ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಕಟಾವಿಗೆ ಒತ್ತಾಯಿಸಿ ಧರಣಿ

ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಕೆ
Last Updated 16 ಅಕ್ಟೋಬರ್ 2019, 19:00 IST
ಅಕ್ಷರ ಗಾತ್ರ

ಮೈಸೂರು: ಬಣ್ಣಾರಿ ಅಮ್ಮನ್ ಹಾಗೂ ಮಹದೇಶ್ವರ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬನ್ನು ಕೂಡಲೇ ಕಟಾವು ಮಾಡಬೇಕು ಎಂದು ಆಗ್ರಹಿಸಿ ರೈತರು ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅನಾವಶ್ಯಕವಾಗಿ ಸಕ್ಕರೆ ಕಂಪನಿಗಳು ವಿಳಂಬ ಧೋರಣೆ ಅನುಸರಿಸುತ್ತಿವೆ. 15 ತಿಂಗಳಾದರೂ ಕಬ್ಬನ್ನು ಕಟಾವು ಮಾಡುತ್ತಿಲ್ಲ. ಇದರಿಂದ ರೈತರು ಅತೀವ ನಷ್ಟು ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬ್ಯಾಂಕುಗಳಲ್ಲಿರುವ ಸಾಲದ ಬಡ್ಡಿ ಏರಿಕೆ ಆಗುತ್ತಿದೆ. ಮತ್ತೊಂದೆಡೆ ಕೈಸಾಲಗಳು ಹೆಚ್ಚಾಗುತ್ತಿವೆ. ರೈತರು ಇಂದು ಕಬ್ಬು ಕಟಾವು ಆಗಬಹುದು, ನಾಳೆ ಆಗಬಹುದು ಎಂದು ಚಾತಕ ‍ಪಕ್ಷಿಗಳಂತೆ ಕಾಯುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಈ ಮಧ್ಯೆ ಈ ಎರಡೂ ಸಕ್ಕರೆ ಕಾರ್ಖಾನೆಯವರು ಬೇರೆ ಕಡೆಗಳಿಂದ ಕಬ್ಬನ್ನು ತಂದು ಅರೆಯುತ್ತಿದ್ದಾರೆ. ಇದು ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ತಿ.ನರಸೀಪುರ ಮತ್ತು ನಂಜನಗೂಡು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ 2018–19ನೇ ಸಾಲಿನ ಕಬ್ಬಿನ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ ರೈತರಿಗೆ ಹೆಚ್ಚುವರಿ ಹಣ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಏಷಿಯನ್ ಫೆಸಿಫಿಕ್ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಡಿಮೆ ಬೆಲೆಗೆ ಹಾಲಿನ ಉಪ ಉತ್ಪನ್ನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವಂತಹ ಸಣ್ಣ ಸಣ್ಣ ರೈತರ ಅಭಿವೃದ್ಧಿಗೆ ಮಾರಕವಾಗುವಂತಹ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸೋಮಶೇಖರ್ ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT