ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಸದಿದ್ದರೆ ‘ಜೈಲ್‌ಭರೋ’

Last Updated 14 ಅಕ್ಟೋಬರ್ 2017, 8:33 IST
ಅಕ್ಷರ ಗಾತ್ರ

ಮಂಡ್ಯ: ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಕೆ.ಆರ್‌.ಎಸ್‌. ಹಾಗೂ ಹೇಮಾವತಿ ಅಣೆಕಟ್ಟೆಯಿಂದ ಬೇಸಿಗೆ ಬೆಳೆಗೆ ನೀರು ಹರಿಸುವುದು ಸೇರಿದಂತೆ ಎಂಬ ವಿವಿಧ ಬೇಡಿಕೆ ಈಡೇರಿಸದಿದ್ದರೆ ಅ.17 ರಂದು ನಗರದಲ್ಲಿ ‘ಜೈಲ್‌ಭರೋ’ ಚಳವಳಿ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೋಣಸಾಲೆ ನರಸರಾಜು ಹೇಳಿದರು.

ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಶುಕ್ರವಾರಕ್ಕೆ ನಾಲ್ಕನೇ ದಿನವೂ ಮುಂದುವರೆದ ರಾಜ್ಯ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ 14 ದಿನಗಳೊಳಗೆ ಹಣ ನೀಡಬೇಕು. ಆದರೆ ಮೂರು ತಿಂಗಳು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇದು ಕಾನೂನು ವಿರೋಧಯಾಗಿದೆ. ಕಬ್ಬಿನ ದರ ಟನ್‌ ಗೆ ₹ 3,500ಕ್ಕೆ ನಿಗದಿ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದರೂ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಪರಿಸರ ಉಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮಳೆ ಅಭಾವ ಹಾಗೂ ಬರ ಬರುವುದಕ್ಕೆ ಕಲ್ಲು ಗಣಿಗಾರಿಕೆಯೇ ಮೂಲ ಕಾರಣ ಆಗಿದೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಿ ರೈತರಿಗೆ ನೆರವಾಗಬೇಕು. ಕೆ.ಆರ್‌.ಎಸ್‌. ಹಾಗೂ ಹೇಮಾವತಿ ವ್ಯಾಪ್ತಿಯ ಎಲ್ಲಾ ನಾಲೆಗಳಿಗೆ ಬೇಸಿಗೆ ಬೆಳೆ ಬೆಳೆಯಲು ಕ್ರಮ ತೆಗೆದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆಯಲ್ಲಿ ರೈತರ ಸಭೆ ನಡೆಸಿ ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ‘ಜೈಲ್‌ಭರೋ’ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬರ ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ. ಪರಿಹಾರದ ಹಣ ಫಲಾನುಭವಿಗಳ ಕೈ ಸೇರುತ್ತಿಲ್ಲ ಇದರಿಂದ ರೈತರು ಕಂಗಾಲಾಗಿದ್ದಾರೆ. ತಕ್ಷಣ ಬರ ಪರಿಹಾರ ಸಂಪೂರ್ಣವಾಗಿ ರೈತರಿಗೆ ತಲುಪುವಂತೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಯರಗನಹಳ್ಳಿ ರಾಮಕೃಷ್ಣಯ್ಯ ಮಾತನಾಡಿ ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಒಂದು ತಿಂಗಳ ಮಟ್ಟಿಗೆ ಕಲ್ಲು ಗಣಿಗಾರಿಕೆ ನಿಷೇಧಿಸಿ ತಹಶೀಲ್ದಾರ್‌ ಆದೇಶ ನೀಡಿದ್ದಾರೆ. ಆದರೆ ನಿರಂತರವಾರಗಿ ಕಲ್ಲು ಗಣಿಗಾರಿಕೆ ನಿಲ್ಲಬೇಕು. ದೊಡ್ಡ ಮಟ್ಟದ ಕಲ್ಲು ಗಣಿ ಲೂಟಿ ಕೋರರಿಗೆ ಕಡಿವಾಣ ಹಾಕಬೇಕು. ಇದಕ್ಕೆ ಬೆಂಬಲವಾಗಿರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ಮೂಲಕ ರೈತರು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಪ್ರಸ್ತುತ ಹಿಂಗಾರು ಬೆಳೆ ಬೆಳೆಯಲು ಜಿಲ್ಲೆಯ ಎಲ್ಲ‌ ನಾಲೆಗಳಿಗೆ ನೀರು ಹರಿಸಬೇಕು. ಕೇಂದ್ರ ಸರ್ಕಾರವು ರೈತರ ಸಾಲ ಮನ್ನಾ ಮಾಡಬೇಕು. ರಾಜ್ಯ ಸರ್ಕಾರವು ಹೊಸ ಸಾಲ ನೀಡುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.

ನಿರಂತರವಾಗಿ ನಾಲ್ಕನೇ ದಿನವೂ ಮುಂದುವರಿದ ಪ್ರತಿಭಟನೆಗೆ ರೈತ ಸಂಘದ ಮದ್ದೂರು ತಾಲ್ಲೂಕು ಘಟಕದ ಕಾರ್ಯಕರ್ತರು ಬೆಂಬಲ ಸೂಚಿಸಿದರು. ಗಣಿಗಾರಿಕೆ ನಿಲ್ಲಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ಮನವಿ: ಅಕ್ರಮ ಗಣಿಗಾರಿಕೆ ಸಂಪೂರ್ಣವಾಗಿ ನಿಲ್ಲಬೇಕು. ಜಿಲ್ಲೆಯ ಎಲ್ಲಾ ನಾಲೆಗಳಿಗೆ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರೈತರ ಸಭೆ ಕರೆಯಬೇಕು ಎಂದು ವಿವಿಧ ಬೇಡಿಕೆಯನ್ನಿಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಮುಖಂಡರು ಮನವಿ ಸಲ್ಲಿಸಿದರು. ಮುಖಂಡರಾದ ಲಿಂಗಪ್ಪಾಜಿ, ಕನ್ನಲಿ ನವೀನ್‌, ಚಂದ್ರಮ್ಮ, ಸಿದ್ದೇಗೌಡ, ಶಿವಲಿಂಗ, ಸೀತಾರಾಂ, ಜಿ.ಅಶೋಕ್‌, ಲತಾ ಶಂಕರ್, ರವಿಕುಮಾರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT