ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳವಳ್ಳಿ: ಟ್ರಾಫಿಕ್ ಸಿಗ್ನಲ್ ಸ್ಥಗಿತ, ತೊಂದರೆ

Published 11 ಜೂನ್ 2024, 8:01 IST
Last Updated 11 ಜೂನ್ 2024, 8:01 IST
ಅಕ್ಷರ ಗಾತ್ರ

ಮಳವಳ್ಳಿ: ಪಟ್ಟಣದ ಹೃದಯ ಭಾಗವಾದ ಅನಂತ್ ರಾಂ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ದೀಪಗಳು ಹಲವು ತಿಂಗಳಿಂದಲೂ ಕಾರ್ಯನಿರ್ವಹಿಸುತ್ತಿಲ್ಲ. ಇತ್ತ ಪೊಲೀಸರು ಗಮನ ಹರಿಸದಿರುವುದು ವಾಹನ ಸವಾರರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ವೃತ್ತವು ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ. ವಿಶ್ವವಿಖ್ಯಾತ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳು, ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ, ಬಿಳಿಗಿರಿರಂಗನಬೆಟ್ಟ ಸೇರಿದಂತೆ ಹಲವೆಡೆ ತೆರಳುವ ಬಹುತೇಕ ಪ್ರವಾಸಿಗಳು ಈ ವೃತ್ತದ ಮೂಲಕವೇ ಸಂಚರಿಸುತ್ತಾರೆ. ವಾರಾಂತ್ಯದಲ್ಲಂತೂ ಜನರು ಹಾಗೂ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಆದರೆ, ಸುಗಮ ಸಂಚಾರಕ್ಕೆ ಕ್ರಮವಾಗುತ್ತಿಲ್ಲ. ಅಗತ್ಯವಾದ ಟ್ರಾಫಿಕ್ ಸಿಗ್ನಲ್ ದೀಪಗಳ ದುರಸ್ತಿ ಮಾಡದೇ ಇರುವುದರಿಂದ, ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ.

ವೃತ್ತಕ್ಕೆ ಹೊಂದಿಕೊಂಡಂತೆ ಬಾಲಕಿಯರ ಸರ್ಕಾರಿ ಶಾಲಾ-ಕಾಲೇಜು, ಸಾರ್ವಜನಿಕ ಆಸ್ಪತ್ರೆ, ಬಿಎಸ್ಎನ್ಎಲ್ ಕಚೇರಿಗಳ ಜತೆಗೆ ಪ್ರಮುಖ ವಾಣಿಜ್ಯ ಕೇಂದ್ರವಾದ ಪೇಟೆ ಬೀದಿ ಇದೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ವೃತ್ತದಲ್ಲಿ ವಾಹನ ಸವಾರರಲ್ಲಿ ಒಂದಿಷ್ಟು ಶಿಸ್ತು ಹಾಗೂ ಅತಿ ವೇಗವಾಗಿ ಚಲಾಯಿಸುವುದನ್ನು ನಿಯಂತ್ರಣಕ್ಕೆ ತರುತ್ತಿದ್ದ ದೀಪಗಳು ಇದ್ದರೂ ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

‘ಕೆಶಿಪ್‌ (ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ)ನಿಂದ ವೃತ್ತದ ಬಳಿ ಕೈಗೊಂಡಿರುವ ಪೈಪ್ ಬದಲಾವಣೆ ಕಾಮಗಾರಿ ವೇಳೆ ಸಿಗ್ನಲ್ ಕಂಬಗಳಿಗೆ ಸಂಬಂಧಿಸಿದ ಕೆಲ ಕೇಬಲ್‌ಗಳನ್ನು ಕತ್ತರಿಸಿದ್ದರಿಂದ ತೊಂದರೆ ಆಗಿದೆ’ ಎನ್ನಲಾಗಿದೆ.

ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು ಅವಶ್ಯ

ಪಟ್ಟಣದಲ್ಲಿ ಜನದಟ್ಟಣೆಯಲ್ಲಿ ಉಂಟಾಗುವ ಅಪರಾಧ ಪ್ರಕರಣಗಳನ್ನು ಸುಲಭವಾಗಿ ಗುರುತಿಸಲು ಪ್ರಮುಖ ವೃತ್ತಗಳಿಗೆ ಸಿಸಿಟಿವಿ ಕ್ಯಾಮೆರಾ ಅಗತ್ಯವಿದೆ. ಪ್ರಮುಖ ಪ್ರದೇಶಗಳಲ್ಲಿನ ಸೆರೆ ಹಿಡಿಯುವ ದೃಶ್ಯಗಳನ್ನು ಪೊಲೀಸ್ ಠಾಣೆಯಲ್ಲಿ ವೀಕ್ಷಿಸಲು ಸಾಧ್ಯವಾಗುವಂತೆ ಅನುಕೂಲ ಕಲ್ಪಿಸಿದರೆ ಗ್ರಾಮೀಣ ಜನರು, ವರ್ತಕರು ಹಾಗೂ ವಿದ್ಯಾರ್ಥಿಗಳಿಗೆ ಆಗುವ ಕಿರಿಕಿರಿ ತಪ್ಪಿಸುವ ಜತೆಗೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

‘ಮೂರು ವರ್ಷಗಳಿಂದಲೂ ಈ ಬಗ್ಗೆ ಚರ್ಚೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಣ ನೀಡಲು ಸಿದ್ಧರಿದ್ದೇವೆ. ತ್ವರಿತವಾಗಿ ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಲಿ’ ಎನ್ನುವುದು ವರ್ತಕರ ಸಂಘದ ಪದಾಧಿಕಾರಿಗಳ ಒತ್ತಾಯವಾಗಿದೆ.

‘ಜನ ದಟ್ಟಣೆ ಇರುವ ಪ್ರದೇಶ ಗುರುತಿಸಿ ಅಗತ್ಯವಿರುವಲ್ಲಿ ಹಂತ ಹಂತವಾಗಿ ಪುರಸಭೆಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಇರುವ ಅನುದಾನ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ವರ್ತಕರು ಮತ್ತು ಪೊಲೀಸರೊಡನೆ ಚರ್ಚಿಸಿ ಶೀಘ್ರ ಕ್ರಮ ವಹಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನಾ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ ಎಂ. ರವಿಕುಮಾರ್, ‘ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸಂಬಂಧ ಅಂಗಡಿಗಳ ಮಾಲೀಕರು ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ 7ರಿಂದ 8 ವೃತ್ತಗಳನ್ನು ಗುರುತಿಸಲಾಗಿದೆ. ಕ್ಯಾಮೆರಾ ಅಳವಡಿಸಲು ಸಹಕರಿಸಿದರೆ ಪೊಲೀಸ್ ಇಲಾಖೆಗೆ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಅನುಕೂಲವಾಗಲಿದೆ’ ಎಂದರು.

ಸಿಗ್ನಲ್‌ ದೀಪಗಳು ಕಾರ್ಯನಿರ್ವಹಿಸದ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು.
–ಎಂ. ರವಿಕುಮಾರ್, ಸಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT