ಶುಕ್ರವಾರ, ಅಕ್ಟೋಬರ್ 18, 2019
20 °C
ಹುಣಸೂರು ನಗರದ ಬಡಾವಣೆಗಳಲ್ಲಿ ಹಬ್ಬದ ವಾತಾವರಣ

ಮನಸೂರೆಗೊಂಡ ಗ್ರಾಮೀಣ ದಸರಾ

Published:
Updated:
Prajavani

ಹುಣಸೂರು: ನಗರದ ರಂಗನಾಥ ಬಡಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ನಂದಿ ಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.

ಸಂಸದ ಪ್ರತಾಪಸಿಂಹ ಮತ್ತು ಅನರ್ಹ ಶಾಸಕ ಅಡಗೂರು ಎಚ್. ವಿಶ್ವನಾಥ್, ಜಿ.ಪಂ. ಉಪಾಧ್ಯಕ್ಷರಾದ ಗೌರಮ್ಮ ಸೋಮಶೇಖರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಗರದ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಬೆಳ್ಳಿ ಸಾರೋಟಿನಲ್ಲಿ ಕೂರಿಸಿದ ಚಾಮುಂಡೇಶ್ವರಿ ಮೂರ್ತಿ, ಜಾನಪದ ಕಲಾತಂಡಗಳು, ಪೂರ್ಣಕುಂಭ ಕಳಶ ಹೊತ್ತ ಮಹಿಳೆಯರು, ಸ್ತಬ್ಧ ಚಿತ್ರಗಳ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.

ಗಮನಸೆಳೆದ ಸ್ತಬ್ಧಚಿತ್ರಗಳು: ಸರ್ಕಾರಿ ಯೋಜನೆಗಳ ಮಾಹಿತಿಯ ಸ್ತಬ್ಧ ಚಿತ್ರಗಳು ಸಾರ್ವಜನಿಕರನ್ನು ಆಕರ್ಷಿಸಿದವು. ಆಯುಷ್ಮಾನ್ ಭಾರತ್ ಯೋಜನೆ ಕುರಿತು ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿ ಆರೋಗ್ಯ ಕಾರ್ಡ್ ಅಗತ್ಯ ಬಿಂಬಿಸಿದರು.

ನಗರಸಭೆ ವತಿಯಿಂದ ಸಿದ್ಧಪಡಿಸಿದ್ದ ಸ್ವಚ್ಛ ಭಾರತ್ ಅಭಿಯಾನ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಸ್ತಬ್ಧಚಿತ್ರಗಳು ಗಮನಸೆಳೆದವು.

ಅರಣ್ಯ ಇಲಾಖೆಯ ‘ಕಾಡಿನ ಸಂರಕ್ಷಣೆ’ ಮಾಹಿತಿಯುಳ್ಳ ಸ್ತಬ್ಧಚಿತ್ರ, ತಾಲ್ಲೂಕಿನ ಗಾವಡಗೆರೆ ಹೋಬಳಿ ಗೋವಿಂದ ನಾಯಕ ಸಾರಥ್ಯದಲ್ಲಿ ಡೊಳ್ಳು ಕುಳಿತ, ಪೂಜಾ ಕುಣಿತ, ವೀರಭದ್ರ ಕುಣಿತ, ಮಾಚಬಾಯನಹಳ್ಳಿ ಗ್ರಾಮದ ಕಲಾವಿದರ ಗೆಜ್ಜೆ ಕುಣಿತ, ಹೆಜ್ಜೆ ಕುಣಿತ, ಜೊತೆಗೆ ಕೀಲು ಕುದುರೆ, ಬೆದರು ಬೊಂಬೆಗಳು ಮೆರವಣಿಗೆಯಲ್ಲಿ ಆಕರ್ಷಿಸಿದವು.

ತಾಲ್ಲೂಕಿನ ಸರ್ಕಾರಿ ಇಲಾಖೆ ಸಿಬ್ಬಂದಿ ಬಿಳಿಪಂಚೆ, ಅಂಗಿ ತೊಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿದ್ದರು. ರೇಷ್ಮೆ ಸೀರೆಯುಟ್ಟ ಮಹಿಳೆಯರು ಮೆರವಣಿಗೆಗೆ ಮೆರುಗು ತಂದರು.

ಗ್ರಾಮೀಣ ದಸರಾ ಸಮಿತಿ ಅಧ್ಯಕ್ಷ ಜಾಬಗೆರೆ ರಮೇಶ್‌, ಹನಗೋಡು ಮಂಜುನಾಥ್‌, ತಹಶೀಲ್ದಾರ್ ಬಸವರಾಜ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪದ್ಮಮ್ಮ ಸೇರಿದಂತೆ ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯರು ಮತ್ತು ತಾಲ್ಲೂಕಿನ ಗಣ್ಯರು ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Post Comments (+)