಶ್‌, ನಾಗರಾಜು, ನಾಗೇಂದ್ರ, ರಾಜು ಇದ್ದರು.

‘ಕನ್ನಡಿಗರ ಮಾನ ಕಳೆಯದಿರಿ’

‘ಪ್ರಜ್ವಲ್‌ ರೇವಣ್ಣ ಪ್ರಕರಣದ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ತನಿಖೆ ನಡೆಯುತ್ತಿದ್ದು ವರದಿ ಇನ್ನೂ ಬಂದಿಲ್ಲ. ವರದಿ ಬರುವುದಕ್ಕೂ ಮೊದಲೇ ಮಾತನಾಡುವುದು ಒಳ್ಳೆಯದಲ್ಲ. ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಮನೆಗೆ ಕಲ್ಲೆಸೆಯುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು. ‘ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ದೇವೇಗೌಡರು ಮತ್ತು ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನೇ ಪ್ರತಿ ಬಾರಿಯೂ ಮಾತನಾಡಬೇಕೆ? ಕನ್ನಡಿಗರ ಮಾನ ಮರ್ಯಾದೆಯನ್ನು ಹರಾಜು ಹಾಕಬೇಡಿ. ಪ್ರತಿ ಬಾರಿ ದೇವೇಗೌಡರ ಬಗ್ಗೆ ಮಾತನಾಡಿ ಅವರನ್ನು ಎಳೆದು ತರುವುದು ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT