ಬುಧವಾರ, ನವೆಂಬರ್ 20, 2019
21 °C
ಹರದೂರು ಗ್ರಾಮದಲ್ಲಿ ಚರಂಡಿ, ರಸ್ತೆ ಕಾಮಗಾರಿ ಕಳಪೆ, ಗ್ರಾಮಸ್ಥರ ಆಕ್ರೋಶ

ಕಟ್ಟಿದ 3 ದಿನದಲ್ಲಿ ಬಿದ್ದ ಚರಂಡಿ ತಡೆಗೋಡೆ

Published:
Updated:
Prajavani

ಬೆಟ್ಟದಪುರ: ಸಮೀಪದ ಹರದೂರು ಗ್ರಾಮದಲ್ಲಿ ಚರಂಡಿ ಮತ್ತು ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಕಾಮಗಾರಿ ನಡೆಸಿದ ಮೂರು ದಿನಗಳಲ್ಲೇ ಚರಂಡಿಯ ತಡೆಗೋಡೆ ಬಿದ್ದುಹೋಗಿದೆ.

ಅಕ್ಟೋಬರ್‌ನಲ್ಲಿ ಶಾಸಕ ಕೆ.ಮಹದೇವ್ ಅವರು ₹60 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದರು. ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಆದರೆ, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ತಡೆಗೋಡೆ ಮುರಿದುಬಿದ್ದಿದೆ.

ರಸ್ತೆ ಹಾಗೂ ಚರಂಡಿ ನಿರ್ಮಿಸುವ ಕಾಮಗಾರಿಯನ್ನು ಗುತ್ತಿಗೆದಾರರು ಕಳೆದ 15 ದಿನಗಳ ಹಿಂದೆ ಪ್ರಾರಂಭಿಸಿದ್ದರು. ಕಚ್ಚಾ ರಸ್ತೆಯನ್ನು ಸಮತಟ್ಟು ಮಾಡಲಾಗಿತ್ತು. ಚರಂಡಿಯ ತಡೆಗೋಡೆಯನ್ನು ಮೂರು ದಿನಗಳ ಹಿಂದೆ ಕಟ್ಟಿದ್ದರು. ಈಗ ಅದು ಬಿದ್ದುಹೋಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಗ್ರಾಮದ ಮುಖಂಡ ಕೃಷ್ಣೇಗೌಡ ದೂರಿದರು.

ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಹೊಸದಾಗಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಗ್ರಾಮದ ಮುಖಂಡ ಮಹದೇವ್ ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)