ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ನಾಗರಾಜ್‌ ‘ಕರ್ನಾಟಕ ಕಲಾಶ್ರೀ’; ಸಂಗೀತ ನೃತ್ಯ ಅಕಾಡೆಮಿಯಿಂದ ಪ್ರಶಸ್ತಿ

Last Updated 25 ಆಗಸ್ಟ್ 2022, 16:30 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕೊಡಮಾಡುವ 2022–23ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗೆ ಕರ್ನಾಟಕ ಸಂಗೀತದ ಹಾಡುಗಾರಿಕೆ ವಿಭಾಗದಲ್ಲಿ ಮೈಸೂರಿನ ಸಿ.ಎ.ನಾಗರಾಜ್‌ ಭಾಜನವಾಗಿದ್ದಾರೆ.

ಈವರೆಗೆ ಅಸಂಖ್ಯಾತ ಶಿಷ್ಯ ವೃಂದಕ್ಕೆ ತಮ್ಮ ಅನುಭವ ಧಾರೆ ಎರೆದ ಹಾಗೂ ಮಾರ್ಗದರ್ಶನ ಮಾಡಿದ 66ನೇ ವಯಸ್ಸಿನ ವಿದ್ವಾನ್ ಅವರು. ಸಿ.ಕೆ.ಅನಂತರಾಮಯ್ಯ–ವಿದುಷಿ ಸಿ.ಎಸ್.ಸತ್ಯಲಕ್ಷ್ಮಿದಂಪತಿಯ ಪುತ್ರರಾದ ಅವರದು ಸಂಗೀತ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ. ಅದನ್ನು ಗುರುತಿಸಿ ಅಕಾಡೆಮಿಯು ಪ್ರಶಸ್ತಿಯ ಗರಿ ನೀಡಿದೆ. ಪ್ರಶಸ್ತಿಗಾಗಿ ಅವರು ಅರ್ಜಿ ಹಾಕಿರಲಿಲ್ಲ ಎನ್ನುವುದು ವಿಶೇಷ.

ಸಂಗೀತದ ಮನೆತನವಾದ್ದರಿಂದ ಚಿಕ್ಕ ವಯಸ್ಸಿನಿಂದಲೇ ಅವರನ್ನು ಹಾಡುಗಾರಿಕೆ ಆಕರ್ಷಿಸಿತ್ತು. ಸ್ಪಷ್ಟ ಗುರಿ ಹಾಗೂ ಗುರು ಇದ್ದಿದ್ದರಿಂದ ಅವರ ಸಂಗೀತದ ಹಾದಿಯು ಹಲವು ದಶಕಗಳನ್ನು ಕಂಡಿದೆ. ಸಾವಿರಾರು ಶಿಷ್ಯರನ್ನು ರೂಪಿಸಿದ್ದಾರೆ. ಪೋಷಕರು ಮತ್ತು ಗುರು ವೆಂಕಟನಾರಾಯಣ ಉಡುಪ ಶಾಸ್ತ್ರಿ ಅವರನ್ನು ನೆನೆಯುತ್ತಾರೆ.

ಚಿಲ್ಕುಂದದಿಂದ:ಚಿಲ್ಕುಂದದಲ್ಲಿ ಬಾಲ್ಯ ಕಳೆದ ಅವರು, ಶಾಲೆಯ ಸಮಯ ಬಿಟ್ಟರೆ ಉಳಿದ ಸಮಯದಲ್ಲಿ ಬಹುಪಾಲನ್ನು ಸಂಗೀತದ ಅಭ್ಯಾಸಕ್ಕೆ ಮೀಸಲಿಸುತ್ತಿದ್ದರು. ಹುಣಸೂರಿನಲ್ಲಿ ಪಿಯುಸಿ ಮುಗಿಸಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದರು. ಶಾರದಾವಿಲಾಸ ಕಾಲೇಜಿನಲ್ಲಿ ಬಿ.ಇಡಿ., ಬಳಿಕ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಸರ್ಕಾರಿ ನೌಕರಿ ಕಂಡುಕೊಂಡ ಅವರು, ಮಹಾರಾಣಿ ಕಾಲೇಜಿನಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.

ನಿವೃತ್ತಿಗೆ ಮುಂಚೆ ಕೆಲಸದ ಅವಧಿ ಮುಗಿದ ನಂತರ ಸಂಗೀತ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ನಿವೃತ್ತಿ ನಂತರ ಸಂಗೀತ ಪಾಠವನ್ನು ತಮ್ಮ ದಿನಚರಿಯನ್ನಾಗಿ ಮಾಡಿಕೊಂಡಿದ್ದಾರೆ. 17ನೇ ವಯಸ್ಸಿನಿಂದಲೇ ಸಂಗೀತ ಕಛೇರಿ ಕೊಡಲು ಶುರು ಮಾಡಿದವರು.ಸಂಗೀತವನ್ನೇ ಜೀವಾಳವಾಗಿಸಿಕೊಂಡವರು.

ಈಗಲೂ ಪಾಠ ಮಾಡುತ್ತಿದ್ದಾರೆ. ಸದ್ಯ ಅವರಲ್ಲಿ 125 ಮಂದಿ ಕಲಿಯುತ್ತಾರೆ. 15ರಿಂದ 20 ವರ್ಷಗಳಿಂದ ಕಲಿಯುತ್ತಿರುವವರು ಇದ್ದಾರೆ. ಅವರ ಬಳಿ ಕಲಿತರು ಕಛೇರಿ ಕೊಡುತ್ತಿದ್ದಾರೆ. ಗಾಯಕರಾಗಿ ಹೊರಹೊಮ್ಮಿದ್ದಾರೆ. ಸಂಗೀತ ನಿರ್ದೇಶಕರಾಗಿಯೂ ರೂಪಗೊಂಡಿದ್ದಾರೆ. ಅವರ ಪುತ್ರಿಯರಾದ ಲಕ್ಷ್ಮಿ ಹಾಗೂ ಇಂದು ನಾಗರಾಜ್‌ ನಾಡಿನ ಕರ್ನಾಟಕ ಸಂಗೀತ ಹಾಗೂ ಹಿನ್ನೆಲೆ ಗಾಯಕರಾಗಿಯೂ ಹೆಸರು ಮಾಡಿದ್ದಾರೆ. ಪುತ್ರ ಸಿ.ಎನ್.ಕೇಶವದತ್ತ್ ಕೊಳಲು–ಮೃದಂಗದಲ್ಲಿ ಸಾಧನೆ ಮಾಡಿದ್ದಾರೆ. ನಾಗರಾಜ್‌ ಅವರ ಪತ್ನಿ ರಾಧಾ ಕೂಡ ವಿದ್ವತ್‌ ಮಾಡಿದ್ದಾರೆ.

ಪ್ರಶಸ್ತಿ ಹಿಂದೆ ಹೋದವನಲ್ಲ:‘ನಾನು ಪ್ರಶಸ್ತಿ–ಸಮ್ಮಾನಗಳ ಹಿಂದೆ ಹೋದವನಲ್ಲ. ಆದರೆ, ಬಹಳಷ್ಟು ಸಂಘ–ಸಂಸ್ಥೆಗಳು ನೀಡಿದ ಗೌರವವನ್ನು ವಿನೀತಭಾವದಿಂದ ಸ್ವೀಕರಿಸಿದ್ದೇನೆ. ಈಗ ಸರ್ಕಾರವೇ ಗುರುತಿಸಿ ಪ್ರಶಸ್ತಿ ಕೊಟ್ಟಿದೆ. ನಾನು ಅರ್ಜಿ ಹಾಕಿಕೊಂಡು ಹೋದವನಲ್ಲ. ಹೀಗಾಗಿ, ಸಹಜವಾಗಿಯೇ ಖುಷಿಯಾಗಿದೆ’ ಎಂದು ನಾಗರಾಜ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕುವೆಂಪುನಗರದ ಐಶ್ವರ್ಯ ಬಡಾವಣೆ ನಿವಾಸಿಯಾಗಿರುವ ಅವರ ಬಳಿ, ಎಲ್ಲ ವಯಸ್ಸಿನವರೂ ಕಲಿಯುತ್ತಿದ್ದಾರೆ. ಹೊರ ರಾಜ್ಯದವರು ಹಾಗೂ ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ ಮೊದಲಾದ ವಿದೇಶಗಳಿಂದಲೂ ಆನ್‌ಲೈನ್‌ನಲ್ಲಿ ಕಲಿಯುತ್ತಿದ್ದಾರೆ.

‘ಸಂಗೀತಕ್ಕೆ ವಯಸ್ಸು, ಲಿಂಗ, ಭಾಷೆ ಮೊದಲಾದವುಗಳ ಹಂಗಿಲ್ಲ. ಮನಸ್ಸಿನ ಸಂತೋಷಕ್ಕೆ ಸಂಗೀತ ಕಲಿಯುವವರೂ ಇದ್ದಾರೆ. ಸಂಗೀತದಲ್ಲಿ ಮುಂದೆ ಬರಬೇಕಾದರೆ ಮುಖ್ಯವಾಗಿ ಪ್ರತಿಭೆ ಇರಬೇಕು. ಕಲಿಯುವ ಶ್ರದ್ಧೆ ಬೇಕು. ತಂದೆ–ತಾಯಿ ಪ್ರೋತ್ಸಾಹ ಚೆನ್ನಾಗಿರಬೇಕು. ಸರಿಯಾದ ಗುರು ಸಿಗಬೇಕು. ಆಗ, ಆ ವ್ಯಕ್ತಿಯು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬಹುದಾಗಿದೆ’ ಎಂಬ ಸಲಹೆ ನೀಡುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT