ಸಂಗಮನಿಂದ ಯುವ ಸಮೂಹಕ್ಕೆ ‘ಸಂದೇಶ’..!

7

ಸಂಗಮನಿಂದ ಯುವ ಸಮೂಹಕ್ಕೆ ‘ಸಂದೇಶ’..!

Published:
Updated:
Deccan Herald

ಬಸವನಬಾಗೇವಾಡಿ:  ಪದವಿ ಶಿಕ್ಷಣದ ಬಳಿಕ ಉದ್ಯೋಗದ ಬೆನ್ನು ಹತ್ತದೇ; ಚಿಕ್ಕ ಉದ್ಯಮ ಸ್ಥಾಪಿಸಬೇಕು ಎಂಬ ಹಂಬಲದಿಂದ ಎರಡು ವರ್ಷದ ಹಿಂದೆ ಪಟ್ಟಣದ ಇಕ್ಬಾಲ್‌ ನಗರದ ಶಿವಲಿಂಗ ಸಂಗಮ ಆರಂಭಿಸಿದ ‘ಸಂದೇಶ ಗೃಹ ಕೈಗಾರಿಕೆ’ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಕಾಣುವ ಯುವ ಸಮೂಹಕ್ಕೆ ಇದೀಗ ಆದರ್ಶವಾಗಿದೆ.

ಶಿವಲಿಂಗ ಸಂಗಮ ಪದವಿ ಶಿಕ್ಷಣದ ಬಳಿಕ ಚಿಕ್ಕ ಉದ್ಯಮ ಸ್ಥಾಪಿಸಬೇಕು ಎಂಬ ಹಂಬಲ ಹೊಂದಿದ್ದರು. ಇದಕ್ಕಾಗಿ ಎಲ್ಲೆಡೆ ಸುತ್ತಿದ್ದರು. ಅಂತರ್ಜಾಲವನ್ನು ಜಾಲಾಡಿದ್ದರು. ಅಂತಿಮವಾಗಿ ಬೋಫೆಟ್‌ ಪೇಪರ್‌ ಪ್ಲೇಟ್‌ ತಯಾರಿಕಾ ಘಟಕ ಸ್ಥಾಪಿಸಬೇಕು ಎಂದು ನಿರ್ಧರಿಸಿ, ಕಾರ್ಯಾನುಷ್ಠಾನಗೊಳಿಸಿದ್ದರು.

ಆರಂಭದಲ್ಲಿ ₹ 15 ಲಕ್ಷ ಬಂಡವಾಳ ಹೂಡಿದ ಶಿವಲಿಂಗ, ಪ್ಲೇಟ್‌ ತಯಾರಿಕೆಗೆ ಅಗತ್ಯವಿರುವ ಪೇಪರ್‌, ಫಿಲ್ಮ್‌ ಪೇಪರ್‌, ಗಮ್‌ ಸೇರಿದಂತೆ ಇತರೆ ಕಚ್ಚಾ ಸಾಮಗ್ರಿಗಳನ್ನು ಹೈದರಾಬಾದ್‌ನಲ್ಲಿ ಖರೀದಿಸುತ್ತಾರೆ.

200 ಪೇಪರ್‌ ಪ್ಲೇಟ್‌ ಉತ್ಪಾದನೆಗೆ ಅಂದಾಜು ₹ 250 ಖರ್ಚಾಗುತ್ತದೆ. ಇವುಗಳ ಮಾರಾಟದಿಂದ ಕನಿಷ್ಠ ₹ 50 ಲಾಭ ಸಿಗುತ್ತದೆ. ನಿತ್ಯ 25 ಸಾವಿರದಷ್ಟು ಪೇಪರ್‌ ಪ್ಲೇಟ್‌ ತಯಾರಿಸುವುದರೊಂದಿಗೆ, ವರ್ಷಕ್ಕೆ ಅಂದಾಜು ₹ 8 ಲಕ್ಷದಷ್ಟು ಲಾಭ ಪಡೆಯುತ್ತಿದ್ದಾರೆ. ಹದಿಮೂರು ಜನರಿಗೆ ಉದ್ಯೋಗವನ್ನೂ ನೀಡಿದ್ದಾರೆ.

ರಾಜ್ಯದ ವಿವಿಧೆಡೆ ಸಾಮಾನ್ಯವಾಗಿ ತೆಳುವಾದ ಪೇಪರ್‌ ಪ್ಲೇಟ್‌ಗಳ ತಯಾರಿಕಾ ಘಟಕಗಳಿವೆ. ಬೋಫೆಟ್‌ ಪೇಪರ್‌ ಪ್ಲೇಟ್‌ (ದಪ್ಪನೆಯ ಪ್ಲೇಟ್‌) ಉತ್ಪಾದನಾ ಘಟಕಗಳು ಸಿಂಧನೂರ, ಬೀದರ್ ಹೊರತು ಪಡಿಸಿದರೆ ಬೇರೆ ಎಲ್ಲೂ ಕಂಡು ಬರುವುದಿಲ್ಲ ಎಂದು ಸಂದೇಶ ಗೃಹ ಕೈಗಾರಿಕಾ ಘಟಕದ ಮಾಲೀಕ ಶಿವಲಿಂಗ ಸಂಗಮ ‘ಪ್ರಜಾವಾಣಿ’ಗೆ ತಿಳಿಸಿದರು.

ಬ್ರೌನ್‌ ಕಲರ್‌ ಪೇಪರನ್ನು ಯಂತ್ರದ ಸಹಾಯದಿಂದ ಒಂದಷ್ಟು ದಪ್ಪನೆ ರಟ್ಟನ್ನಾಗಿಸಿ, ಅದಕ್ಕೆ ಫಿಲ್ಮ್‌ ಪೇಪರನ್ನು ಲೇಪಿಸುವ ಕಾರ್ಯ ನಡೆಯುತ್ತದೆ. ಹೀಗೆ ತಯಾರಾದ ರಟ್ಟನ್ನು ಚೌಕ ಆಕಾರದಲ್ಲಿ ಕತ್ತರಿಸಿದ ನಂತರ, ಪೇಪರ್‌ ಪ್ಲೇಟ್‌ ತಯಾರಿಕೆಯ ಯಂತ್ರವು ಬಿಸಿಯಾದ ನಂತರ ಪೇಪರ್ ಪ್ಲೇಟ್‌ಗಳು ಸಿದ್ಧಗೊಳ್ಳುತ್ತವೆ.

ವಿಜಯಪುರ, ಸಿಂದಗಿ, ತಾಳಿಕೋಟೆ, ನಿಡಗುಂದಿ ಆಲಮಟ್ಟಿಗೆ ಈ ಪ್ಲೇಟ್‌ಗಳು ಸರಬರಾಜಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಯ ವಿವಿಧೆಡೆಯಿಂದ ಬೇಡಿಕೆ ಬಂದಿದೆ. ಬೇರೆ ಜಿಲ್ಲೆಗಳಿಂದಲೂ ಬೇಡಿಕೆ ಬಂದರೆ ಪೂರೈಕೆ ಮಾಡಲು ಸಿದ್ಧರಿದ್ದೇವೆ ಎನ್ನುತ್ತಾರೆ ಶಿವಲಿಂಗ ಸಂಗಮ. ಸಂಪರ್ಕ ಸಂಖ್ಯೆ: 9742795832

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !