ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ; ನಾಲ್ವರು ಸಾವು

ಹುಣಸೂರು ಸಮೀಪ ಇಬ್ಬರು, ಮೈಸೂರು, ನಂಜನಗೂಡಿನಲ್ಲಿ ತಲಾ ಒಬ್ಬರು ಮೃತ
Last Updated 18 ನವೆಂಬರ್ 2019, 10:10 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಮೈಸೂರು ನಗರ, ನಂಜನಗೂಡು ತಾಲ್ಲೂಕಿನಲ್ಲಿ ತಲಾ ಒಬ್ಬರು ಹಾಗೂ ಹುಣಸೂರು ತಾಲ್ಲೂಕಿನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಬೈಕ್ ಸವಾರ ಸಾವು: ಬೋಗಾದಿ– ಗದ್ದಿಗೆ ಮುಖ್ಯರಸ್ತೆಯ ವಿದ್ಯುತ್ ಕಂಬಕ್ಕೆ ಬೈಕ್‌ ಸವಾರ, ಬೋಗಾದಿ ನಿವಾಸಿ ಚೇತನ್ (21) ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಮಹೇಶ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂಜನಗೂಡು ತಾಲ್ಲೂಕಿನ ಗೆದ್ದನಪುರ ಗ್ರಾಮದ ಬಳಿ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ, ಮೈಸೂರು ತಾಲ್ಲೂಕಿನ ಕೊಚನಹಳ್ಳಿ ಗ್ರಾಮದ ಶಿವಣ್ಣ (50) ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಶಿವಣ್ಣ ಗೆದ್ದನಪುರ ಮಾರ್ಗವಾಗಿ ಹಳ್ಳಿಕೆರೆ ಹುಂಡಿಗೆ ತೆರಳುತ್ತಿದ್ದಾಗ, ಹುಲ್ಲಹಳ್ಳಿಯಿಂದ ಕಬ್ಬು ತುಂಬಿದ ಲಾರಿಗೆ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

ಇಬ್ಬರ ಸಾವು: ಹುಣಸೂರು ತಾಲ್ಲೂಕಿನ ಚಿಲ್ಕುಂದ ಗ್ರಾಮದ ಬೋರೆಹೊಸಹಳ್ಳಿ ಗೇಟ್ ಬಳಿಯ ತಿರುವಿನಲ್ಲಿ ಟಿಪ್ಪರ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಮಿಳುನಾಡಿನ ಚೆನೈ ನಗರದ ವಿಲವಕಂ ಬಡಾವಣೆ ನಿವಾಸಿಗಳಾದ ಕಾರು ಚಾಲಕ ಕೆವಿನ್ ಜಾರ್ಜ್ (27) ರೀನಾ (25) ಮೃತಪಟ್ಟವರು. ಕ್ರಿಸ್ಟಿನನ ಹಾಗೂ ಮೇರಿನಾ ಅಗ್ನಿನ್ ಎಂಬುವರು ಗಾಯಗೊಂಡಿದ್ದಾರೆ.

ಇವರು ಕೊಡಗಿನ ಪ್ರವಾಸ ಮುಗಿಸಿ ಕಾರಿನಲ್ಲಿ ವಾಪಸ್ ತೆರಳುವಾಗ ಬೆಳಿಗ್ಗೆ 6.30ರ ಸುಮಾರಿನಲ್ಲಿ ಹುಣಸೂರು ಕಡೆಯಿಂದ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ.

‌ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಹುಣಸೂರು ಗ್ರಾಮಾಂತರ ಪಿಎಸ್ಐ ಶಿವಪ್ರಕಾಶ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರ್‌ಟಿಒ ವೃತ್ತಕ್ಕೆ ಕಾರು ಡಿಕ್ಕಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮೈಸೂರು ನಗರದ ಆರ್‌ಟಿಒ ವೃತ್ತದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು, ಗೋಡೆ ಧ್ವಂಸಗೊಂಡಿದೆ. ಕಾರಿನಲ್ಲಿದ್ದ ಏರ್‌ಬ್ಯಾಗ್ ತೆರೆದುಕೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಭರತ್‌ ಸಾಗರ್ ಎಂಬುವರು ರಾಮಸ್ವಾಮಿ ವೃತ್ತದ ಕಡೆಯಿಂದ ನಸುಕಿನಲ್ಲಿ ವೇಗವಾಗಿ ಬಂದಿದ್ದಾರೆ. ನಿಯಂತ್ರಣ ತಪ್ಪಿ ವೃತ್ತದ ಗೋಡೆಗೆ ಗುದ್ದಿದ್ದಾರೆ. ಕಾಂಪೌಂಡ್‌ ಸಂಪೂರ್ಣ ಧ್ವಂಸಗೊಂಡಿದೆ ಎಂದು ಕೆ.ಆರ್.ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT