ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಪರೀಕ್ಷಾರ್ಥ ಸ್ಫೋಟ; ತಜ್ಞರ ಜೊತೆ ಚರ್ಚಿಸಿ ತೀರ್ಮಾನ - ಚಲುವರಾಯಸ್ವಾಮಿ

ರೈತ ಮುಖಂಡರ ಜೊತೆ ಸಭೆ; ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅಭಿಮತ
Published 7 ಮಾರ್ಚ್ 2024, 15:19 IST
Last Updated 7 ಮಾರ್ಚ್ 2024, 15:19 IST
ಅಕ್ಷರ ಗಾತ್ರ

ಮಂಡ್ಯ: ‘ಕೆಆರ್‌ಎಸ್‌ ಸುತ್ತಮುತ್ತ ಕಲ್ಲು ಗಣಿಗಾರಿಕೆ ನಡೆಯಬೇಕು ಎಂಬ ಉದ್ದೇದಿಂದ ಪರೀಕ್ಷಾರ್ಥ ಸ್ಫೋಟ ನಡೆಸುತ್ತಿಲ್ಲ. ಜಿಲ್ಲಾಡಳಿತ ಹೈಕೋರ್ಟ್‌ ಆದೇಶ ಪಾಲನೆ ಮಾಡುತ್ತಿದೆ ಎಂಬುದನ್ನು ರೈತ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ಆದರೂ ಕಾನೂನು ತಜ್ಞರು, ಜಲಾಶಯ ಸುರಕ್ಷಾ ಸಮಿತಿ ಸದಸ್ಯರ ಅಭಿಪ್ರಾಯದಂತೆ ಮುಂದೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಬೇಬಿಬೆಟ್ಟದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸುವ ಸಂಬಂಧ ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಕೆಆರ್‌ಎಸ್‌ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಹೈಕೋರ್ಟ್‌ ಆದೇಶ ನೀಡಿದೆ. ಪರೀಕ್ಷಾರ್ಥ ಸ್ಫೋಟ ನಡೆಸಿ ಅದರಿಂದ ಕೆಆರ್‌ಎಸ್‌ ಜಲಾಶಯದ ಮೇಲೆ ಉಂಟಾಗುವ ಪರಿಣಾಮಗಳ ಅಧ್ಯಯನಕ್ಕೆ ಸೂಚನೆ ನೀಡಿದೆ. ಜಿಲ್ಲಾಡಳಿತ ಕೋರ್ಟ್‌ ಆದೇಶ ಪಾಲನೆ ಮಾಡುತ್ತಿದ್ದು ಇದರದಲ್ಲಿ ಯಾವುದೇ ಅನುಮಾನ, ಆತಂಕ ಬೇಡ’ ಎಂದರು.

ಜಿಲ್ಲಾಧಿಕಾರಿ ಕುಮಾರ ಮಾತನಾಡಿ ‘2021ರಲ್ಲಿ ಅಂದಿನ ಜಿಲ್ಲಾಧಿಕಾರಿ ಕೆಆರ್‌ಎಸ್ ಜಲಾಶಯದ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ 17 ಮಂದಿ ಕ್ರಷರ್ ಮಾಲೀಕರು ಹೈಕೋರ್ಟ್‌ ಮೋರೆ ಹೋಗಿದ್ದರು. 2022ರಲ್ಲಿ ನ್ಯಾಯಾಲಯ ಜಲಾಶಯ ಸುರಕ್ಷತಾ ಸಮಿತಿಯ ವರದಿ ಆಧರಿಸಿ ಪರೀಕ್ಷಾರ್ಥ ಸ್ಫೋಟ ನಡೆಸುವಂತೆ ಸೂಚಿಸಿದೆ’ ಎಂದರು. ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿ ಓದಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತ ಮುಖಂಡ ಪ್ರಸನ್ನ ಗೌಡ ‘ಕೆಆರ್‌ಎಸ್‌ ಜಲಾಶಯ ನಮ್ಮೆಲ್ಲರ ಬದುಕಿನ ಪ್ರಶ್ನೆಯಾಗಿದೆ. ಕೋರ್ಟ್‌ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಪರೀಕ್ಷಾ ಸ್ಫೋಟ ನಡೆಸಲು ತರಾತುರಿ ತೋರುಸುತ್ತಿರುವುದು ಸರಿಯಲ್ಲ. ಜಲಾಶಯದ ಸುರಕ್ಷತೆಗೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು’ ಎಂದರು.

‘ವಿಜ್ಞಾನಿಗಳಿಂದ ತಾಂತ್ರಿಕ ವರದಿ ತರಿಸಿಕೊಂಡು ಕಾನೂನು ರೂಪಿಸಿದರೆ ಮುಂದೆ ಇಂತಹ ಸಮಸ್ಯೆ ಬರುವುದಿಲ್ಲ. ಮುಂದೆ ಯಾರೂ ನ್ಯಾಯಾಲಯಕ್ಕೆ ಹೋಗುವ ಪ್ರಮೇಯವೇ ಇರುವುದಿಲ್ಲ. ಆದ್ದರಿಂದ ಕೂಡಲೇ ಸರ್ಕಾರ ಜಲಾಶಯ ಸುರಕ್ಷತಾ ಕಾಯ್ದೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ರೈತರ ಹಿತದೃಷ್ಟಿ ಕಾಪಾಡಬೇಕು. ಪರೀಕ್ಷಾರ್ಥ ಸ್ಫೋಟಕ್ಕೆ ಅವಕಾಶ ನೀಡದೇ ಕಾನೂನು ಹೋರಾಟ ನಡೆಸಬೇಕು’ ಎಂದು ಒತ್ತಾಯಿಸಿದರು.

ಮೈಸೂರು ಜಿಲ್ಲಾ ರೈತ ಮುಖಂಡ ಬಸವರಾಜು ಮಾತನಾಡಿ ‘ಸರ್ಕಾರದ ಪರ ವಕೀಲರು ಬರೆದಿರುವ ಪತ್ರದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸುವಂತೆ ಎಲ್ಲಿಯೂ ಸೂಚಿಸಿಲ್ಲ. ಪರೀಕ್ಷೆಗಾಗಿ ಸ್ಫೋಟ ನಡೆಸುವುದರಿಂದಲೂ ಜಲಾಶಯಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲಾಡಳಿತ ಪರೀಕ್ಷಾ ಸ್ಫೋಟ ಪ್ರಯತ್ನವನ್ನು ಕೈಬಿಡಬೇಕು’ ಎಂದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ ‘ಸರ್ಕಾರಿ ವಕೀಲರ ಜೊತೆ ಜನಪ್ರತಿನಿಧಿಗಳು, ರೈತ ಮುಖಂಡರ ಸಭೆ ನಡೆಯಬೇಕು. ಸಭೆಯಲ್ಲಿ ಪರೀಕ್ಷಾರ್ಥ ಸ್ಫೋಟದ ನಡೆಸುವ ಅಗತ್ಯ ಏನಿದೆ ಎಂಬುದನ್ನು ಚರ್ಚಿಸಬೇಕು. ಆಗ ಸರ್ಕಾರಕ್ಕೆ ಸಲಹೆಗಳು ದೊರೆಯಬಹುದು. ಏಕಾಏಕಿ ಪರೀಕ್ಷಾರ್ಥ ಸ್ಫೋಟ ನಡೆಸಲು ಮುಂದಾದರೆ ಅದನ್ನು ಒಪ್ಪಲು ಸಾಧ್ಯವಿಲ್ಲ’ ಎಂದರು.

ಸಭೆಯಲ್ಲಿ ಸಂಸದೆ ಸುಮಲತಾ‌, ಜಿ.ಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಮೈಷುಗರ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಕಾವೇರಿ ನೀರಾವರಿ ನಿಗಮದ ಅಧಿಕ್ಷಕ ಎಂಜಿನಿಯರ್‌ ರಘುರಾಮ್‌ ಭಾಗವಹಿಸಿದ್ದರು.

ಸಚಿವರ ಮಾತಿಗೆ ಒಪ್ಪದ ರೈತ ಮುಖಂಡರು ಹೈಕೋರ್ಟ್‌ ಆದೇಶ ಪಾಲಗೆ ಅನಿವಾರ್ಯ ಡಿಸಿ ಜಲಾಶಯ ಸುರಕ್ಷತಾ ಸಮಿತಿ ಸಲಹೆ ಪಡೆಯಲು ಸೂಚನೆ

ನಾನು ಗಣಿಗಾರಿಕೆ ಮಾಡಿಲ್ಲ; ಸಚಿವ ‘ಪರೀಕ್ಷಾರ್ಥ ಸ್ಫೋಟ ನಡೆಸಲು ನಿಮಗೆ ಏಕೆ ಅಷ್ಟೊಂದು ಆಸಕ್ತಿ? ನೀವೂ ಗಣಿಗಾರಿಕೆ ಮಾಡಿಕೊಂಡು ಬಂದವರೇ’ ಎಂದು ರೈತ ಮುಖಂಡರು ಆರೋಪಿಸಿದಾಗ ಸಚಿವ ಚಲುವರಾಯಸ್ವಾಮಿ ಕೆಂಡಾಮಂಡಲರಾದರು. ‘ನಾನು ಎಂದಿಗೂ ಗಣಿಗಾರಿಕೆ ವ್ಯವಹಾರ ಮಾಡಿಲ್ಲ. ಸಭೆಯಲ್ಲಿ ಸರಿಯಾಗಿ ಮಾತನಾಡಿರಿ ನನಗೆ ಲೈಸೆನ್ಸ್‌ ಕೊಟ್ಟಿದ್ದರೆ ಅದನ್ನು ತೋರಿಸಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT