ಭಾನುವಾರ, ನವೆಂಬರ್ 28, 2021
20 °C
‌ಮೂರು ಅಡಿ ಎತ್ತರಿಸಿದ ಕೆರೆ ಕೋಡಿ; ಸಮಸ್ಯೆಗೆ ಮೂಲ

ಹಂಪಾಪುರ: ಜಮೀನಿಗೆ ನುಗ್ಗಿದ ಹಿನ್ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಂಪಾಪುರ (ಮೈಸೂರು): ಹೋಬಳಿ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಬೆಳಗನಹಳ್ಳಿ ಕೆರೆ ಕೋಡಿ ಬಿದ್ದಿದೆ. ಕೋಡಿಯನ್ನು 3 ಅಡಿ ಎತ್ತರಿಸಿರುವುದರಿಂದ ಕೆರೆಯ ಹಿನ್ನೀರು 50ಕ್ಕೂ ಹೆಚ್ಚು ರೈತರ 60 ಎಕರೆ ಪ್ರದೇಶದಲ್ಲಿ ಆವರಿಸಿದೆ.

ಗ್ರಾಮದ ನಾಗೇಗೌಡ, ಸಣ್ಣಸ್ವಾಮಿ, ಕೃಷ್ಣೇಗೌಡ, ವಾಸು, ನಾಗೇಗೌಡ ಸೇರಿದಂತೆ ಗ್ರಾಮದ ಹಲವು ರೈತರ ಭತ್ತ ಮತ್ತು ಮೆಕ್ಕೆಜೋಳ ಜಲಾವೃತ ಗೊಂಡಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನೀರಾವರಿ ಇಲಾಖೆಯ ಎಇಇ ರಾಮೇಗೌಡ, ‘ಕೆರೆ ಕೋಡಿಯನ್ನು 3 ಅಡಿ ಎತ್ತರಿಸಿರುವುದರಿಂದ ಹಿನ್ನೀರು ಜಮೀನಿಗೆ ನುಗ್ಗಿದೆ. ಹಾನಿಯಾದ ಪ್ರದೇಶವನ್ನು ಶುಕ್ರವಾರ ಮತ್ತೆ ಪರಿಶೀಲಿಸಿ ತಹಶೀಲ್ದಾರ್‌ಗೆ ವರದಿ ನೀಡಲಾಗುವುದು’ ಎಂದರು.

‘ಕೆರೆ ಕೋಡಿಯನ್ನು ನಿಗದಿಗಿಂತ 2ರಿಂದ 3 ಅಡಿ ಎತ್ತರ ನಿರ್ಮಿಸಲಾಗಿದೆ. ಇದರಿಂದಾಗಿಯೇ ಬೆಳೆಗೆ ಹಾನಿಯಾಗಿದೆ. ಕೋಡಿಯನ್ನು ಇಲಾಖೆ ಗಮನಕ್ಕೆ ತಾರದೆ ನಿರ್ಮಿಸಲಾಗಿದೆ. ಈ ಬಗ್ಗೆ ಮಾಹಿತಿ ಕಲೆಹಾಕಲಾಗುವುದು’ ಎಂದು ತಿಳಿಸಿದರು.

‘ಕೆರೆಯ ಕೋಡಿಯನ್ನು ನೀರಾವರಿ ಇಲಾಖೆ ಎತ್ತರಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಯಾರು ಎತ್ತರಿಸಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತಿಲ್ಲ. ಕೆರೆಯಲ್ಲಿ ಮೀನುಗಳನ್ನು ಬಿಟ್ಟಿರುವ ಕಾರಣ ಮೀನುಗಾರರು ಕೋಡಿಯನ್ನು ಎತ್ತರಿಸಿದ್ದಾರೆ’ ಎಂದು ಕೆಲವರು ಹೇಳುತ್ತಾರೆ. ಈಗ ಆಗಿರುವ ಬೆಳೆ ಹಾನಿಗೆ ಪರಿಹಾರ ನೀಡುವವರು ಯಾರು’ ಎಂದು ರೈತ ನಾಗೇಗೌಡ ಪ್ರಶ್ನಿಸಿದ್ದಾರೆ.

‘ಬೆಳಗನಹಳ್ಳಿ ಕೆರೆ 50 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕೆರೆ ಗಡಿ ಗುರುತಿಸುವಂತೆ ತಾಲ್ಲೂಕು ಆಡಳಿತಕ್ಕೆ ಮೂರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ತಾರಕ ನೀರಾವರಿ ಇಲಾಖೆ ಜೆಇ ಗೌಸಿಯಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು