ಮಂಗಳವಾರ, ಅಕ್ಟೋಬರ್ 27, 2020
25 °C
169 ಕಾಲೇಜುಗಳ ಸಂಯೋಜನೆ ಮುಂದುವರಿಕೆಗೆ ವಿವಿ ಅನುಮೋದನೆ

13 ಆನ್‌ಲೈನ್‌ ಕೋರ್ಸ್‌ಗೆ ಯುಜಿಸಿ ಅನುಮತಿ: ಮೈಸೂರು ವಿವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಈ ಶೈಕ್ಷಣಿಕ ವರ್ಷದಲ್ಲಿ 13 ವಿವಿಧ ಆನ್‌ಲೈನ್ ಕೋರ್ಸ್‌ಗಳ ಆರಂಭಕ್ಕೆ ಯುಜಿಸಿ ಅನುಮತಿ ನೀಡಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಹೇಳಿದರು.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ವಿ.ವಿ ಶಿಕ್ಷಣ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ 13 ಆನ್‌ಲೈನ್‌ ಕೋರ್ಸ್‌ ಗಳನ್ನು ಆರಂಭಿಸಲು ಅವಕಾಶ ಲಭಿಸಿದೆ. ಮುಂದಿನ ವರ್ಷಗಳಲ್ಲಿ ಈ ಸಂಖ್ಯೆಯನ್ನು ಬೇಡಿಕೆಗೆ ತಕ್ಕಂತೆ ಹೆಚ್ಚಿಸಲು ಯುಜಿಸಿಯ ಅನುಮತಿ ದೊರೆಯಲಿದೆ. ಯುಜಿಸಿ ಮಾರ್ಗಸೂಚಿಯಂತೆ ಆನ್‌ಲೈನ್‌ ಕೋರ್ಸ್‌ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 100ರ ಒಳಗಿರುವ ವಿವಿಗಳು ಆನ್‌ಲೈನ್ ಕೋರ್ಸ್ ಆರಂಭಿಸಬಹುದಾಗಿದೆ. ಮೈಸೂರು ವಿ.ವಿ ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌ನಲ್ಲಿ 27 ನೇ ಸ್ಥಾನದಲ್ಲಿದ್ದು ಆನ್‌ಲೈನ್ ಕೋರ್ಸ್ ಆರಂಭಕ್ಕೆ ಅರ್ಹತೆ ಹೊಂದಿದೆ ಎಂದು ತಿಳಿಸಿದರು.

2020-21ನೇ ಸಾಲಿಗೆ ಪ್ರಥಮ ದರ್ಜೆ ಕಾಲೇಜುಗಳಿಗೆ ಸಂಯೋಜನೆ ಮುಂದುವರಿಸುವ, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸ ಕೋರ್ಸ್, ಕಾಂಬಿನೇಷನ್‌ಗಳನ್ನು ಆರಂಭಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಕಾಲೇಜುಗಳ ಸಂಯೋಜನೆ ಮುಂದು ವರಿಕೆ: ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳಿಂದ ಒಟ್ಟು 169 ಪ್ರಥಮ ದರ್ಜೆ ಕಾಲೇಜುಗಳ ಸಂಯೋಜನೆ ಮುಂದುವರಿಕೆಗೆ ಸಭೆಯಲ್ಲಿ ಅನುಮತಿ ನೀಡಲಾಯಿತು.

ಮೈಸೂರು ಜಿಲ್ಲೆಯಲ್ಲಿ 23 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಸೇರಿದಂತೆ 78 ಕಾಲೇಜುಗಳು, ಚಾಮರಾಜನಗರ ಜಿಲ್ಲೆಯಲ್ಲಿ 8 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಸೇರಿದಂತ 17 ಕಾಲೇಜುಗಳು, ಮಂಡ್ಯ ಜಿಲ್ಲೆಯಲ್ಲಿ 32 ಕಾಲೇಜುಗಳು ಹಾಗೂ ಹಾಸನ ಜಿಲ್ಲೆಯಲ್ಲಿ 42 ಕಾಲೇಜುಗಳಿಗೆ ಸಂಯೋಜನೆ ನೀಡಲಾಗಿದೆ ಎಂದು ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಶ್ರೀಕಂಠಸ್ವಾಮಿ ಮಾಹಿತಿ ನೀಡಿದರು.

2020-21ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಐದು ಪ್ರಥಮ ದರ್ಜೆ ಕಾಲೇಜುಗಳನ್ನು ಆರಂಭಿಸಲು ಶಿಫಾರಸ್ಸು ಮಾಡಲಾಗಿದೆ. ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸ್ನಾತಕೋತ್ತರ ಕೋರ್ಸುಗಳ ಮುಂದುವರಿಕೆಗೆ ಸಂಯೋಜನೆ ನೀಡಲಾಗಿದೆ ಎಂದು ಹೇಳಿದರು.

ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಆನ್‌ಲೈನ್‌ ಕೋರ್ಸ್‌ಗಳ ಆರಂಭದಿಂದ ವಿವಿಯ ಘನತೆ ಮತ್ತಷ್ಟು ಹೆಚ್ಚಲಿದೆ. ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹೆಚ್ಚೆಚ್ಚು ಕೋರ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಅಳವಡಿಸುವ ಸಂಬಂಧ ಚಿಂತನೆ ನಡೆಸಬೇಕು ಎಂದು ಹೇಳಿದರು.

ಸಭೆಯಲ್ಲಿ ವಿವಿ ಪರೀಕ್ಷಾಂಗ ಕುಲಸಚಿವ ಡಾ.ಕೆ.ಎಂ.ಮಹದೇವನ್, ಪ್ರೊ.ರಾಮಚಂದ್ರ, ಪ್ರೊ.ಆರ್.ರಾಜಣ್ಣ, ಪ್ರೊ.ಕೃಷ್ಣಯ್ಯ, ಪ್ರೊ.ಆನಂದ್ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು