ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಜೀವಿಗಳ ಬದುಕು ಅಯೋಮಯ

ಪೌರ ಕಾರ್ಮಿಕರ ಬಗ್ಗೆ ಕಾಳಜಿ ಇರಲಿ
Last Updated 8 ಜನವರಿ 2019, 6:30 IST
ಅಕ್ಷರ ಗಾತ್ರ

ದಿನೇ ದಿನೇ ಜನಸಂಖ್ಯೆ ಬೆಳೆಯುತ್ತಾ ನಗರಗಳು ಬೃಹತ್‌ ನಗರಗಳಾಗುತ್ತಿವೆ. ಇದರಂತೆ ಕಸ, ಘನತ್ಯಾಜ್ಯ ಉತ್ಪಾದನೆ ಪ್ರಮಾಣವೂ ಹೆಚ್ಚುತ್ತಿದೆ. ಆದರೆ ಅದನ್ನು ಮನೆಗಳಿಂದ ಎತ್ತಿ ವಾಹನಗಳಲ್ಲಿ ಸಾಗಿಸಿ ಒಂದೆಡೆ ವಿಲೇವಾರಿ ಮಾಡುವ ಪೌರ ಕಾರ್ಮಿಕರು ನಗರದ ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ. ಆದರೆ, ಕೆಲಸದ ಒತ್ತಡ, ಸೌಲಭ್ಯಗಳ ಕೊರತೆ ನಡುವೆ ಅವರ ಬದುಕು ಅಯೋಮಯವಾಗಿದೆ.

ನೌಕರಿ ಭದ್ರತೆ ಇಲ್ಲ, ರಜೆ ಇಲ್ಲ, ಸಂಬಳಕ್ಕೆ ನಿಗದಿತ ಸಮಯವಿಲ್ಲ, ರಜೆ ಪಡೆಯದೇ ಹೆಚ್ಚು ಸಮಯ ಕೆಲಸ ಮಾಡಿದರೆ ಅದಕ್ಕೆ ಹೆಚ್ಚಿನ ಸಂಬಳವಿಲ್ಲ, ಆರೋಗ್ಯದ ರಕ್ಷಣೆಯೂ ಅಷ್ಟಕ್ಕಷ್ಟೇ, ರಜೆ ಮಾಡಿದರೆ ವೇತನಕ್ಕೆ ಕತ್ತರಿ ತಪ್ಪಿದ್ದಲ್ಲ ಎನ್ನುವ ಅವರ ಬದುಕು ಎಂಥಹದ್ದು ಎಂಬುದನ್ನು ಅವರಿಂದಲೇ ಕೇಳಿ ತಿಳಿಯಿರಿ.

‘ನಿತ್ಯ ಸೂರ್ಯ ಬೆಳಗುವ ಒಂದೂವರೆ ಗಂಟೆ ಮೊದಲೇ ಹಾಸಿಗೆಯಿಂದ ಎದ್ದು ರೆಡಿಯಾಗಿ ಮನೆಯಿಂದ ಹಾಜರಿ ಪಾಯಿಂಟ್‌ಗೆ ಬೆಳಿಗ್ಗೆ 6ರಿಂದ 630 ಗಂಟೆಯೊಳಗೆ ತಲುಪಬೇಕು. ಅಲ್ಲಿ ಹಾಜರಿ ಹಾಕಿ ಕೆಲಸ ಆರಂಭಿಸಬೇಕು, ತಡವಾದರೆ ಗೈರು. ಇದಕ್ಕಾಗಿ ಬಸ್‌ ಏರಲು ಹಲವರು ಗಡಿಬಿಡಿಯಿಂದ ಹೋದರೆ, ಕೆಲವರು ಸೈಕಲ್‌ನಲ್ಲಿ ಸಾಗುತ್ತೇವೆ. ನಗರ ಸ್ವಚ್ಛತೆಗೆ ಕೆಲಸ ಮಾಡಲು ಸಿದ್ಧವಿದ್ದೇವೆ. ಆದರೆ, ಅದಕ್ಕೆ ಅನುಕೂಲವಾದರೆ ಸಾಕು’ ಎನ್ನುತ್ತಾರೆ ಪುರುಷ ಹಾಗೂ ಮಹಿಳಾ ಕಾರ್ಮಿಕರು.

‘ನಗರದ ಹಲವು ಬಡಾವಣೆಗಳಲ್ಲಿ ವಾಸವಾಗಿದ್ದೇವೆ. ಮನೆಗಳಿಂದ ಕೆಲಸದ ಜಾಗಕ್ಕೆ ಬರುವುದು ಬೆಳಗಿನ ಜಾವ ಬಸ್ಸಿನ ವ್ಯವಸ್ಥೆ ಇಲ್ಲದ್ದರಿಂದ ಕಷ್ಟವಾಗುತ್ತಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಒಂದೇ ವಾರ್ಡಿನಿಂದ ಹತ್ತಾರು ಜನರನ್ನು ದೂರದ ಮತ್ತೊಂದು ವಾರ್ಡಿಗೆ ಕೆಲಸಕ್ಕೆ ಕಳುಹಿಸುತ್ತಿದ್ದಾರೆ’ ಆರೋಗ್ಯದ ಸಮಸ್ಯೆ ಇರುವವರು, ವಯಸ್ಸಾದ ಮಹಿಳೆಯರು– ಪುರುಷ ಕಾರ್ಮಿಕರು ಅಲ್ಲಿಗೆ ಹೋಗುವುದು ಹೇಗೆ’ ಎನ್ನುವ ಪ್ರಶ್ನೆ ಚಂದ್ರ, ಗಂಗಮ್ಮ, ಪಾರ್ವತಿ, ನಾಗರಾಜ ಸೇರಿದಂತೆ ಹಲವರದ್ದಾಗಿದೆ.

ಒಂದು ವಾರ್ಡಿನಿಂದ ಒಬ್ಬರು, ಇಬ್ಬರಂತೆ ವರ್ಗಾವಣೆ ಮಾಡಿದರೆ ಹೇಗಾದರೂ ಮಾಡಬಹುದು. ಸಾಮೂಹಿಕವಾಗಿ ವರ್ಗಾವಣೆ ಯಾವ ನ್ಯಾಯ? ಅಲ್ಲದೇ ನಸುಕಿನಲ್ಲಿ ಅವಸರದಿಂದ ಮನೆ ಬಿಟ್ಟು ಬಂದಿರುತ್ತೇವೆ. ಈ ಮೊದಲು ಬೆಳಗಿನ ತಿಂಡಿಗಾಗಿ ₹ 20 ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ನಿಂದ ಹಾಜರಿ ಪಾಯಿಂಟ್‌ಗೆ ತಿಂಡಿ ಬರುತ್ತಿದೆ. ವಾರ್ಡಿನ ಹಲವೆಡೆ ಕೆಲಸಕ್ಕೆ ಹೋದ ಕಾರ್ಮಿಕರು ಆ ಸಮಯಕ್ಕೆ ಮರಳಿ ಬರಲು ಆಗುವುದಿಲ್ಲ. ಅಲ್ಲದೇ ತಿಂಡಿ ಸರಿಯಿಲ್ಲ ಎಂದು ಕೆಲವರು ತಿನ್ನುತ್ತಿರಲಿಲ್ಲ. ಹೀಗಾಗಿ ತಿಂಡಿ ಉಳಿಯುತ್ತಿತ್ತು. ಜ. 6ರಿಂದ ಅದು ಬಂದಾಯಿತು. ಸರ್ಕಾರ ಮಾಡುವ ಯೋಜನೆಗಳಿಂದಲೂ ನಮಗೆ ಅನನುಕೂಲವಾದರೆ ಕೆಲಸ ಮಾಡುವುದು ಹೇಗೆ.

ಕೆಲಸಕ್ಕಾಗಿ ಬೆಳಗಿನ ಜಾವವೇ ಮನೆ ಬಿಡುವ ನಾವು ಮಧ್ಯಾಹ್ನ 1 ಗಂಟೆವರೆಗೆ ಕೆಲಸ, ಈಗ ಸ್ವಚ್ಛತಾ ಅಭಿಯಾನ ಶುರು ಎಂದು ಸಂಜೆ 4 ಗಂಟೆವರೆಗೆ ಕೆಲಸ ಹೀಗಾದರೆ ದುಡಿಯುವುದೇ ಹೊಟ್ಟೆಗಾಗಿ ಊಟವೇ ಇಲ್ಲವೆಂದರೆ ಹೇಗೆ ಎಂಬ ಪ್ರಶ್ನೆ ಕಾರ್ಮಿಕರದ್ದಾಗಿದೆ.

ಸೌಲಭ್ಯ ಕೊಡಿ: ಮೂರು ವರ್ಷಗಳ ಹಿಂದೆ ದೇಶದ 476 ನಗರಗಳಲ್ಲಿ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಮೈಸೂರಿಗೆ ಬಂದಿತು. ನಂತರ ಪ್ರವಾಸಿ ನಗರದಲ್ಲಿ ಶೌಚಾಲಯ ಸಮಸ್ಯೆ ಹಾಗೂ ಇತರೇ ಮಾನದಂಡದಿಂದಾಗಿ ಐದನೇ ಸ್ಥಾನಕ್ಕೆ ಕುಸಿಯಿತು. ಆದರೆ, ಕಸ ವಿಲೇವಾರಿ ಬಗ್ಗೆ ಮೆಚ್ಚುಗೆ ಇದೆ. ಇದನ್ನು ಅಚ್ಚುಕಟ್ಟಾಗಿ ಮಾಡುವ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಹಲವು ಬೇಡಿಕೆ ಈಡೇರಿಸುವಂತೆ ಮಾಡಿಕೊಂಡ ಮನವಿಗಳಿಗೆ ಬೆಲೆ ಸಿಗುತ್ತಿಲ್ಲ ಎನ್ನುತ್ತಾರೆ ಪೌರ ಕಾರ್ಮಿಕರ ಹಿರಿಯ ಉಪಾಧ್ಯಕ್ಷ ಕೆ.ರಾಜು.

ಸರ್ಕಾರಗಳು ಕಣ್ತೇರೆದು ನೋಡಲಿ

ಪೌರ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಇಎಸ್‌ಐ ಒಳಪಟ್ಟಿದ್ದರೂ ಆರೋಗ್ಯ ಸರಿಯಿಲ್ಲದಿದ್ದರೂ ಸಂಪೂರ್ಣ ಹಣ ದೊರೆಯುತ್ತಿಲ್ಲ. ಪಿಎಫ್‌ ಸರಿಯಾಗಿ ಖಾತೆಗೆ ಜಮೆಯಾಗುತ್ತಿಲ್ಲ. ಕಾಯಂ ಹಾಗೂ ಗುತ್ತಿಗೆ ನೌಕರರೆಂದು ಬೇರೆ ಬೇರೆ ಮಾಡಿ ಬಾಯಿ ತೆರೆಯದಂತೆ ಮಾಡಲಾಗುತ್ತಿದೆ ಎನ್ನುವ ಮೈಸೂರು ಮಹಾನಗರ ಪಾಲಿಕೆ ಕಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾಸಂಘದ ಮಾಜಿ ಅಧ್ಯಕ್ಷ ಮಂಚಯ್ಯ, ದಸರಾ ವೇಳೆ ಕೆಲಸ ನಿಲ್ಲಿಸಿದಾಗ ಮುಖ್ಯಮಂತ್ರಿಗಳು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ನಮ್ಮ ಸಮಸ್ಯೆ ಸಮಸ್ಯೆಗಳಾಗಿ ಬೆಳೆಯುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವಷ್ಟೇ ಅಲ್ಲ, ಕೇಂದ್ರ ಸರ್ಕಾರವೂ ಮೈಸೂರು ನಗರದ ಪೌರ ಕಾರ್ಮಿಕರತ್ತ ಹೊರಳಿ ನೋಡುವಂತೆ ಪ್ರತಿಭಟನೆ ಕೈಗೊಳ್ಳುವುದಾಗಿ ಪಾಲಿಕೆ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಮಕ್ಕಳಿಗೂ ವಿದ್ಯೆ ಸಿಗಲಿ

ಸ್ವಚ್ಛತೆ ಕೆಲಸ ಮಾಡಿ ನಾವು ಹಿಂಜರಿಯುತ್ತಿಲ್ಲ. ಆದರೆ, ವ್ಯವಸ್ಥೆಯಿಂದ ಬೇಜಾರಾಗಿದೆ. ಪಿ.ಮಣಿವಣ್ಣನ್ ಜಿಲ್ಲಾಧಿಕಾರಿಗಳಾಗಿದ್ದಾಗ ಪೌರಕಾರ್ಮಿಕರ ಮಕ್ಕಳಿಗೆ ಸರ್ಕಾರಿ ಶಾಲೆ– ಕಾಲೇಜಿನಲ್ಲಿ ಉಚಿತ ಶಿಕ್ಷಣ ನೀಡಲು ಹಾಗೂ ಅದಕ್ಕೆ ತಗಲುವ ವೆಚ್ಚವನ್ನು ಪಾಲಿಕೆಯೇ ಭರಿಸುವಂತೆ ಮಾಡಿ ಅನುಕೂಲ ಮಾಡಿದ್ದರು. ಆದರೆ, ಅದು ಎರಡು ವರ್ಷದಲ್ಲೇ ನಿಂತು ಹೋಯಿತು. ಹೀಗಾದರೆ ನಮ್ಮ ಮಕ್ಕಳು ಇದೇ ಕೆಲಸಕ್ಕೆ ಅನಿವಾರ್ಯವಾಗಿ ಜೋತು ಬೀಳಬೇಕಾಗಿದೆ. ಸೌಲಭ್ಯ ಪಡೆಯುವವರು ಮೇಲೆ ಏರಿದರೆ, ಸೌಲಭ್ಯ ವಂಚಿತ ನಾವು ಇಲ್ಲೇ ಉಳಿದಿದ್ದೇವೆ ಎಂದು ತಮ್ಮ ಸಂಕಟ ವಿವರಿಸುತ್ತಾರೆ ಸಂಘದ ಅಧ್ಯಕ್ಷ ಆರ್ಮುಗಂ, ಗೌರವ ಸಲಹೆಗಾರ ಎನ್. ಮಾರ್ ಹಾಗೂ ಮಾಜಿ ಅಧ್ಯಕ್ಷ ಮಂಚಯ್ಯ.

ಹಬ್ಬವೂ ಇಲ್ಲ; ಹೆಚ್ಚಿನ ಹಣವೂ ಇಲ್ಲ

ಮುಂದಿನ ವಾರವೇ ಸಂಕ್ರಾಂತಿ ಆದರೆ, ಸಂಬಳ ಯಾವಾಗ ಕೊಡುತ್ತಾರೆ ಎಂದು ದಾರಿ ಕಾಯುತ್ತಿದ್ದೇವೆ. ಕಾರ್ಮಿಕರಾದ ನಮಗೆ ಹಬ್ಬದ ದಿನ, ಮರುದಿನ ಹೆಚ್ಚಿನ ಕೆಲಸ. ಆದರೆ, ಅದಕ್ಕೆ ಭತ್ಯೆ ಇಲ್ಲ, ಕಾರ್ಮಿಕರ ಸಂಖ್ಯೆ ಕಡಿಮೆಯಿದ್ದು, ಇನ್ನಷ್ಟು ಜನರನ್ನು ನೇರ ನೇಮಕಾತಿ ಮಾಡಿಕೊಂಡು ಕೆಲಸದ ಭಾರ ಕಡಿಮೆ ಮಾಡಿ. ಅದರೊಂದಿಗೆ ಕಾಳಜಿಯಿಂದ ಸಾರ್ವಜನಿಕರ ಸೇವೆ ಮಾಡಲು ಅನುಕೂಲ ಮಾಡಿ ಕೊಡಿ ಎನ್ನುತ್ತಾರೆ ಸಂಘದ ಗೌರವಾಧ್ಯಕ್ಷ ನಾರಾಯಣ.

ಕಂಟೇನರ್‌ ಇದ್ದರೆ ಸಮಸ್ಯೆ ಏನು?

ನಗರದ ಹಲವೆಡೆ ಈ ಹಿಂದೆ ಇಟ್ಟಿದ್ದ ಕಸದ ತೊಟ್ಟಿ (ಕಂಟೇನರ್‌) ಗಳನ್ನು ಏಕಾಏಕಿ ತೆಗೆದು ಹಾಕಲಾಗಿದೆ. ಇದರಿಂದ ಆ ಜಾಗದಲ್ಲಿ ಕಸ ಚೆಲ್ಲುವುದು ನಿಂತಿಲ್ಲ. ದನಗಳು, ಬೀದಿನಾಯಿಗಳು, ಹಂದಿಗಳು ಕಸವನ್ನು ಚೆಲ್ಲಾಪಿಲ್ಲಿಯಾಗಿಸುತ್ತಿವೆ. ಇದರಿಂದ ಸುತ್ತಲಿನ ವಾತಾವರಣ ಮತ್ತಷ್ಟು ಗಲೀಜು ಆಗುತ್ತಿದೆ. ಕಂಟೇನರ್‌ ಇಟ್ಟರೆ ಅದರಲ್ಲಿ ಸುತ್ತಲಿನ ಜನ ಕಸ ಹಾಕಿದರೆ, ಬೆಳಿಗ್ಗೆ ಅದನ್ನು ವಿಲೇವಾರಿ ಮಾಡಿದರೆ ನಗರ ಸ್ವಚ್ಛವಾಗುತ್ತದೆ. ಇಲ್ಲವಾದರೆ ಜನ ಎಲ್ಲೆಂದರಲ್ಲಿ ಕಸ ಚೆಲ್ಲಿದರೆ ಅದರಿಂದ ಕಾರ್ಮಿಕರ ಕೆಲಸದ ಹೊರೆ ಹೆಚ್ಚುತ್ತದೆ. ಇದಕ್ಕೆ ಲಕ್ಷ್ಮಿಪುರಂ ಪೊಲೀಸ್ ಠಾಣೆ ಎದುರಿನ ಕಸದ ರಾಶಿಯೇ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT