ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಗಂದೂರು: ರಸ್ತೆ, ನೀರಿನದ್ದೇ ಸಮಸ್ಯೆ

ಮೂರು ದಿನಗಳಿಗೊಮ್ಮೆ ನೀರು ಸರಬರಾಜು
Last Updated 16 ಮಾರ್ಚ್ 2016, 9:42 IST
ಅಕ್ಷರ ಗಾತ್ರ

ಮಂಡ್ಯ: ಕುಡಿಯುವ ನೀರಿಗೆ ತೊಂದರೆ, ಬಾಕಿ ಉಳಿದ ಅನುದಾನ, ಅಡ್ಡಾ–ದಿಡ್ಡಿಯಾದ ರಸ್ತೆಗಳು, ಬತ್ತಿದ ಕೆರೆ, ಇದ್ದೂ ಇಲ್ಲದಂತಿರುವ ಕಂಪ್ಯೂಟರ್‌ಗಳು, ದಿನಕ್ಕೆ ಒಂದೇ ಬಾರಿ ಬಸ್‌ ಸೌಲಭ್ಯ. ಇವು ತಾಲ್ಲೂಕಿನ ಮದಗಂದೂರು ಗ್ರಾಮದಲ್ಲಿ ಸಂಚರಿಸಿದಾಗ ಕಂಡು ಬರುವ ದೃಶ್ಯಗಳು. ಮುದಗಂದೂರು ಗ್ರಾ.ಪಂ. ಕೇಂದ್ರವಾಗಿದ್ದು, 1,200ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಆಗಲೂ ಸಮರ್ಪಕ ವಾಗಿ ಬರುವುದಿಲ್ಲ. ಕುಡಿಯುವ ನೀರನ್ನು ಪಕ್ಕದ ಬೊಮ್ಮನಹಳ್ಳಿಯಿಂದ ಎತ್ತಿನಗಾಡಿಯಲ್ಲಿ ಡ್ರಮ್‌ನಲ್ಲಿ ತರಲಾಗುತ್ತಿದೆ. ನೀರು ತರುವುದೇ ಒಂದು ಕೆಲಸವಾಗಿದೆ ಎನ್ನುತ್ತಾರೆ ಮಹೇಶ್‌.

ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಶೇ 50ರಷ್ಟು ಮಾತ್ರ ಖರ್ಚಾಗಿದೆ. ಪರಿಶಿಷ್ಟರ ಅನುದಾನವೂ ಪೂರ್ಣ ಬಳಕೆಯಾಗಿಲ್ಲ. ಗ್ರಾಮದ ಅಭಿವೃದ್ಧಿ ಅನುದಾನ ಬಳಸಿಕೊಳ್ಳುವುಲ್ಲಿ ಗ್ರಾ.ಪಂ. ವಿಫಲವಾಗಿದೆ. ಆದಾಯ ಹಾಗೂ ಅನುದಾನದಲ್ಲಿ ಶೇ 60 ರಷ್ಟು ವಿದ್ಯುತ್‌ ಬಿಲ್ ಪಾವತಿ ಹಾಗೂ ಶೇ 40ರಷ್ಟು ಸಿಬ್ಬಂದಿ ವೇತನಕ್ಕೆ ಹೋಗುತ್ತದೆ. ಸರ್ಕಾರದಿಂದ ಬರುವ ಹಣ ಅಭಿವೃದ್ಧಿಗೆ ಸಾಲುವುದಿಲ್ಲ ಎನ್ನುತ್ತಾರೆ ಪಿಡಿಒ ಹೊಂಬಯ್ಯ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಟರ್‌ಮ್ಯಾನ್‌ಗಳ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಿದೆ. ಅವರಿಗೆ ನೀಡುವ ವೇತನದ ಮೊತ್ತ ಕೂಡಾ ಅಧಿಕವಾಗಿದೆ. ಕೆಲವರನ್ನು ಕೈ ಬೀಡಬೇಕು ಎಂದರೂ ಆಡಳಿತ ಮಂಡಳಿ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ ಎಂದರು. ಮುಖ್ಯ ರಸ್ತೆಯ ಅಲ್ಲಲ್ಲಿ ತಿಪ್ಪೆಗಳಿದ್ದು, ವಿವಿಧೆಡೆ  ಪಾರ್ಥೇನಿಯಂ ಬೆಳೆದು ನಿಂತಿದೆ. ಜತೆಗೆ ಚರಂಡಿ ಹೂಳು ತುಂಬಿದ್ದು, ಅನೈರ್ಮಲ್ಯ ಎದ್ದು ಕಾಣುತ್ತಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಎಲ್ಲವೂ ಇದೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. 19 ಮಂದಿ ಸಿಬ್ಬಂದಿ ಹೊಂದಿರುವ ಆರೋಗ್ಯ ಕೇಂದ್ರದ ಸುತ್ತ ಮುತ್ತಲ್ಲಿನ ಗ್ರಾಮಗಳ ಆಶಾಕಿರಣವಾಗಿದೆ. ಆದರೆ, ಕೆಲವರು ಆಸ್ಪತ್ರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ದೂರುಗಳೂ ಇವೆ.

ಗ್ರಾಮದ ಬಳಿ ವಿಸ್ತಾರವಾರ ಕೆರೆ ಹೊಂದಿದೆ. ಅದಕ್ಕೆ ಪುರ್ಣ ಪ್ರಮಾಣದಲ್ಲಿ ನೀರು ತುಂಬಿ ಎಂಟು ವರ್ಷಗಳೇ ಕಳೆದಿವೆ. ಅದನ್ನು ಭರ್ತಿ ಮಾಡಿದರೆ ನಮ್ಮೆಲ್ಲ ಕಷ್ಟಗಳು ಪರಿಹಾರ ವಾಗುತ್ತದೆ. ಆದರೆ, ಜನಪ್ರತಿನಿಧಿಗಳ ಚುನಾವಣೆ ನಂತರ ಇತ್ತ ಸುಳಿಯುವುದಿಲ್ಲ ಎನ್ನುವುದು ಗ್ರಾಮಸ್ಥರ ದೂರು.

ಗ್ರಾಮಕ್ಕೆ ಬೆಳಿಗ್ಗೆ ಒಮ್ಮೆ ಬಸರಾಳು ಕಡೆಯಿಂದ, ಮಧ್ಯಾಹ್ನ ಒಮ್ಮೆ ಮಂಡ್ಯ ಕಡೆಯಿಂದ ಸರ್ಕಾರಿ ಬಸ್ ಬರುತ್ತದೆ. ಅದನ್ನು ಹೊರತುಪಡಿಸಿದರೆ ಖಾಸಗಿ ಆಟೊಗಳನ್ನೇ ಸಂಚಾರಕ್ಕೆ ಅವಲಂಬಿಸಿದ್ದಾರೆ. ಅವರೂ ಆಟೊ ತುಂಬುವವರೆಗೆ ಹೋಗುವುದಿಲ್ಲ. ಗ್ರಾಮದ ಬಹುತೇಕ ರಸ್ತೆಗಳು ಸರಿಯಾಗಿಲ್ಲ. ಕೆಲವು ಕಡೆ ಕಿರಿದಾಗಿವೆ. ಅದಲ್ಲಿ ಬಹುತೇಕ ರಸ್ತೆಗಳು ಜಲ್ಲಿಯನ್ನೂ ಕಂಡಿಲ್ಲ. ಮಳೆಗಾಲದಲ್ಲಿ ರಸ್ತೆಗಳು ಕೆರೆಯಂಗಳವಾಗುತ್ತವೆ ಎನ್ನುತ್ತಾರೆ ಗ್ರಾಮಸ್ಥರು.


ಗ್ರಾಮದ ಪ್ರೌಢಶಾಲೆಯಲ್ಲಿ 220 ವಿದ್ಯಾರ್ಥಿಗಳಿದ್ದು, ಇಂಗ್ಲಿಷ್ ಶಿಕ್ಷಕರ ಕೊರತೆ ಹೊಂದಿದೆ. 20 ಕಂಪ್ಯೂಟರ್‌ಗಳಿದ್ದು, ಶಿಕ್ಷಕರ ಕೊರತೆಯಿಂದ ಹಾಗೂ ಕೆಲವು ಕೆಟ್ಟಿರುವುದರಿಂದ ನಿರುಪಯುಕ್ತವಾಗಿ ಮೂಲೆ ಸೇರಿವೆ. ಶಾಲಾ ಆವರಣದಲ್ಲಿ ನಾಯಿ ಹಾವಳಿ ಹೆಚ್ಚಾಗಿದೆ.  ಗ್ರಾಮ ಹಳೆಯ ನೀರಿನ ಟ್ಯಾಂಕ್ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದೆ. ಅನಾಹುತ ಸಂಭವಿಸುವ ಮುನ್ನ ಗ್ರಾ,ಪಂ, ಅಧಿಕಾರಗಳು ಇತ್ತ ಕಡೆ ಗಮನ ಹರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT